20, 30 ಮತ್ತು 40ರ ವಯಸ್ಸಿನಲ್ಲಿ ಆರೋಗ್ಯ ತಪಾಸಣೆ; ಯಾವ ಪರೀಕ್ಷೆ ಯಾವಾಗ ಅಗತ್ಯ?

ಸಾಂದರ್ಭಿಕ ಚಿತ್ರ | Photo Credit : magnific
ಪ್ರತಿ ವರ್ಷ ಎಲ್ಲಾ ಪರೀಕ್ಷೆಗಳನ್ನು ನಡೆಸುವುದೂ ಸಾಧ್ಯವಿಲ್ಲ. ಹಾಗಾದರೆ ಆರೋಗ್ಯವಂತ ವಯಸ್ಕರು ನಿಜವಾಗಿಯೂ ತಮ್ಮ ಆರೋಗ್ಯವನ್ನು ಹೇಗೆ ಪರೀಕ್ಷಿಸಿಕೊಳ್ಳಬೇಕು? 30 ಅಥವಾ 40 ದಾಟಿದ ನಂತರ ಪರೀಕ್ಷೆಯೇ?
ಯುವಕರಾಗಿದ್ದಾಗ ಆರೋಗ್ಯವಂತರಾಗಿದ್ದರೆ ಮತ್ತು ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೆ ನಿಯಮಿತ ರಕ್ತ ಪರೀಕ್ಷೆಗಳು ಮತ್ತು ಆರೋಗ್ಯ ತಪಾಸಣೆಗಳು ಅಗತ್ಯವಿಲ್ಲ ಎಂದು ಊಹಿಸುವುದು ಸುಲಭ. ಆದರೆ ಇತ್ತೀಚೆಗೆ 20ರ ಯುವಕರೂ ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಾಸ್ತವದಲ್ಲಿ ಅಧಿಕ ರಕ್ತದೊತ್ತಡ, ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಪ್ರಮಾಣ ಮತ್ತು ಅಧಿಕ ಕೊಲೆಸ್ಟ್ರಾಲ್ ಸೇರಿದಂತೆ ಕೆಲವು ಪರಿಸ್ಥಿತಿಗಳು ಸ್ಪಷ್ಟ ಎಚ್ಚರಿಕೆ ಚಿಹ್ನೆಗಳಿಲ್ಲದೆ ಮೌನವಾಗಿ ಬೆಳೆಯಬಹುದು. ಹಾಗೆಂದು ಪ್ರತಿ ವರ್ಷ ಎಲ್ಲಾ ಪರೀಕ್ಷೆಗಳನ್ನು ನಡೆಸುವುದೂ ಸಾಧ್ಯವಿಲ್ಲ. ಹಾಗಾದರೆ ಆರೋಗ್ಯವಂತ ವಯಸ್ಕರು ನಿಜವಾಗಿಯೂ ತಮ್ಮ ಆರೋಗ್ಯವನ್ನು ಹೇಗೆ ಪರೀಕ್ಷಿಸಿಕೊಳ್ಳಬೇಕು? 30 ಅಥವಾ 40 ದಾಟಿದ ನಂತರ ಪರೀಕ್ಷೆಯೇ?
PSRI ಆಸ್ಪತ್ರೆಯ ತುರ್ತು ವಿಭಾಗದ ಮುಖ್ಯಸ್ಥ ಡಾ ಪ್ರಶಾಂತ್ ಸಿನ್ಹಾ ಅವರ ಪ್ರಕಾರ, ಎಲ್ಲರಿಗೂ ಒಂದೇ ಸಾರ್ವತ್ರಿಕ ಪರೀಕ್ಷಾ ವೇಳಾಪಟ್ಟಿ ಅನ್ವಯಿಸುವುದಿಲ್ಲ. ವ್ಯಕ್ತಿಗಳ ವಯಸ್ಸು, ಕುಟುಂಬದ ರೋಗ ಲಕ್ಷಣಗಳ ಇತಿಹಾಸ, ಜೀವನಶೈಲಿ, ಅಸ್ತಿತ್ವದಲ್ಲಿರುವ ಆರೋಗ್ಯ ಪರಿಸ್ಥಿತಿಗಳು ಮತ್ತು ಹಿಂದಿನ ಪರೀಕ್ಷಾ ಫಲಿತಾಂಶಗಳು ನಿಮಗೆ ಎಷ್ಟು ಬಾರಿ ಮೌಲ್ಯಮಾಪನ ಅಗತ್ಯವಿದೆ ಎನ್ನುವುದನ್ನು ನಿರ್ಧರಿಸುತ್ತವೆ.
