LDL ಕೊಲೆಸ್ಟರಾಲ್ ಪರೀಕ್ಷೆಯನ್ನು ಸಣ್ಣ ವಯಸ್ಸಿನಲ್ಲೇ ಮಾಡಿಸಬೇಕೇ?

Photo Credit : freepik
ಅತ್ಯಧಿಕ ಎಲ್ಡಿಎಲ್ ಮಟ್ಟವು ಪರಿಧಮನಿಯ ರೋಗ, ಹೃದಯಾಘಾತ ಮತ್ತು ಪಾರ್ಶ್ವವಾಯು ಮೊದಲಾದ ಹೃದಯರಕ್ತನಾಳಗಳಿಗೆ ಸಂಬಂಧಿಸಿದ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಎಲ್ಡಿಎಲ್ ತಿಳಿದುಕೊಳ್ಳುವುದರಿಂದ ಆರಂಭಿಕ ಹಂತದಲ್ಲೇ ಡೈಸ್ಲಿಪಿಡಿಮಿಯದ ಪತ್ತೆಗೆ ನೆರವಾಗುತ್ತದೆ.
ಬಹಳ ಅಪಾಯಕಾರಿಯಾಗಿ ಪರಿಣಮಿಸುವವರೆಗೂ ನಾವು ನಮ್ಮ ಹೃದಯವನ್ನು ಬಹಳ ಲಘುವಾಗಿ ಪರಿಗಣಿಸುತ್ತೇವೆ. ಆದರೆ ಕೆಲವು ಸಣ್ಣ ಅಭ್ಯಾಸಗಳು ದೊಡ್ಡ ವ್ಯತ್ಯಾಸವನ್ನು ತರಬಲ್ಲವು. ಮುಖ್ಯವಾಗಿ ನಿಮ್ಮ LDL ಕೊಲೆಸ್ಟರಾಲ್ ಮಟ್ಟವನ್ನು ಪರೀಕ್ಷಿಸುವ ಮೂಲಕ ಈ ಅಭ್ಯಾಸವನ್ನು ಆರಂಭಿಸಬಹುದು. ಏಕೆಂದರೆ ಕೆಟ್ಟ ಕೊಲೆಸ್ಟರಾಲ್ ಎನ್ನುವುದು ಹೃದಯ ರಕ್ತನಾಳದ ಸಮಸ್ಯೆಗಳ ಆರಂಭಿಕ ಸೂಚನೆಗಳಾಗಿವೆ.
ಚೆನ್ನೈ ನಿವಾಸಿ ಶ್ರೀರಾಮಚಂದ್ರ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಕ್ಲಿನಿಕಲ್ ನ್ಯೂಟ್ರಿಶನಿಸ್ಟ್ ಆಗಿರುವ ಸಿವಿ ಐಶ್ವರ್ಯ ಅವರ ಪ್ರಕಾರ, ಹೆಚ್ಚು ಆರೋಗ್ಯ ಅಪಾಯಗಳಿಲ್ಲದ ಸಾಮಾನ್ಯ ಜನತೆ 20 ವರ್ಷದೊಳಗೆ LDL ಪರೀಕ್ಷೆಯನ್ನು ಮಾಡಬೇಕು. ಸಾಮಾನ್ಯ ರೇಂಜ್ನಲ್ಲಿ ಪ್ರತಿ 4-6 ವರ್ಷಗಳಿಗೆ ಪರೀಕ್ಷೆಯನ್ನು ಪುನರಾವರ್ತಿಸಬೇಕು.
ಮೊದಲೇ ಎಲ್ಡಿಎಲ್ ಪರೀಕ್ಷಿಸುವ ಅಗತ್ಯವೇನಿದೆ?
