ದೃಷ್ಟಿ ಚೆನ್ನಾಗಿದ್ದರೂ ಕಣ್ಣಿನ ತಪಾಸಣೆ ಅಗತ್ಯ; ನೇತ್ರತಜ್ಞರ ಎಚ್ಚರಿಕೆ

ಸಾಂದರ್ಭಿಕ ಚಿತ್ರ | Photo Credit : magnific
ನಿಯಮಿತ ಕಣ್ಣಿನ ತಪಾಸಣೆಯನ್ನು ಕೇವಲ ಕನ್ನಡಕದ ಅಗತ್ಯ ಪತ್ತೆಹಚ್ಚುವ ಪರೀಕ್ಷೆ ಎಂದು ನೋಡಬಾರದು. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಕಾಯಿಲೆ ಪತ್ತೆಹಚ್ಚಲು ತಪಾಸಣೆ ಸಹಾಯ ಮಾಡುತ್ತದೆ.
ಉತ್ತಮ ದೃಷ್ಟಿ ಇದ್ದರೆ ಕಣ್ಣುಗಳು ಆರೋಗ್ಯವಾಗಿವೆ ಎಂದು ಸಾಮಾನ್ಯವಾಗಿ ಭಾವಿಸಲಾಗುತ್ತದೆ. ಆದರೆ, ಕಣ್ಣಿನ ಸಮಸ್ಯೆಗಳು ಯಾವುದೇ ನೋವು, ಕೆಂಪಾಗುವಿಕೆ ಅಥವಾ ದೃಷ್ಟಿಯಲ್ಲಿ ಗಮನಾರ್ಹ ಬದಲಾವಣೆಗಳಿಲ್ಲದೆಯೇ ನಿಧಾನವಾಗಿ ಮತ್ತು ಗುಪ್ತವಾಗಿ ಉಂಟಾಗಬಹುದು ಎಂದು ನೇತ್ರತಜ್ಞ ರಿಷಿ ಭಾರದ್ವಾಜ್ ಹೇಳಿದ್ದಾರೆ. ಒಬ್ಬ ವ್ಯಕ್ತಿಗೆ ನೋಡಲು ತೊಂದರೆಯಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಕಣ್ಣಿಗೆ ಈಗಾಗಲೇ ಹಾನಿಯಾಗಿರಬಹುದು!
ನಿಯಮಿತ ಕಣ್ಣಿನ ತಪಾಸಣೆಯನ್ನು ಕೇವಲ ಕನ್ನಡಕದ ಅಗತ್ಯ ಪತ್ತೆಹಚ್ಚುವ ಪರೀಕ್ಷೆ ಎಂದು ನೋಡಬಾರದು. ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಕಾಯಿಲೆ ಪತ್ತೆಹಚ್ಚಲು ತಪಾಸಣೆ ಸಹಾಯ ಮಾಡುತ್ತದೆ. ಯಾವುದೇ ಸ್ಪಷ್ಟ ಮುನ್ಸೂಚನೆಗಳಿಲ್ಲದೆ ಉಂಟಾಗಬಹುದಾದ ಇಂತಹ ಕಾಯಿಲೆಗಳ ಬಗ್ಗೆ ಅವರು ವಿವರಿಸಿದ್ದಾರೆ. ಅವುಗಳ ವಿವರ ಇಲ್ಲಿದೆ.
*ಗ್ಲುಕೋಮಾ ಬೆಳವಣಿಗೆ
ಗ್ಲುಕೋಮಾ ಎನ್ನುವುದು ವರ್ಷಗಳ ಕಾಲ ಯಾರಿಗೂ ತಿಳಿಯದೆಯೇ ಉಳಿಯಬಹುದಾದ ಕಾಯಿಲೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಇದು ದೃಶ್ಯ ನರಕ್ಕೆ (ಆಪ್ಟಿಕ್ ನರ್ವ್) ಹಾನಿ ಮಾಡುತ್ತದೆ. ಈ ಪ್ರಕ್ರಿಯೆ ಸಾಮಾನ್ಯವಾಗಿ ನಿಧಾನವಾಗಿ ನಡೆಯುತ್ತದೆ ಮತ್ತು ಕಾಯಿಲೆಯ ಆರಂಭಿಕ ಹಂತದಲ್ಲಿ ಯಾವುದೇ ಸ್ಪಷ್ಟ ಲಕ್ಷಣಗಳು ಕಾಣಿಸದೇ ಇರಬಹುದು. ಕೇಂದ್ರ ದೃಷ್ಟಿ (ಸೆಂಟ್ರಲ್ ವಿಷನ್) ಸ್ಪಷ್ಟವಾಗಿದ್ದರೂ ಪಾರ್ಶ್ವ ದೃಷ್ಟಿ (ಪೆರಿಫೆರಲ್ ವಿಷನ್) ನಿಧಾನವಾಗಿ ಕ್ಷೀಣಿಸಬಹುದು. ಇದರಿಂದಾಗಿ ಕಣ್ಣಿಗೆ ಹಾನಿಯಾಗುತ್ತಿದೆ ಎಂಬ ಅರಿವಿಲ್ಲದೆಯೇ ವ್ಯಕ್ತಿಯು ತನ್ನ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸುತ್ತಾನೆ.