20ರ ಹರೆಯದಲ್ಲಿ ಎಷ್ಟು ಬಾರಿ ಆರೋಗ್ಯ ತಪಾಸಣೆ ಮಾಡಬೇಕು?
ಅಪಾಯದ ಅಂಶಗಳು ಇಲ್ಲದೆ ಇದ್ದರೆ ಪ್ರತಿ 2-3 ವರ್ಷಗಳಿಗೊಮ್ಮೆ ನಿತ್ಯದ ಆರೋಗ್ಯ ವಿಶ್ಲೇಷಣೆ ಸಾಕಾಗುತ್ತದೆ. ಹಾಗೆಂದು ಉಳಿದ ಅವಧಿಯಲ್ಲಿ ಆರೋಗ್ಯವನ್ನು ಅಲಕ್ಷಿಸಬೇಕು ಎಂದಲ್ಲ. ರಕ್ತದೊತ್ತಡ, ತೂಕ ಮತ್ತು ಜೀವನಶೈಲಿ ಅಂಶಗಳನ್ನು ಪರಿಶೀಲಿಸುತ್ತಿರಬೇಕು. ಕುಟುಂಬದಲ್ಲಿ ಮಧುಮೇಹಿಗಳು ಅಥವಾ ಹೃದಯ ರೋಗಿಗಳಿದ್ದರೆ ಪರೀಕ್ಷೆ ಅಗತ್ಯ.
30ರ ನಂತರ ಏನು ಬದಲಾಗುತ್ತದೆ?
30ರ ನಂತರ ವೈಯಕ್ತಿಕ ಅಪಾಯ ಅವಲಂಬಿಸಿ ಸಾಮಾನ್ಯವಾಗಿ ಕನಿಷ್ಠ ಪ್ರತಿ 1-2 ವರ್ಷಗಳಿಗೊಮ್ಮೆ ರಕ್ತದೊತ್ತಡ, ತೂಕ, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ನಂತಹ ಪ್ರಮಖ ವಿಚಾರಗಳನ್ನು ಮೇಲ್ವಿಚಾರಣೆ ಮಾಡುವುದು ಅಗತ್ಯ. ಬೊಜ್ಜು, ಧೂಮಪಾನ, ಅಧಿಕ ರಕ್ತದೊತ್ತಡ ಅಥವಾ ಮಧುಮೇಹ/ಹೃದ್ರೋಗದ ಕುಟುಂಬ ಇತಿಹಾಸವಿದ್ದರೆ ಹೆಚ್ಚು ಆವರ್ತನದಲ್ಲಿ ಪರೀಕ್ಷಿಸಿಕೊಳ್ಳಬೇಕಾಗಿ ಬರಬಹುದು.
40ರ ನಂತರ ಪ್ರತಿ ವರ್ಷ ತಪಾಸಣೆ ಅಗತ್ಯವೆ?
40 ವರ್ಷ ತುಂಬಿದಾ ಕ್ಷಣ ಪ್ರತಿ ವರ್ಷ ರಕ್ತ ಪರೀಕ್ಷೆಗಳ ಸಮಗ್ರ ಪ್ಯಾಕೇಜ್ ಅಗತ್ಯವಿದೆ ಎಂದು ಅರ್ಥವಲ್ಲ. ವಯಸ್ಸಿಗೆ ಸಂಬಂಧಿಸಿದ ಅಪಾಯ ಮತ್ತು ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳು ಬೆಳೆಯುವ ಸಾಧ್ಯತೆ ನಿಯಮಿತವಾಗಿ ಮೌಲ್ಯಮಾಪನದ ಅಗತ್ಯವನ್ನು ತರುತ್ತದೆ. ಹೀಗಾಗಿ 40ರ ನಂತರ ವಾರ್ಷಿಕ ಅಥವಾ ಹೆಚ್ಚು ಬಾರಿ ಮೌಲ್ಯಮಾಪನ ಸೂಕ್ತವಾಗಬಹುದು.
ಯಾವ ಪರೀಕ್ಷೆಗಳಿಗೆ ಆದ್ಯತೆ ಕೊಡಬೇಕು?
• ತಪಾಸಣೆಗಳು ವಯಸ್ಸು, ವೈಯಕ್ತಿಕ ಮತ್ತು ಕುಟುಂಬದ ಆರೋಗ್ಯ ಇತಿಹಾಸ, ಜೀವನಶೈಲಿ ಮತ್ತು ಹಿಂದಿನ ಫಲಿತಾಂಶಗಳಿಂದ ಮಾರ್ಗದರ್ಶಿಸಬೇಕು.
