Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ನಮ್ಮ ಆಹಾರ ಎಷ್ಟು ಸುರಕ್ಷಿತ ?

ನಮ್ಮ ಆಹಾರ ಎಷ್ಟು ಸುರಕ್ಷಿತ ?

ಡಾ. ಮುರಲೀ ಮೋಹನ್ ಚೂಂತಾರುಡಾ. ಮುರಲೀ ಮೋಹನ್ ಚೂಂತಾರು16 Oct 2023 9:19 AM IST
share
ನಮ್ಮ ಆಹಾರ ಎಷ್ಟು ಸುರಕ್ಷಿತ ?
ಪ್ರತೀ ವರ್ಷ ಅಕ್ಟೋಬರ್-16 ರಂದು ವಿಶ್ವ ಆಹಾರ ದಿನ ಎಂದು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. 1945 ಅಕ್ಟೋಬರ್-16 ರಂದು ಆಹಾರ ಮತ್ತು ಕೃಷಿ ಸಂಸ್ಥೆಯನ್ನು ಅಮೆರಿಕದಲ್ಲಿ ಆರಂಭಗೊಳಿಸಲಾಯಿತು. ಆಹಾರದ ರಕ್ಷಣೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅಕ್ಟೋಬರ್ 16 ರಂದು ವಿಶ್ವ ಆಹಾರ ದಿನ ಎಂದು ಆಚರಿಸಿ ಜನರಲ್ಲಿ ನಾವು ತಿನ್ನುವ ಆಹಾರದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ.

ಒಬ್ಬ ವ್ಯಕ್ತಿಯ ‘‘ದೈಹಿಕ, ಮಾನಸಿಕ, ಬೌದ್ಧಿಕ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಮತೋಲಿತ, ಸುರಕ್ಷಿತ ಆಹಾರ ಅತೀ ಅಗತ್ಯ. ಬಹುತೇಕ ರೋಗಗಳನ್ನು ನಮ್ಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳನ್ನು ಸರಿಪಡಿಸಿ ಪ್ರಾರಂಭಿಕ ಹಂತದಲ್ಲಿಯೇ ತಡೆಯಬಹುದು. ಉತ್ತಮ ದೈಹಿಕ ವ್ಯಾಯಾಮ ಮತ್ತು ವಿಟಮಿನ್, ಪ್ರೊಟೀನ್, ಲವಣಾಂಶ, ಪೋಷಕಾಂಶ, ಶರ್ಕದ ಪಿಷ್ಠ ಮತ್ತು ನಾರುಯುಕ್ತ ಸಮತೋಲಿತ ಆಹಾರದಿಂದ ನೂರು ಕಾಲ ಆರೋಗ್ಯವಂತರಾಗಿ ಬಾಳಬಹುದು ಎಂದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಆದರೂ ಹಾಳು ಮೂಳು ಆಹಾರಗಳಾದ ಬರ್ಗರ್, ಫಿಜ್ಹಾ, ಕೋಕ್, ಪೆಪ್ಸಿ, ಕೇಕ್, ಬಿಸ್ಕತ್ತ್, ಕುರುಕುರೆ ಮುಂತಾದ ಅಸುರಕ್ಷಿತ ಆಹಾರಗಳನ್ನು ಸೇವಿಸಿ ದೇಹವನ್ನು ಜಳ್ಳಾಗಿಸಿ ಖಾಯಿಲೆಯ ಹಂದರವಾಗಿ ಮಾಡಿಕೊಳ್ಳುವುದು ಈಗಿನ ದುರಂತವೇ ಸರಿ.

