ಜಾಗತಿಕವಾಗಿ ಶೇ. 32 ರಷ್ಟು ಜನರ ಸಾವಿಗೆ ಹೃದ್ರೋಗವೇ ಕಾರಣ: ವಿಶ್ವ ಆರೋಗ್ಯ ಸಂಸ್ಥೆ

ಸಾಂದರ್ಭಿಕ ಚಿತ್ರ | Photo Credit : magnific
ವಿಶ್ವದಾದ್ಯಂತ ಸಂಭವಿಸುವ ಸಾವುಗಳಿಗೆ ಹೃದಯಸಂಬಂಧಿ ಕಾಯಿಲೆಗಳು (CVDs) ಪ್ರಮುಖ ಕಾರಣವಾಗಿವೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, 2022 ರಲ್ಲಿ ಅಂದಾಜು 1.98 ಕೋಟಿ ಜನರು ಹೃದ್ರೋಗಗಳಿಂದ ಮೃತಪಟ್ಟಿದ್ದಾರೆ. ಇದು ಜಾಗತಿಕವಾಗಿ ಸಂಭವಿಸಿದ ಒಟ್ಟು ಸಾವುಗಳ ಪೈಕಿ ಶೇಕಡಾ 32 ರಷ್ಟಾಗಿದೆ. ಈ ಪೈಕಿ ಶೇಕಡಾ 85 ರಷ್ಟು ಸಾವುಗಳು ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯುವಿನಿಂದ (Stroke) ಸಂಭವಿಸಿವೆ.
ಹೃದ್ರೋಗದಿಂದ ಸಂಭವಿಸುವ ಸಾವುಗಳಲ್ಲಿ ಶೇಕಡಾ 75 ಕ್ಕೂ ಹೆಚ್ಚು ಸಾವುಗಳು ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲೇ ವರದಿಯಾಗುತ್ತಿವೆ. 2021 ರಲ್ಲಿ ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ 70 ವರ್ಷಕ್ಕಿಂತ ಕಡಿಮೆ ವಯಸ್ಸಿನ 1.8 ಕೋಟಿ ಜನರು ಅಕಾಲಿಕ ಸಾವಿಗೀಡಾಗಿದ್ದಾರೆ. ಇದರಲ್ಲಿ ಕನಿಷ್ಠ ಶೇಕಡಾ 38 ರಷ್ಟು ಸಾವುಗಳಿಗೆ ಹೃದ್ರೋಗಗಳೇ ಕಾರಣ ಎಂದು 2025 ಜುಲೈ 31 ರಂದು ನೀಡಿದ ವರದಿಯಲ್ಲಿ ಡಬ್ಲ್ಯೂಎಚ್ಒ ತಿಳಿಸಿದೆ.
ವೈದ್ಯಕೀಯ ನೆರವು ಯಾವಾಗ ಪಡೆಯಬೇಕು?
ಸಾಮಾನ್ಯವಾಗಿ ರಕ್ತನಾಳಗಳ ರೋಗಕ್ಕೆ ಸಂಬಂಧಿಸಿದಂತೆ ಯಾವುದೇ ಮುನ್ಸೂಚನೆ ಅಥವಾ ಲಕ್ಷಣಗಳು ಕಂಡುಬರುವುದಿಲ್ಲ. ನೇರವಾಗಿ ಸಂಭವಿಸುವ ಹೃದಯಾಘಾತ ಅಥವಾ ಪಾರ್ಶ್ವವಾಯುವೇ ಈ ಕಾಯಿಲೆಯ ಮೊದಲ ಲಕ್ಷಣವಾಗಿರುತ್ತದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಹೃದಯಾಘಾತದ ಮುಖ್ಯ ಲಕ್ಷಣಗಳು ಇಂತಿವೆ:
- ಎದೆಯ ಮಧ್ಯಭಾಗದಲ್ಲಿ ನೋವು ಅಥವಾ ಅಸ್ವಸ್ಥತೆ
- ಕೈಗಳು, ಎಡ ಹೆಗಲು, ಮೊಣಕೈ, ದವಡೆ ಅಥವಾ ಬೆನ್ನಿನಲ್ಲಿ ನೋವು ಮತ್ತು ಕಿರಿಕಿರಿ
- ಉಸಿರಾಟದ ತೊಂದರೆ ಅಥವಾ ಉಸಿರುಕಟ್ಟುವುದು
- ವಾಕರಿಕೆ ಅಥವಾ ವಾಂತಿ
- ತಲೆಸುತ್ತು ಅಥವಾ ಪ್ರಜ್ಞೆ ತಪ್ಪಿದಂತಾಗುವುದು
- ಚಳಿ ಬೆವರು ಮತ್ತು ಮುಖ ಬಿಳುಚಿಕೊಳ್ಳುವುದು
ಲಿಂಗಾಧಾರಿತ ವ್ಯತ್ಯಾಸಗಳು: ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಉಸಿರಾಟದ ತೊಂದರೆ, ವಾಕರಿಕೆ, ವಾಂತಿ ಹಾಗೂ ಬೆನ್ನು ಅಥವಾ ದವಡೆ ನೋವಿನ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತವೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ದೇಹದ ಯಾವುದಾದರೂ ಒಂದು ಬದಿಯ ಮುಖ, ಕೈ ಅಥವಾ ಕಾಲಿನಲ್ಲಿ ದಿಢೀರನೆ ನಿಶ್ಯಕ್ತಿ ಕಾಣಿಸಿಕೊಳ್ಳುವುದು ಪಾರ್ಶ್ವವಾಯುವಿನ ಮುಖ್ಯ ಲಕ್ಷಣವಾಗಿದೆ.
