ರವೆ ಮೈದಾದ ವೈಭವೀಕೃತ ಆವೃತ್ತಿಯೇ?

ಸಾಂದರ್ಭಿಕ ಚಿತ್ರ | Photo Credit : freepik.com
ಭಾರತೀಯ ಅಡುಗೆಯಲ್ಲಿ ರವೆ ಅಥವಾ ಸೆಮೊಲಿನಾವನ್ನು ಬಹಳ ಹಿಂದಿನಿಂದಲೂ ಮೈದಾಗೆ ಪರ್ಯಾಯವೆಂದು ಪರಿಗಣಿಸಲಾಗುತ್ತಿದೆ. ಭಾರತೀಯರು ತೂಕ ಇಳಿಸುವ ಆಹಾರಕ್ರಮದಲ್ಲಿ ಉಪ್ಪಿಟ್ಟು, ಇಡ್ಲಿ ಮೊದಲಾದವುಗಳನ್ನು ಬಳಸುತ್ತಾರೆ. ಆದರೆ ಎಂಜಿನಿಯರ್ ಕಮ್ ವೈದ್ಯೆಯಾಗಿರುವ ಆಕೃತಿ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ, “ಉಪ್ಪಿಟ್ಟು ಹೆಸರಲ್ಲಿ ರವೆ ತಿನ್ನುವವರು ತಕ್ಷಣವೇ ನಿಲ್ಲಿಸಬೇಕು” ಎಂದು ಹೇಳಿದ್ದಾರೆ. ರವೆಯನ್ನು ಮೈದಾಗೆ ಪರ್ಯಾಯ ಆಹಾರ ಎಂದು ಪರಿಗಣಿಸುವುದರ ಬಗ್ಗೆ ಅವರು ಎಚ್ಚರಿಕೆ ನೀಡಿದ್ದಾರೆ.
ರವೆಯು ಮೈದಾದ ವೈಭವೀಕೃತ ಆವೃತ್ತಿ!
“ರವೆಯು ಮೈದಾದ ವೈಭವೀಕೃತ ಆವೃತ್ತಿ. ರವೆ ಅಥವಾ ಉಪ್ಪಿಟ್ಟು ಮೈದಾವೇ ಆಗಿರುತ್ತದೆ. ಮೈದಾದಲ್ಲಿ ಸ್ವಲ್ಪ ಗ್ಲೈಸೆಮಿಕ್ ಇಂಡೆಕ್ಸ್ ಹೆಚ್ಚಿರುತ್ತದೆ ಎನ್ನುವುದನ್ನು ಬಿಟ್ಟರೆ, ಉಳಿದಂತೆ ಫೈಬರ್ ಅಂಶವೇ ಇಲ್ಲ. ಇದು ಸಂಸ್ಕರಿತ ಕಾರ್ಬೋಹೈಡ್ರೇಟ್ ಆಗಿರುತ್ತದೆ. ಮೈದಾಗಿಂತ ಸ್ವಲ್ಪ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇದೆ ಎಂದ ಮಾತ್ರಕ್ಕೆ ಅದು ಆರೋಗ್ಯಕರ ಆಯ್ಕೆ ಆಗುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಅಭಿಪ್ರಾಯ ವ್ಯಕ್ತಪಡಿಸಿರುವ ಪೌಷ್ಟಿಕ ತಜ್ಞೆ ಆಶ್ಲೇಷಾ ಜೋಶಿಯವರು, ಈ ಹೋಲಿಕೆಯಲ್ಲಿ ಎಲ್ಲವನ್ನೂ ಅತಿಯಾಗಿ ಸರಳೀಕರಿಸಲಾಗಿದೆ ಎಂದು ಹೇಳಿದ್ದಾರೆ.
“ರವೆ ಮತ್ತು ಮೈದಾ ಎರಡೂ ಗೋಧಿಯ ಉತ್ಪನ್ನಗಳೇ. ಆದರೆ ಅವು ವಿಭಿನ್ನವಾಗಿ ಸಂಸ್ಕರಿಸಲಾಗುತ್ತದೆ. ಮೈದಾವನ್ನು ಸಂಸ್ಕರಿತ ಎಂಡೋಸ್ಪರ್ಮ್ನಿಂದ (ಬೀಜಪೋಷಕ ಭಾಗ) ತಯಾರಿಸಲಾಗುತ್ತದೆ. ಇದರಲ್ಲಿ ಫೈಬರ್ ಅಂಶ ಹಾಗೂ ಸೂಕ್ಷ್ಮ ಪೋಷಕಾಂಶಗಳನ್ನು ತೆಗೆದುಹಾಕಲಾಗುತ್ತದೆ. ಆದರೆ ರವೆ ಸ್ವಲ್ಪ ಹೆಚ್ಚು ಪ್ರೋಟೀನ್ ಹಾಗೂ ರಚನೆಯನ್ನು ಉಳಿಸಿಕೊಂಡಿರುತ್ತದೆ” ಎಂದು ಆಶ್ಲೇಷಾ ವಿವರಿಸಿದ್ದಾರೆ.
ಹಾಗಿದ್ದರೂ ರವೆ ಸಂಪೂರ್ಣ ಧಾನ್ಯವಲ್ಲ. ಹಾಗೆಂದು ಮೈದಾದ ವೈಭವೀಕರಿಸಿದ ಆವೃತ್ತಿ ಎಂದು ಹೇಳಲೂ ಸಾಧ್ಯವಿಲ್ಲ. ರವೆ ಅತಿಯಾಗಿ ಪೌಷ್ಟಿಕಾಂಶ ಹೊಂದಿದೆ ಎನ್ನುವುದೂ ತಪ್ಪು. ಇವೆರಡರ ಮಧ್ಯದಲ್ಲಿ ರವೆ ಬರುತ್ತದೆ.