ಐಶ್ವರ್ಯ ಅವರ ಪ್ರಕಾರ LDL ಪರೀಕ್ಷೆ ಅತಿ ಮುಖ್ಯ. ಏಕೆಂದರೆ ಕಡಿಮೆ ಸಾಂದ್ರತೆಯ ಲಿಪೊಪ್ರೊಟೀನ್ ಕೊಲೆಸ್ಟರಾಲ್ ಹೆಚ್ಚಾಗಿರುವುದು ಅಪಧಮನಿಗಳ ಒಳಮೈ ಮೇಲೆ ಮೇದಸ್ಸು ಶೇಖರವಾಗುವುದರಿಂದ ಅವು ದಪ್ಪವಾಗಿ ಗಡಸಾಗುವಿಕೆಗೆ ಉತ್ತೇಜಿಸುತ್ತದೆ ಮತ್ತು ಲೋಳೆಯ ನಿಕ್ಷೇಪ ರೂಪುಗೊಳ್ಳಲು ಕಾರಣವಾಗುತ್ತದೆ.
ಅತ್ಯಧಿಕ ಎಲ್ಡಿಎಲ್ ಮಟ್ಟವು ಹೃದಯಕ್ಕೆ ರಕ್ತ ಒದಗಿಸುವ ರಕ್ತನಾಳಗಳಲ್ಲಿ ಒಂದು ಪರಿಧಮನಿಯ ರೋಗ, ಹೃದಯಾಘಾತ ಮತ್ತು ಪಾರ್ಶ್ವವಾಯು ಮೊದಲಾದ ಹೃದಯರಕ್ತನಾಳಗಳಿಗೆ ಸಂಬಂಧಿಸಿದ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಎಲ್ಡಿಎಲ್ ಅಳೆಯುವುದರಿಂದ ಡೈಸ್ಲಿಪಿಡಿಮಿಯದ (ನಿಮ್ಮ ರಕ್ತದಲ್ಲಿ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ಗಳಂತಹ ಅಸಹಜ ಮಟ್ಟದ ಕೊಬ್ಬು (ಲಿಪಿಡ್ಗಳು) ಇರುವುದು) ಆರಂಭಿಕ ಪತ್ತೆಗೆ ನೆರವಾಗುತ್ತದೆ. ಹೃದಯರಕ್ತನಾಳದ ಅಪಾಯದ ನಿಖರವಾದ ಮೌಲ್ಯಮಾಪನ ಮತ್ತು ದೀರ್ಘಕಾಲೀನ ಹೃದಯರಕ್ತನಾಳದ ಸಂಕಷ್ಟಗಳನ್ನು ತಡೆಯಲು ಸಮಯಕ್ಕೆ ಸರಿಯಾಗಿ ಮಧ್ಯಪ್ರವೇಶಿಸಲು ಸಾಧ್ಯವಾಗುತ್ತದೆ.
ನಿಮ್ಮ LDL ಮಟ್ಟ ಅತ್ಯಧಿಕವಾಗಿರುವಾಗ ಏನಾಗುತ್ತದೆ?
LDL ಮಟ್ಟವು ಅತ್ಯಧಿಕವಾಗಿದ್ದಾಗ ಹೆಚ್ಚುವರಿ LDL ನಿಮ್ಮ ಅಪಧಮನಿಯ ಗೋಡೆಗಳನ್ನು ಛೇದಿಸುತ್ತದೆ ಮತ್ತು ಆಕ್ಸಿಡೀಕರಣಗೊಳ್ಳುತ್ತದೆ. ಅದರಿಂದ ಉರಿಯೂತ ಮತ್ತು ಫೋಮ್ ಜೀವಕೋಶದ ರಚನೆಯನ್ನು ಪ್ರಚೋದಿಸುತ್ತದೆ. ಇದು ಕಾಲಾನಂತರ ಲೋಳೆ ನಿಕ್ಷೇಪದ ಊತ ಮತ್ತು ರಕ್ತಹೆಪ್ಪುಗಟ್ಟಲು ಕಾರಣವಾಗಬಹುದು, ಇದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಹೃದಯರಕ್ತನಾಳದ ರೋಗಗಳ ಅಪಾಯ ಹೆಚ್ಚಾಗುತ್ತದೆ.
