ಮಳೆಗಾಲದಲ್ಲಿ ಆರೋಗ್ಯಕರ ತ್ವಚೆ ಕಾಪಾಡಿಕೊಳ್ಳಲು ಇಲ್ಲಿದೆ ಉಪಯುಕ್ತ ಮಾಹಿತಿ
ಸಾಂದರ್ಭಿಕ ಚಿತ್ರ (Image by tawatchai07 on Freepik)
ಅಧಿಕ ಸೆಖೆಯೂ ಇಲ್ಲ; ಅಧಿಕ ಚಳಿಯೂ ಅಲ್ಲ. ಆದ್ದರಿಂದ ಮಳೆಗಾಲವನ್ನು ಉತ್ತಮ ಋತು ಎಂದು ಸಾಮಾನ್ಯವಾಗಿ ಬಣ್ಣಿಸಲಾಗುತ್ತದೆ. ಆದರೆ ತೇವಾಂಶದ ವಾತಾವರಣ ಫಂಗಸ್ ಮತ್ತು ಬ್ಯಾಕ್ಟೀರಿಯಾ ಬೆಳೆಯಲು ಪೂರಕ ವಾತಾವರಣ ಒದಗಿಸುವುದರಿಂದ ಸಹಜವಾಗಿಯೇ ತ್ವಚೆಯ ಸೋಂಕುಗಳ ಸಾಧ್ಯತೆ ಹೆಚ್ಚು. ಹಾಗಾದರೆ ಸಾಮಾನ್ಯವಾಗಿ ಕಂಡುಬರುವ ಚರ್ಮದ ಸಮಸ್ಯೆಗಳನ್ನು ತಡೆಯಲು ಮಳೆಗಾಲದಲ್ಲಿ ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಆರೋಗ್ಯ ತಜ್ಞರು ಸಲಹೆಗಳನ್ನು ನೀಡುತ್ತಾರೆ.
ಪುಣೆಯ ರೂಬಿಹಾಲ್ ಕ್ಲಿನಿಕ್ನ ಚರ್ಮರೋಗ ತಜ್ಞೆ ಡಾ.ರಶ್ಮಿ ಅಡೆರಾವೊ ಅವರ ಪ್ರಕಾರ, "ಮಳೆಗಾಲದಲ್ಲಿ ಬೆವರುವಿಕೆಯು ಚರ್ಮದ ಕಿರಿಕಿರಿಗೆ ಕಾರಣವಾಗುತ್ತದೆ ಹಾಗೂ ಫಂಗಸ್ ಮತ್ತು ಬ್ಯಾಕ್ಟೀರಿಯಾಗಳ ಕ್ಷಿಪ್ರ ಬೆಳವಣಿಗೆಗೆ ಕಾರಣವಾಗುತ್ತದೆ. ತಾಪಮಾನ ದಿಢೀರನೇ ಬದಲಾಗುವುದು ಚರ್ಮದ ಒಳಭಾಗದಲ್ಲಿ ನೀರಿನ ಅಂಶ ಕಡಿಮೆಯಾಗಿ ಇಸುಬು ರೋಗಕ್ಕೆ ಕಾರಣವಾಗುತ್ತದೆ. ತೇವಾಂಶಯುಕ್ತ ವಾತಾವರಣ ಆಸ್ತಮಾ ಹೆಚ್ಚಳಕ್ಕೆ, ಚರ್ಮದ ಸಮಸ್ಯೆಗಳಿಗೆ ಅಥವಾ ತುರಿಕೆಗೆ ಕಾರಣವಾಗುತ್ತದೆ. ಹೆಚ್ಚಿನ ತೇವಾಂಶ ಉಳಿದುಕೊಳ್ಳುವುದು ಫಂಗಸ್ ಸೋಂಕಿಗೆ ಕಾರಣವಾಗುತ್ತದೆ. ಒದ್ದೆ ಬಟ್ಟೆಯಿಂದಾಗಿ ರಿಂಗ್ವರ್ಮ್ನಂಥ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಕೂದಲು ಉದುರುವಿಕೆ, ಬ್ಯಾಕ್ಟೀರಿಯಾ ಮತ್ತು ಫಂಗಸ್ನಿಂದ ಉಂಟಾಗುವ ಇತರ ಸಮಸ್ಯೆಗಳಿಗೂ ಮಳೆಗಾಲ ಸೂಕ್ತವಾದ ಕಾಲ ಎನ್ನುವುದು ಅವರ ಅಭಿಮತ. ಇದರ ತಡೆಗೆ ಅವರು ನೀಡುವ ಸಲಹೆಗಳನ್ನು ಹೀಗೆ ಪಟ್ಟಿ ಮಾಡಬಹುದು.