• ಅಧಿಕ ರಕ್ತದೊತ್ತಡ ವರ್ಷಗಳವರೆಗೆ ಲಕ್ಷಣರಹಿತವಾಗಿ ಉಳಿಯುವುದರಿಂದ ನಿಯಮಿತವಾಗಿ ಪರಿಶೀಲಿಸಬೇಕು.
• ರಕ್ತದಲ್ಲಿನ ಸಕ್ಕರೆ ಪ್ರಮಾಣದ ತಪಾಸಣೆ ಆವರ್ತನವು ವಯಸ್ಸು ಮತ್ತು ಅಪಾಯಕಾರಿ ಅಂಶಗಳನ್ನು ಅವಲಂಬಿಸಿರುತ್ತದೆ. ಹಿಂದಿನ ಫಲಿತಾಂಶಗಳು ಅಸಹಜವಾಗಿದ್ದರೆ ಹೆಚ್ಚು ಪರೀಕ್ಷಿಸಲಾಗುತ್ತದೆ.
• ಕೊಲೆಸ್ಟ್ರಾಲ್ ಪರೀಕ್ಷೆಯ ಅಗತ್ಯ ಮತ್ತು ಆವರ್ತನವು ವೈಯಕ್ತಿಕ ಹೃದಯರಕ್ತನಾಳದ ಅಪಾಯವನ್ನು ಅವಲಂಬಿಸಿರುತ್ತದೆ.
• ತೂಕ ಮತ್ತು ಬಿಎಂಐ ಕಾಲಾನಂತರದಲ್ಲಿ ಆದ ಬದಲಾವಣೆಗಳಿಂದ ಚಯಾಪಚಯ ಅಪಾಯದ ಸೂಚನೆ ಕೊಡಬಹುದು.
• ಕ್ಯಾನ್ಸರ್ ತಪಾಸಣೆ: ಗರ್ಭಕಂಠ, ಸ್ತನ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ತಪಾಸಣೆಯಂತಹ ಪರೀಕ್ಷೆಗಳು ನಿರ್ದಿಷ್ಟ ವಯಸ್ಸು ಮತ್ತು ಅಪಾಯ ಆಧಾರಿತ ಶಿಫಾರಸು ನಂತರ ಮಾಡಲಾಗುತ್ತದೆ.
• ಲಸಿಕೆಗಳು: ಶಿಫಾರಸು ಮಾಡಲಾದ ಲಸಿಕೆಗಳನ್ನು ಹಾಕಿಸಿಕೊಳ್ಳುವುದೂ ಆರೋಗ್ಯ ರಕ್ಷಣೆಯ ಭಾಗವಾಗಿದೆ.
• ಕಣ್ಣು ಮತ್ತು ದಂತ ತಪಾಸಣೆ: ನಿಯಮಿತ ಕಣ್ಣು ಮತ್ತು ದಂತ ಪರೀಕ್ಷೆಗಳನ್ನು ನಿರ್ಲಕ್ಷಿಸಬಾರದು.
ಎಲ್ಲರಿಗೂ ಎಲ್ಲಾ ತಪಾಸಣಾ ಪ್ಯಾಕೇಜ್ ಅಗತ್ಯವಿಲ್ಲ
ಪ್ರತಿ ಆರೋಗ್ಯವಂತ ವ್ಯಕ್ತಿಗೂ ತಪಾಸಣೆಗಳ ಸಂಪೂರ್ಣ ಪ್ಯಾಕೇಜ್ ಅಗತ್ಯವಿಲ್ಲ. ಇಂತಹ ಪರೀಕ್ಷೆ ಕೆಲವೊಮ್ಮೆ ಅನಗತ್ಯ ಆತಂಕಕ್ಕೆ ಕಾರಣವಾಗಬಹುದು. ಸಾಮಾನ್ಯ ವಾರ್ಷಿಕ ತಪಾಸಣಾ ಪಟ್ಟಿ ಅನುಸರಿಸುವ ಬದಲು ವೈಯಕ್ತಿಕ ಅಪಾಯದ ಆಧಾರದ ಮೇಲೆ ತಡೆಗಟ್ಟುವ ತಪಾಸಣಾ ವೇಳಾಪಟ್ಟಿ ರಚಿಸಬಹುದು. ವ್ಯಕ್ತಿಯ ಅಪಾಯದ ಮಟ್ಟ ಅವಲಂಬಿಸಿ ವೈದ್ಯರು ಉತ್ತಮ ಪರೀಕ್ಷಾ ವೇಳಾಪಟ್ಟಿ ಕೊಡಬಹುದು.
ಕೃಪೆ: indianexpress.com