LDL ಕೊಲೆಸ್ಟರಾಲ್ ಮಟ್ಟ ಇಳಿಸುವುದು ಹೇಗೆ?
ಏಷ್ಯನ್ ಆಸ್ಪತ್ರೆಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಯ ಹಿರಿಯ ಸಲಹಾಗಾರರಾಗಿರುವ ಡಾ ಪ್ರತೀಕ್ ಚೌಧರಿ ಅವರ ಪ್ರಕಾರ, ಬೆಳಗಿನ ನಡಿಗೆ ಕೊಲೆಸ್ಟರಾಲ್ ಇಳಿಸಲು ಉತ್ತಮ. ಏಳು ದಿನಗಳಲ್ಲಿ ಕನಿಷ್ಠ ಐದು ದಿನಗಳು 30 ನಿಮಿಷಗಳ ಕಾಲ ಬೆಳಗಿನ ಜಾವ ನಡೆದಲ್ಲಿ ಕೊಲೆಸ್ಟರಾಲ್ ಮಟ್ಟವನ್ನು ಇಳಿಸಬಹುದು. ಬೊಜ್ಜನ್ನು ಸುಧಾರಿಸಬಹುದು. ದೈನಂದಿನ ಜೀವನವೂ ಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ. ಅತಿ ಮಾಲಿನ್ಯ ಮತ್ತು ಚಳಿಗಾಲದ ಮಂಜು ಇದ್ದರೆ ನಡಿಗೆಯನ್ನು ಸ್ವಲ್ಪ ತಡ ಮಾಡಬಹುದು.
ಪೂರ್ಣ ಕೊಬ್ಬಿರುವ ಡೈರಿ ಉತ್ಪನ್ನಗಳು, ದನದ ಮಾಂಸ, ಆಡು-ಕುರಿ ಮಾಂಸವನ್ನು ಬೆಳಗಿನ ಉಪಾಹಾರದಲ್ಲಿ ಸೇವಿಸಬಾರದು. ಇವು ಹೆಚ್ಚು ಕೊಲೆಸ್ಟರಾಲ್ ಮಟ್ಟ ಇರುವ ಆಹಾರಗಳು. ಕರಗುವ ಫೈಬರ್ ಇರುವಂತಹ ಓಟ್ಮೀಲ್, ಕಿಡ್ನಿ ಬೀನ್ಸ್, ಚಿಯಾ ಬೀಜಗಳು ಮತ್ತು ಹಣ್ಣುಗಳನ್ನು ಬೆಳಗಿನ ಉಪಾಹಾರಕ್ಕೆ ಸೇವಿಸುವುದು ಉತ್ತಮ. ಒಮೆಗಾ- 3 ಕೊಬ್ಬಿನ ಆಮ್ಲಗಳಿರುವ ಬಾದಾಮಿಗಳು, ವಾಲ್ನಟ್ ಗಳು ಅಥವಾ ಫ್ಲ್ಯಾಕ್ಸ್ ಬೀಜಗಳು ಬೆಳಗಿನ ಉಪಾಹಾರಕ್ಕೆ ಉತ್ತಮ. ಇವು ಉತ್ತಮ ಕೊಲೆಸ್ಟರಾಲ್ ಮಟ್ಟವನ್ನು ವೃದ್ಧಿಸುತ್ತವೆ.
ಬೆಳಗ್ಗೆ ಸಾಧ್ಯವಾದರೆ ಲಿಂಬೆ ಬೆರೆಸಿ ಹದ ಬಿಸಿ ನೀರು ಕುಡಿಯಬೇಕು. ಇದು ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ದೇಹದಲ್ಲಿ ತೇವಾಂಶ ತುಂಬುತ್ತದೆ ಮತ್ತು ಹೃದಯದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಆದರೆ, ಇವುಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಮೊದಲು ಆರೋಗ್ಯ ಸೇವಾ ವೃತ್ತಿಪರರ ಜೊತೆಗೆ ಸಲಹೆ ಪಡೆಯುವುದು ಉತ್ತಮ.