ಮೈದಾಗೆ ಹೋಲಿಸಿದರೆ ರವೆ ಕಡಿಮೆ ಸಂಸ್ಕರಿತ
“ಹಾಗಾದರೆ ಸೂಜಿ ಮೈದಾಗೆ ಆರೋಗ್ಯಕರ ಪರ್ಯಾಯವೇ?” ಎಂಬ ಪ್ರಶ್ನೆಗೆ, “ಮೈದಾಗೆ ಹೋಲಿಸಿದರೆ ರವೆ ಕಡಿಮೆ ಸಂಸ್ಕರಿತವಾಗಿದ್ದು ಹೆಚ್ಚು ತೃಪ್ತಿ ನೀಡುತ್ತದೆ. ಮುಖ್ಯವಾಗಿ ತರಕಾರಿಗಳು, ದ್ವಿದಳ ಧಾನ್ಯಗಳ ಜೊತೆಗೆ ಹಾಗೂ ಆರೋಗ್ಯಕರ ಕೊಬ್ಬುಗಳೊಂದಿಗೆ ಸೇವಿಸಿದರೆ ಉತ್ತಮ. ಆದರೆ ಉಪ್ಪಿಟ್ಟು ಮತ್ತು ಇಡ್ಲಿಯನ್ನು ಅತಿಯಾಗಿ ಸೇವಿಸುವುದು ಸೂಕ್ತವಲ್ಲ. ಸಿರಿಧಾನ್ಯಗಳು, ಓಟ್ಸ್ ಅಥವಾ ಸಂಪೂರ್ಣ ಗೋಧಿಗೆ ಇದನ್ನು ಪರ್ಯಾಯವೆಂದು ಪರಿಗಣಿಸಲು ಸಾಧ್ಯವಿಲ್ಲ” ಎಂದು ಆಶ್ಲೇಷಾ ಹೇಳಿದ್ದಾರೆ.
ರಕ್ತದಲ್ಲಿನ ಸಕ್ಕರೆ ಪ್ರಮಾಣದ ವಿಚಾರದಲ್ಲಿ ರವೆಗೆ ಮಿತಿಗಳಿವೆ ಎನ್ನುವುದನ್ನು ಆಶ್ಲೇಷಾ ಒಪ್ಪಿಕೊಳ್ಳುತ್ತಾರೆ.
“ರವೆಯಲ್ಲಿ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಇರುವುದಿಲ್ಲ. ಏಕೆಂದರೆ ಇದು ಸಂಸ್ಕರಿತ ಗೋಧಿಯಿಂದ ತಯಾರಿಸಲ್ಪಟ್ಟಿದ್ದು ಬೇಗನೇ ಜೀರ್ಣವಾಗುತ್ತದೆ. ಸಂಪೂರ್ಣ ಧಾನ್ಯಗಳಿಗೆ ಹೋಲಿಸಿದರೆ ಫೈಬರ್ ಅಂಶ ಕಡಿಮೆ. ಆದರೆ ತರಕಾರಿಗಳು, ಬೇಳೆಗಳು ಅಥವಾ ಮೊಸರಿನೊಂದಿಗೆ ಮಿಶ್ರಣ ಮಾಡಿ ಸೇವಿಸುವುದರಿಂದ ಅದು ಹೆಚ್ಚು ಆರೋಗ್ಯಕರವಾಗುತ್ತದೆ. ಜೊತೆಗೆ ಎಣ್ಣೆ ಮತ್ತು ತುಪ್ಪದಂತಹ ಕೊಬ್ಬುಗಳು ಗ್ಲೂಕೋಸ್ ಹೀರುವಿಕೆಯನ್ನು ನಿಧಾನಗೊಳಿಸುವ ಕಾರಣ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಕಾರಿಯಾಗಬಹುದು” ಎಂದು ಅವರು ಹೇಳಿದ್ದಾರೆ.
ನಿತ್ಯ ಸೇವನೆ ಸೂಕ್ತವಲ್ಲ
ಆದರೆ ನಿತ್ಯವೂ ದೊಡ್ಡ ಪ್ರಮಾಣದಲ್ಲಿ ಸೇವಿಸುವುದು ಉತ್ತಮವಲ್ಲ. ಸಂಸ್ಕರಿತ ಕಾರ್ಬೋಹೈಡ್ರೇಟ್ಗಳ ಭಾಗವಾಗಿ ಸೇವಿಸಿದರೆ ರವೆಯಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣದಲ್ಲಿ ಏರಿಳಿತ ಉಂಟಾಗಬಹುದು ಹಾಗೂ ಹಸಿವು ಹೆಚ್ಚಾಗಬಹುದು. ಜೊತೆಗೆ ಇದರಲ್ಲಿ ಗ್ಲೂಟೆನ್ ಇರುವುದರಿಂದ ಕೆಲವರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇದೆ. ಸಮತೋಲಿತ ಆಹಾರದ ಭಾಗವಾಗಿ ಅಪರೂಪಕ್ಕೊಮ್ಮೆ ಸೇವಿಸುವುದರಲ್ಲಿ ತಪ್ಪೇನಿಲ್ಲ.
ಕೃಪೆ: indianexpress