► ಮಳೆಯಲ್ಲಿ ತೊಯ್ದ ಬಳಿಕ ಅಥವಾ ವ್ಯಾಯಾಮ ಮಾಡಿದ ಬಳಿಕ ಒದ್ದೆ ಬಟ್ಟೆ, ಸಾಕ್ಸ್ ಅಥವಾ ಒಳ ಉಡುಪುಗಳನ್ನು ಬದಲಿಸಿ ಸ್ವಚ್ಛ ಹಾಗೂ ಒಣಗಿದ ಬಟ್ಟೆ ಧರಿಸಿ.
► ಪ್ರತಿನಿತ್ಯ ತೊಳೆದ ಬಟ್ಟೆಗಳನ್ನು ಧರಿಸಿ. ದಿನಕ್ಕೆ ಎರಡು ಬಾರಿ ಸ್ನಾನ ಕಡ್ಡಾಯ. ಟವಲ್ ಮತ್ತು ಸೋಪುಗಳನ್ನು ಹಂಚಿಕೊಳ್ಳದಿರಿ.
► ತೆರೆದ ಪಾದರಕ್ಷೆಗಳನ್ನು ಬಳಸಿ ಗಾಳಿಯಾಡಲು ಅವಕಾಶ ಕೊಡಿ.
► ಕೈ ಕಾಲುಗಳನ್ನು ಆಗಾಗ್ಗೆ ತೊಳೆಯುತ್ತಿರಿ.
► ಸ್ನಾನದ ಬಳಿಕ ಮೈಯನ್ನು ಒರೆಸಿ ಒಣಗಿಸಿ. ಅದರಲ್ಲೂ ಮುಖ್ಯವಾಗಿ ಮೊಣಕಾಲು, ಕಂಕುಳ ಮತ್ತು ಬೆರಳುಗಳ ನಡುವಿನ ಜಾಗವನ್ನು ಒಣಗಿರುವಂತೆ ನೋಡಿಕೊಳ್ಳಿ.
► ನೀವು ಹಾಗೂ ನಿಮ್ಮ ಬಟ್ಟೆ (ಮುಖ್ಯವಾಗಿ ಒಳ ಉಡುಪು) ಸ್ವಚ್ಛವಾಗಿರಲಿ.
► ಮಳೆ ಇರಲಿ, ಇಲ್ಲದಿರಲಿ ರೈನ್ಕೋಟ್ ಅಥವಾ ಕೊಡೆ ನಿಮ್ಮ ಜತೆಗಿರಲಿ. ಹೆಚ್ಚು ಕಾಲ ನಿಮ್ಮ ಬಟ್ಟೆಗಳು ಒದ್ದೆ ಇರದಂತೆ ನೋಡಿಕೊಳ್ಳಿ.
► ಕೆಲ ಚರ್ಮರೋಗಗಳು ಹರಡುವುದರಿಂದ ಬೇರೆಯವರ ಬಟ್ಟೆ ಅಥವಾ ವೈಯಕ್ತಿಕ ಸಾಮಗ್ರಿಗಳನ್ನು ಹಂಚಿಕೊಳ್ಳದಿರಿ.
ಕೃಪೆ: hindustantimes.com