ಹೆಚ್ಚುತ್ತಿರುವ ಕೈಗಾರಿಕೀರಣ, ಜಾಗತೀಕರಣ ಮತ್ತು ಅಭಿವೃದ್ಧಿಯ ನೆಪದಲ್ಲಿ ಆಹಾರ ಸರಪಳಿಯಲ್ಲಿ ವಿಪರೀತವಾದ ವ್ಯತ್ಯಾಸವುಂಟಾಗಿ ಸುರಕ್ಷಿತ ಆಹಾರ ಎಲ್ಲರಿಗೂ ಸಿಗದಿರುವುದೇ ಬಹುದೊಡ್ಡ ವಿಪರ್ಯಾಸ ಮತ್ತು ಕಳವಳಕಾರಿ ವಿಚಾರವಾಗಿದೆ. ಜಗತ್ತಿನಾದ್ಯಂತ ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸುರಕ್ಷಿತ ಆಹಾರದ ಕೊರತೆಯಿಂದಾಗಿ ಪ್ರತಿವರ್ಷ ಎರಡರಿಂದ ಮೂರು ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ವಿಷಕಾರಕ ವಿಷಾಣುಗಳು ಮತ್ತು ಕ್ಯಾನ್ಸರ್‌ಕಾರಕ ರಾಸಾಯನಿಕಗಳ ಜೊತೆಗೆ ರೋಗಕಾರಕ ಬ್ಯಾಕ್ಟೀರಿಯಾಗಳು, ರೋಗಾಣುಗಳು ಮತ್ತು ಪರಾವಲಂಬಿ ಜೀವಾಣುಗಳು ಸೇರಿಕೊಂಡು ಆಹಾರದ ಮುಖಾಂತರ ದೇಹಕ್ಕೆ ಸೇರಿ ಹೊಟ್ಟೆನೋವು, ವಾಂತಿ, ಭೇದಿ, ಅತಿಸಾರದಂತಹ ಸಾಮಾನ್ಯರೋಗಗಳಿಂದ ಹಿಡಿದು ಕ್ಯಾನ್ಸರ್ ಹೃದಯ ಕಾಯಿಲೆಯಂತಹ ಗಂಭೀರವಾದ ಕಾಯಿಲೆಗಳಿಗೆ ನಾಂದಿ ಹಾಡುತ್ತಿದೆ ಎಂದರೂ ತಪ್ಪಲ್ಲ. ವಿಷಪೂರಿತ ಅಸುರಕ್ಷಿತ ಆಹಾರ ಸೇವನೆಯಿಂದಾಗಿ ಕಾಲೆರಾ, ಟೈಫಾಯ್ಡ್, ಜಾಂಡಿಸ್, ಹೆಪಟೈಟಿಸ್ ಮುಂತಾದ ರೋಗಗಳು ಬೇಗನೆ ಹರಡುತ್ತದೆ. ವಾಂತಿ ಭೇದಿ ಮತ್ತು ಅತಿಸಾರ ಸಾಮಾನ್ಯ ಕಾಯಿಲೆಯಾಗಿದ್ದರೂ ವಿಪರೀತ ವಿರ್ಜಲೀಕರಣದಿಂದಾಗಿ ಗಂಭೀರವಾದ ಅನಾರೋಗ್ಯಕ್ಕೆ ನಾಂದಿ ಹಾಡಿ ಸಾವಿಗೆ ಮುನ್ನುಡಿ ಬರೆದದ್ದೂ ಇದೆ.

ಯಾವ ರೀತಿಯ ಆಹಾರ ಸೇವಿಸಬೇಕು?