ಭಾರತದಲ್ಲಿ ಜನಸಂಖ್ಯೆಯನ್ನು ಆಧರಿಸಿ ನಡೆಸಲಾದ 13 ಅಧ್ಯಯನಗಳ ವ್ಯವಸ್ಥಿತ ವಿಮರ್ಶೆಯನ್ನು ಉಲ್ಲೇಖಿಸಿದ ನೇತ್ರತಜ್ಞರು, 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಗ್ಲುಕೋಮಾ ಇರುವ ಪ್ರಮಾಣ ಶೇ 3.23ರಷ್ಟಿದೆ. ಈ ಪ್ರಮಾಣ 2050ರ ವೇಳೆಗೆ ಶೇ 4.52ಕ್ಕೆ ಏರಬಹುದು ಎಂದು ತಿಳಿಸಿದ್ದಾರೆ.
“ಈ ಅಂಕಿಅಂಶಗಳು ಗ್ಲುಕೋಮಾವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವ ಮಹತ್ವವನ್ನು ಎತ್ತಿ ತೋರಿಸುತ್ತವೆ. ವಿಶೇಷವಾಗಿ ವಯಸ್ಸಾಗುತ್ತಿರುವ ಜನಸಂಖ್ಯೆಯ ಸಂದರ್ಭದಲ್ಲಿ, ಕಾಯಿಲೆಯನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು ಅತ್ಯಂತ ಮುಖ್ಯವಾಗಿದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
*ಮಧುಮೇಹ ರೆಟಿನೋಪತಿ ಹೇಗೆ ಬೆಳೆಯುತ್ತದೆ?
ಮಧುಮೇಹ ರೆಟಿನೋಪತಿ ಆರಂಭಿಕ ಹಂತಗಳಲ್ಲಿ ಗಮನಾರ್ಹ ಲಕ್ಷಣಗಳಿಲ್ಲದೆಯೂ ಮುಂದುವರಿಯಬಹುದು. ರಕ್ತದಲ್ಲಿ ನಿರಂತರವಾಗಿ ಹೆಚ್ಚಿರುವ ಸಕ್ಕರೆಯ ಮಟ್ಟವು ರೆಟಿನಾಕ್ಕೆ ರಕ್ತ ಪೂರೈಸುವ ಸಣ್ಣ ರಕ್ತನಾಳಗಳಿಗೆ ಹಾನಿ ಉಂಟುಮಾಡುತ್ತದೆ. ಇದರಿಂದ ಊತ, ರಕ್ತಸ್ರಾವ ಅಥವಾ ಅಸಹಜ ರಕ್ತನಾಳಗಳ ಬೆಳವಣಿಗೆಗೆ ಕಾರಣವಾಗಬಹುದು ಎಂದು ಭಾರದ್ವಾಜ್ ವಿವರಿಸಿದ್ದಾರೆ.
ಈ ಸ್ಥಿತಿಯನ್ನು ವಿಶೇಷವಾಗಿ ಕಳವಳಕಾರಿಯನ್ನಾಗಿ ಮಾಡುವ ಅಂಶವೆಂದರೆ, ಇಂತಹ ಬದಲಾವಣೆಗಳು ಬೆಳೆಯುತ್ತಿದ್ದರೂ ದೃಷ್ಟಿ ಸಾಮಾನ್ಯವಾಗಿಯೇ ಉಳಿಯಬಹುದು. ಮಧುಮೇಹ ಹೆಚ್ಚು ಸಾಮಾನ್ಯವಾಗುತ್ತಿರುವ ಹಿನ್ನೆಲೆಯಲ್ಲಿ, ಈ ಕಾಯಿಲೆಯೊಂದಿಗೆ ಬದುಕುತ್ತಿರುವವರಿಗೆ ನಿಯಮಿತ ರೆಟಿನಾ ತಪಾಸಣೆ ಕಣ್ಣಿನ ಆರೈಕೆಯ ಪ್ರಮುಖ ಭಾಗವಾಗಿದೆ. ಇದರಿಂದ ರೆಟಿನಾದಲ್ಲಿನ ಬದಲಾವಣೆಗಳನ್ನು ಪತ್ತೆಹಚ್ಚಿ, ದೃಷ್ಟಿ ಹೀನತೆಯ ಅಪಾಯವನ್ನು ಕಡಿಮೆ ಮಾಡಬಹುದು.