►ಇತರ ಲಕ್ಷಣಗಳು:
- ದೇಹದ ಯಾವುದಾದರೂ ಒಂದು ಬದಿಯ ಮುಖ, ಕೈ ಅಥವಾ ಕಾಲು ದಿಢೀರನೆ ಮರಗಟ್ಟುವುದು
- ಗೊಂದಲ, ಮಾತನಾಡಲು ಕಷ್ಟವಾಗುವುದು ಅಥವಾ ಇತರರು ಹೇಳುವುದನ್ನು ಅರ್ಥಮಾಡಿಕೊಳ್ಳಲು ತೊಂದರೆಯಾಗುವುದು
- ಒಂದು ಅಥವಾ ಎರಡೂ ಕಣ್ಣುಗಳ ದೃಷ್ಟಿಯಲ್ಲಿ ಸಮಸ್ಯೆ
- ನಡೆಯಲು ಕಷ್ಟವಾಗುವುದು, ತಲೆಸುತ್ತು, ಸಮತೋಲನ ಕಳೆದುಕೊಳ್ಳುವುದು ಅಥವಾ ದೇಹದ ನಿಯಂತ್ರಣ ತಪ್ಪುವುದು
- ಕಾರಣವಿಲ್ಲದೆ ತೀವ್ರ ತಲೆನೋವು ಬರುವುದು
- ಪ್ರಜ್ಞೆ ತಪ್ಪುವುದು ಅಥವಾ ಮೂರ್ಛೆ ಹೋಗುವುದು
ಈ ಲಕ್ಷಣಗಳು ಕಂಡುಬಂದ ತಕ್ಷಣ ಜನರು ವೈದ್ಯಕೀಯ ನೆರವು ಪಡೆಯಬೇಕು.
►ಸಂಧಿವಾತ ಹೃದ್ರೋಗ ಮತ್ತು ಸಂಧಿವಾತ ಜ್ವರದ ಲಕ್ಷಣಗಳು:
ಸಂಧಿವಾತ ಹೃದ್ರೋಗ: ಉಸಿರಾಟದ ತೊಂದರೆ, ಸುಸ್ತು, ಅಸಹಜ ಹೃದಯ ಬಡಿತ, ಎದೆನೋವು ಮತ್ತು ಮೂರ್ಛೆ ಹೋಗುವುದು.
ಸಂಧಿವಾತ ಜ್ವರ: ಜ್ವರ, ಕೀಲುಗಳಲ್ಲಿ ನೋವು ಮತ್ತು ಬಾವು , ವಾಕರಿಕೆ, ಹೊಟ್ಟೆನೋವು ಹಾಗೂ ವಾಂತಿ.
►ತಡೆಗಟ್ಟುವಿಕೆ ಮತ್ತು ನಿರ್ವಹಣೆಗೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿ ಸೂತ್ರಗಳು
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ನಡವಳಿಕೆ ಮತ್ತು ಪರಿಸರಕ್ಕೆ ಸಂಬಂಧಿಸಿದ ಅಪಾಯಕಾರಿ ಅಂಶಗಳನ್ನು ತಡೆಗಟ್ಟುವ ಮೂಲಕ ಬಹುತೇಕ ಹೃದಯಸಂಬಂಧಿ ಕಾಯಿಲೆಗಳನ್ನು ತಡೆಯಬಹುದು. ವ್ಯಕ್ತಿಗಳಲ್ಲಿ ನಡವಳಿಕೆಯ ಅಪಾಯಕಾರಿ ಅಂಶಗಳು ಪ್ರಮುಖವಾಗಿ ಹೀಗೆ ಕಂಡುಬರುತ್ತವೆ: ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಅಧಿಕ ಸಕ್ಕರೆ ಪ್ರಮಾಣ, ಅಧಿಕ ಕೊಬ್ಬಿನಂಶ (ಲಿಪಿಡ್ಸ್), ಅತಿಯಾದ ತೂಕ ಮತ್ತು ಬೊಜ್ಜು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಬೇಕಾದ ಪ್ರಮುಖ ಕ್ರಮಗಳು:
ತಂಬಾಕು ಬಳಕೆ ತ್ಯಜಿಸುವುದು: ಹೃದ್ರೋಗದ ಅಪಾಯವನ್ನು ಕಡಿಮೆ ಮಾಡಲು ಎಲ್ಲಾ ರೀತಿಯ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು.