ಕೆಲವೊಂದು ಆಹಾರ ಪದಾರ್ಥಗಳನ್ನು ಕಂಡಾಗ ಮನಸ್ಸು ಚಂಚಲವಾಗಿ ಆರೋಗ್ಯವನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಬಾಯಿ ರುಚಿಯ ಚಪಲಕ್ಕಾಗಿ ಕೇವಲ ಉಪ್ಪಿನಾಂಶ ಕೊಬ್ಬು ಕ್ಯಾಲರಿಗಳಿಂದ ಕೂಡಿದ ಮತ್ತು ವಿಟಮಿನ್, ಪ್ರೊಟೀನ್ ಪೋಷಕಾಂಶ, ಖನಿಜಾಂಶ ಮತ್ತು ನಾರುಗಳಿಲ್ಲದ ಆಹಾರವನ್ನು ‘‘ಜಂಕ್‌ಫುಡ್’’ ಎನ್ನುತ್ತೇವೆ. ಈ ರೀತಿಯ ಜಂಕ್ ಆಹಾರಕ್ಕೆ ಹೆಚ್ಚು ಕಾಲ ಕೆಡದಂತೆ ಶೇಖರಿಸಲು ರಾಸಾಯನಿಕಗಳು ಮತ್ತು ಆಕರ್ಷಕ ಬಣ್ಣ ಬರುವ ರಾಸಾಯನಿಕಗಳನ್ನು ಸೇರಿಸುತ್ತಾರೆ. ಈ ರೀತಿ ಆಹಾರಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹಾಳು ಮಾಡಿ ಕಿಡ್ನಿ, ಪಿತ್ತಜನಕಾಂಗಗಳನ್ನು ಹಾಳು ಮಾಡಿ, ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಳುಗೆಡವಿ, ರೋಗನಿರೋಧಕ ಶಕ್ತಿಯನ್ನು ಕುಂದುಗೊಳಿಸಿ ದೇಹವನ್ನು ಕೊಬ್ಬು ಬೊಜ್ಜುಗಳಿಂದ ಕೂಡಿದ ರೋಗದ ಹಂದರವಾಗಿ ಮಾಡುತ್ತದೆ.

ನಾವು ತಿನ್ನುವ ಆಹಾರ ಕೊಬ್ಬು ರಹಿತ ಮತ್ತು ಕಡಿಮೆ ಕ್ಯಾಲರಿಯಿಂದ ಕೂಡಿರಬೇಕು. ನಮ್ಮ ಪ್ರತೀ ದಿನದ ಆಹಾರದಲ್ಲಿ ಕನಿಷ್ಠ 25ರಿಂದ 35ಗ್ರಾಂಗಳಷ್ಟು ನಾರಿನಾಂಶ ಇರಲೇಬೇಕು. ನಾರುಯುಕ್ತ ಆಹಾರ ದೇಹಕ್ಕೆ ಅತೀ ಅಗತ್ಯ. ಶುಚಿಯಾದ, ಬ್ಯಾಕ್ಟೀರಿಯಾ ರಹಿತವಾದ ಆಹಾರವನ್ನು ಸೇವಿಸಬೇಕು.ಮಾಂಸಾಹಾರಿಗಳಾಗಿದ್ದಲ್ಲಿ ಚೆನ್ನಾಗಿ ಬೇಯಿಸಿ ಸೇವಿಸಬೇಕು. ಅರೆಬರೆ ಬೆಂದ ಮಾಂಸಾಹಾರ ಖಂಡಿತಾ ವೇದ್ಯವಲ್ಲ. ಆಹಾರವನ್ನು ಬೇಯಿಸಲು ಶುದ್ಧವಾದ ನೀರನ್ನು ಬಳಸಬೇಕು. ಕಲುಷಿತ ನೀರಿನಿಂದಲೇ ಹಲವಾರು ರೋಗಗಳು ಹರಡುತ್ತವೆೆ ಮತ್ತು ಆಹಾರ ಶೇಖರಣೆ ಮಾಡುವಾಗ ಸೂಕ್ತ ಉಷ್ಣತೆಯಲ್ಲಿ ಶೇಖರಿಸಬೇಕು.