ಸಮಗ್ರ ಕಣ್ಣಿನ ಪರೀಕ್ಷೆಯ ಸಂದರ್ಭದಲ್ಲಿ, ವಯಸ್ಸು, ವೈದ್ಯಕೀಯ ಇತಿಹಾಸ ಮತ್ತು ಅಪಾಯಕಾರಿ ಅಂಶಗಳನ್ನು ಅವಲಂಬಿಸಿ ನೇತ್ರತಜ್ಞರು ಕಣ್ಣಿನ ಒತ್ತಡವನ್ನು ಅಳೆಯಬಹುದು. ದೃಶ್ಯ ನರ ಮತ್ತು ರೆಟಿನಾವನ್ನು ಪರೀಕ್ಷಿಸಬಹುದು. ಪಾರ್ಶ್ವ ದೃಷ್ಟಿಯನ್ನೂ ಪರೀಕ್ಷಿಸಬಹುದು. ಅಗತ್ಯವಿದ್ದಾಗ ರೆಟಿನಾದ ಚಿತ್ರಣ ಪರೀಕ್ಷೆ (ರೆಟಿನಲ್ ಇಮೇಜಿಂಗ್) ನಡೆಸಬಹುದು.
ಮಾತ್ರವಲ್ಲದೆ, ಮಧುಮೇಹದಿಂದ ಬಳಲುತ್ತಿರುವವರು ನಿಗದಿತ ಅವಧಿಗೆ ಅನುಗುಣವಾಗಿ ರೆಟಿನಾ ತಪಾಸಣೆ ಮಾಡಿಸಿಕೊಳ್ಳಬೇಕು. ರಕ್ತದಲ್ಲಿನ ಸಕ್ಕರೆ, ರಕ್ತದೊತ್ತಡ ಮತ್ತು ಕೊಲೆಸ್ಟರಾಲ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಗ್ಲುಕೋಮಾದ ಕುಟುಂಬದ ಇತಿಹಾಸ ಹೊಂದಿರುವವರು, ವಯಸ್ಸಾದವರು ಅಥವಾ ಇತರ ಅಪಾಯಕಾರಿ ಅಂಶಗಳನ್ನು ಹೊಂದಿರುವವರಿಗೆ ಆಗಾಗ್ಗೆ ಕಣ್ಣಿನ ತಪಾಸಣೆ ಅಗತ್ಯವಾಗಬಹುದು ಎಂದು ನೇತ್ರತಜ್ಞರು ಹೇಳಿದ್ದಾರೆ.
ದೃಷ್ಟಿಯಲ್ಲಿ ಬದಲಾವಣೆಗಳು ಕಾಣಿಸಿಕೊಂಡ ನಂತರವಷ್ಟೇ ಕಣ್ಣಿನ ಪರೀಕ್ಷೆಗೆ ಸಮಯ ನಿಗದಿಪಡಿಸುವುದು ಸಾಮಾನ್ಯ ತಪ್ಪುಗಳಲ್ಲಿ ಒಂದಾಗಿದೆ. ವರ್ಷಗಳವರೆಗೆ ಯಾವುದೇ ಲಕ್ಷಣಗಳಿಲ್ಲದೆ ಉಳಿಯಬಹುದಾದ ಕಾಯಿಲೆಗಳಿಗೆ ಈ ವಿಧಾನ ಸೂಕ್ತವಲ್ಲ. ನಿಯಮಿತ ಪರೀಕ್ಷೆಗಳು ಆರಂಭಿಕ ಬದಲಾವಣೆಗಳನ್ನು ಗುರುತಿಸಲು, ಕಣ್ಣಿನ ಆರೋಗ್ಯದ ಮೂಲ ಸ್ಥಿತಿಯನ್ನು ದಾಖಲಿಸಲು ಹಾಗೂ ಗಮನಾರ್ಹ ದೃಷ್ಟಿ ನಷ್ಟ ಸಂಭವಿಸುವ ಮೊದಲೇ ಚಿಕಿತ್ಸೆ ಅಥವಾ ಮೇಲ್ವಿಚಾರಣೆ ಆರಂಭಿಸಲು ಅವಕಾಶ ಒದಗಿಸುತ್ತವೆ.
ಓದುಗರಿಗೆ ಸೂಚನೆ: ಈ ಲೇಖನವನ್ನು ಮಾಧ್ಯಮ ಮೂಲಗಳಿಂದ ಮಾಹಿತಿಯ ಉದ್ದೇಶಕ್ಕಾಗಿ ಮಾತ್ರ ನೀಡಲಾಗಿದೆ. ಇದು ವೈದ್ಯರ ಸಲಹೆಗೆ ಪರ್ಯಾಯವಲ್ಲ. ದೃಷ್ಟಿ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗಾಗಿ ನಿಮ್ಮ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.