ಆಹಾರದಲ್ಲಿ ಉಪ್ಪಿನ ಪ್ರಮಾಣ ಕಡಿಮೆ ಮಾಡುವುದು: ರಕ್ತದೊತ್ತಡ ಮತ್ತು ಕಾಯಿಲೆಯ ಅಪಾಯವನ್ನು ತಗ್ಗಿಸಲು ಉಪ್ಪಿನ ಬಳಕೆಯನ್ನು ಕಡಿಮೆ ಮಾಡುವುದು.
ಹೆಚ್ಚು ಹಣ್ಣು ಮತ್ತು ತರಕಾರಿ ಸೇವನೆ: ದೈನಂದಿನ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳ ಪ್ರಮಾಣವನ್ನು ಹೆಚ್ಚಿಸುವುದು.
ನಿಯಮಿತ ದೈಹಿಕ ಚಟುವಟಿಕೆ: ದಿನನಿತ್ಯ ನಿಯಮಿತವಾಗಿ ವ್ಯಾಯಾಮದಲ್ಲಿ ತೊಡಗಿಕೊಳ್ಳುವುದು.
ಮದ್ಯಪಾನದಿಂದ ದೂರವಿರುವುದು: ಮದ್ಯಪಾನದಂತಹ ಹಾನಿಕಾರಕ ಅಭ್ಯಾಸಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಅಥವಾ ದೂರವಿಡುವುದು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಆರೋಗ್ಯ ರಕ್ಷಣಾ ವ್ಯವಸ್ಥೆ ಮತ್ತು ಚಿಕಿತ್ಸೆಯಲ್ಲಿ ಕೈಗೊಳ್ಳಬೇಕಾದ ಪ್ರಮುಖ ಕ್ರಮಗಳು:
ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು: ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೇ ರಕ್ತದೊತ್ತಡ, ರಕ್ತದ ಸಕ್ಕರೆ ಪ್ರಮಾಣ ಮತ್ತು ಕೊಬ್ಬಿನಂಶವನ್ನು ತಪಾಸಣೆ ಮಾಡುವ ಮೂಲಕ ಕಾಯಿಲೆಯನ್ನು ಆರಂಭದಲ್ಲೇ ಪತ್ತೆಹಚ್ಚಿ ಅಗತ್ಯ ಸಲಹೆ ನೀಡುವುದು.
ಅಗತ್ಯ ಔಷಧಗಳ ಲಭ್ಯತೆ: ರಕ್ತದೊತ್ತಡ, ಮಧುಮೇಹ ಮತ್ತು ಅಧಿಕ ಕೊಬ್ಬಿನಂಶವನ್ನು ನಿರ್ವಹಿಸಲು ಅಗತ್ಯವಿರುವ ಆಸ್ಪಿರಿನ್, ಬೀಟಾ-ಬ್ಲಾಕರ್ಸ್, ಕ್ಯಾಲ್ಸಿಯಂ ಚಾನೆಲ್ ಬ್ಲಾಕರ್ಸ್, ಆಂಜಿಯೋಟೆನ್ಸಿನ್-ಕನ್ವರ್ಟಿಂಗ್ ಎಂಜೈಮ್ (ACE) ಇನ್ಹಿಬಿಟರ್ಸ್, ಡೈಯೂರೆಟಿಕ್ಸ್ ಹಾಗೂ ಸ್ಟಾಟಿನ್ಗಳಂತಹ ಔಷಧಗಳು ಸಿಗುವಂತೆ ಮಾಡುವುದು.
ಶಸ್ತ್ರಚಿಕಿತ್ಸೆ ಮತ್ತು ವೈದ್ಯಕೀಯ ಸೇವೆಗಳು: ಅಗತ್ಯವಿದ್ದಾಗ ಶಸ್ತ್ರಚಿಕಿತ್ಸೆಗಳನ್ನು (ಕೊರೊನರಿ ಆರ್ಟರಿ ಬೈಪಾಸ್ , ಬಲೂನ್ ಆಂಜಿಯೋಪ್ಲಾಸ್ಟಿ, ಹಾರ್ಟ್ ವಾಲ್ವ್ ರಿಪೇರಿ ಮತ್ತು ಮರುಜೋಡಣೆ, ಹೃದಯ ಕಸಿ, ಕೃತಕ ಹೃದಯ ಶಸ್ತ್ರಚಿಕಿತ್ಸೆ) ಮತ್ತು ವೈದ್ಯಕೀಯ ಉಪಕರಣಗಳನ್ನು (ಪೇಸ್ಮೇಕರ್, ಪ್ರೊಸ್ಟೆಟಿಕ್ ವಾಲ್ವ್ಗಳು, ಹೃದಯದ ತೂತು ಮುಚ್ಚುವ ಪ್ಯಾಚ್ಗಳು) ಒದಗಿಸುವುದು.
ಓದುಗರ ಗಮನಕ್ಕೆ: ಈ ಲೇಖನವು ಕೇವಲ ಮಾಹಿತಿಗಾಗಿ ಮಾತ್ರವಾಗಿದ್ದು, ವೃತ್ತಿಪರ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದಲ್ಲಿ ಯಾವಾಗಲೂ ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ.