ಹಸಿ ತರಕಾರಿಗಳು ಸೊಪ್ಪು, ದಂಟು ಪಲ್ಯಗಳು ದೇಹಕ್ಕೆ ಅತೀ ಅಗತ್ಯ. ತಾಜಾ ಹಣ್ಣುಗಳನ್ನು ಸೇವಿಸಬೇಕು. ಹಣ್ಣಿನ ರಸಕ್ಕಿಂತ, ಪೂರ್ತಿ ಹಣ್ಣನ್ನು ಸೇವಿಸಿದಲ್ಲಿ ನಾರಿನಾಂಶ ದೇಹಕ್ಕೆ ಸೇರಿ ಆರೋಗ್ಯ ವೃದ್ಧಿಸುತ್ತದೆ. ಕ್ಯಾನ್ಸರ್ ಕಾಯಿಲೆಗಳಿಗೆ ಪೂರಕವಾಗಿ ಕೆಲಸ ಮಾಡುವ ಕ್ಯಾನ್ಸರ್ ಕಾರಕ ವಸ್ತುಗಳು ದೇಹದಲ್ಲಿ ಉಳಿಯದಂತೆ ನಾರು ಸಮರ್ಥವಾಗಿ ಕೆಲಸಮಾಡುತ್ತದೆ. ಆಹಾರದಲ್ಲಿ ನಾರಿನಾಂಶ 20ರಿಂದ 25 ಶೇಕಡಾ ಇದ್ದಲ್ಲಿ ಕ್ಯಾನ್ಸರ್ ಸಮಸ್ಯೆಗಳು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ನಾರಿನಾಂಶ ದೇಹದಲ್ಲಿರುವ ನೀರನ್ನು ಹೆಚ್ಚು ಹೀರುತ್ತದೆ. ಈ ಕಾರಣದಿಂದ ಸ್ವಲ್ಪ ತಿಂದರೂ ಹೊಟ್ಟೆ ತುಂಬಿದ ಅನುಭವವಾಗುತ್ತದೆ ಮತ್ತು ಇದರಲ್ಲಿ ಕ್ಯಾಲರಿ ಅಂಶ ಕಡಿಮೆ ಇರುತ್ತದೆ. ಹೆಚ್ಚು ಹೆಚ್ಚು ನೀರು ಸೇವಿಸುವುದರಿಂದಲೂ ದೇಹದ ಆರೋಗ್ಯ ವೃದ್ಧಿಸುತ್ತದೆ ಮತ್ತು ನಾರುಯುಕ್ತ ಆಹಾರ, ಮಲಬದ್ಧತೆಯನ್ನು ಕಡಿಮೆಮಾಡಿ ಆರೋಗ್ಯವನ್ನು ಹತೋಟಿಯಲ್ಲಿಡುತ್ತದೆ.

ಏನಿದು ಮೂಲಾಹಾರ?

ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ಹಸಿಗೆಡ್ಡೆ ಗೆಣಸು, ಸೊಪ್ಪು, ದಂಟು ಪಲ್ಯಗಳನ್ನು ಸೇವಿಸುತ್ತಿದ್ದರು. ಆಹಾರ ಸಂಸ್ಕರಣೆ ಮತ್ತು ಶೇಖರಣೆಯ ವ್ಯವಸ್ಥೆ ಆಗ ಇರಲಿಲ್ಲ. ವಾತಾವರಣ ಮಲಿನವಾಗಿರಲಿಲ್ಲ. ಜಾಗತೀಕರಣ, ಔದ್ಯೋಗೀಕರಣದ ಚಿಂತೆ ಇರಲಿಲ್ಲ. ಊರು ತುಂಬಾ ಕಾಡುಗಳಿದ್ದು ನೀರು ಈಗಿನಂತೆ ಕಲುಷಿತವಾಗಿರಲಿಲ್ಲ. ಈ ಕಾರಣದಿಂದಲೇ ನಮ್ಮ ಪುರ್ವಜರು 80-90 ವಯಸ್ಸಿನಲ್ಲೂ ಗಟ್ಟಿಮುಟ್ಟಾಗಿರುತ್ತಿದ್ದರು. ಯಾವುದೇ ರಕ್ತದೊತ್ತಡ, ಮಧುಮೇಹ, ಹೃದಯದ ಕಾಯಿಲೆಗಳಿಂದ ಬಳಲುತ್ತಿರಲಿಲ್ಲ. ಹಗಲಿಡಿ ಬೆವರಿಳಿಸಿ ದುಡಿದು, ಶುದ್ಧವಾದ ನೀರು, ಸುರಕ್ಷಿತವಾದ ರಾಸಾಯನಿಕಗಳಿಲ್ಲದ ಕಚ್ಚಾ ಆಹಾರವೇ ಅವರ ಆರೋಗ್ಯದ ಮೂಲ ಮಂತ್ರವಾಗಿತ್ತು. ನಿಯಮಿತವಾದ ದೈಹಿಕ ದುಡಿಮೆ, ಒತ್ತಡವಿಲ್ಲದ ಜೀವನ ಶೈಲಿ, ಚಿಂತೆಯಿಲ್ಲದ ಜೀವನ ಮತ್ತು ಸುರಕ್ಷಿತ ಸ್ವಚ್ಛವಾದ ನೀರು ಮತ್ತು ಆಹಾರವೇ ಅವರ ಆರೋಗ್ಯದ ಗುಟ್ಟಾಗಿತ್ತು. ಆದರೆ ಈಗಿನ ಪರಿಸ್ಥಿತಿಯೇ ಬೇರೆ! ದೈಹಿಕವ್ಯಾಯಾಮವಿಲ್ಲದ ದುಡಿಮೆ, ಒತ್ತಡದ ಬದುಕು, ರಾಸಾಯನಿಕ ಮಿಶ್ರಿತ ಆಹಾರ, ಕಲುಷಿತ ನೀರು ಜೊತೆಗೆ ಮಲಿನಗೊಂಡ ವಾತಾವರಣ ಇವೆಲ್ಲಾ ಸೇರಿ ಆರೋಗ್ಯ ಎನ್ನುವುದು ಮರೀಚಿಕೆಯಾಗಿಯೇ ಬಿಟ್ಟಿದೆ. ಶುದ್ಧ ನೀರಿಗಾಗಿ ಹಾಹಾಕಾರ, ಬಿಸ್ಲೆರಿ ನೀರಿಲ್ಲದೆ ಬದುಕಲಾರ. ಶುಭ್ರವಾದ ಗಾಳಿಗಾಗಿ ಹವಾನಿಯಂತ್ರಿತ ವ್ಯವಸ್ಥೆ ಅಥವಾ ಆಕ್ಸಿಜನ್ ಕ್ಲಿನಿಕ್‌ಗಳು, ಮಾನಸಿಕ ಒತ್ತಡದ ನಿರ್ವಹಣೆಗಾಗಿ ಕ್ಲಬ್‌ಗಳು, ಕುಡಿತಗಳು ಮತ್ತು ವಾರಾಂತ್ಯದ ಮೋಜು ಮಸ್ತಿಯ ಪಾರ್ಟಿಗಳು ಇವೆಲ್ಲಾ ಮೈಲೇಳೈಸಿ ಮನುಷ್ಯ ನಿಧಾನವಾಗಿ ರೋಗಗಳ ಹಂದರವಾಗಿ ಮಾರ್ಪಾಡಾಗುತ್ತಿದ್ದಾನೆ. ವಯಸ್ಸು 50 ದಾಟುವುದರ ಒಳಗೆ ಕ್ಯಾನ್ಸರ್, ಹೃದಯಾಘಾತ, ರಕ್ತದೊತ್ತಡ, ಮಧುವೇಹ ಸೇರಿಕೊಂಡು ಮಕ್ಕಳಾಗದಿರುವುದು, ಕೌಟುಂಬಿಕ ಕಲಹ ಘರ್ಷಣೆ ಇವೆಲ್ಲಾ ಮೈಲೇಳೈಸಿ 50ರ ಹರೆಯದಲ್ಲೆ ಸುಸ್ತಾಗಿ 90ರ ಮುದುಕರಂತೆ ಗೋಚರವಾದರೂ ಸೋಜಿಗದ ಸಂಗತಿಯಲ್ಲ.

share
ಡಾ. ಮುರಲೀ ಮೋಹನ್ ಚೂಂತಾರು
ಡಾ. ಮುರಲೀ ಮೋಹನ್ ಚೂಂತಾರು
Next Story
X