ಪಾಲಕ್ ಪನೀರ್ ಮತ್ತು ಪೂರ್ವಗ್ರಹ; ಅಮೆರಿಕಾದಲ್ಲಿ 1.8 ಕೋಟಿ ರೂ. ವ್ಯಾಜ್ಯ ಗೆದ್ದ ಭಾರತೀಯ ವಿದ್ಯಾರ್ಥಿಗಳು

Photo Credit : indiatoday.in
ವಿದ್ಯಾರ್ಥಿಗಳು ಕೊಲೊರಾಡೊ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ ಪಾಲಕ್ ಪನೀರ್ ಸಂಬಂಧಿತ ತಾರತಮ್ಯದ ವಿರುದ್ಧ 1.8 ಕೋಟಿ ರೂ. ಮೊತ್ತದ ಸಿವಿಲ್ ರೈಟ್ಸ್ ಸೆಟಲ್ಮೆಂಟ್ (ನಾಗರಿಕ ಹಕ್ಕು ಮೊಕದ್ದಮೆಯ ಇತ್ಯರ್ಥ) ಗೆದ್ದುಕೊಂಡಿದ್ದಾರೆ.
ಭಾರತೀಯ ಪಿಎಚ್ಡಿ ವಿದ್ಯಾರ್ಥಿಗಳಾದ ಆದಿತ್ಯ ಪ್ರಕಾಶ್ ಮತ್ತು ಉರ್ಮಿ ಭಟ್ಟಾಚಾರ್ಯ ಅವರು ಕೊಲೊರಾಡೊ ಬೌಲ್ಡರ್ ವಿಶ್ವವಿದ್ಯಾಲಯದಲ್ಲಿ ಪಾಲಕ್ ಪನೀರ್ ಸಂಬಂಧಿತ ತಾರತಮ್ಯದ ವಿರುದ್ಧ ಹಾಕಿರುವ 1.8 ಕೋಟಿ ರೂ. ಮೊತ್ತದ ಸಿವಿಲ್ ರೈಟ್ಸ್ ಸೆಟಲ್ಮೆಂಟ್ (ನಾಗರಿಕ ಹಕ್ಕು ಮೊಕದ್ದಮೆಯ ಇತ್ಯರ್ಥ) ಗೆದ್ದುಕೊಂಡಿದ್ದಾರೆ. 2023 ಸೆಪ್ಟೆಂಬರ್ನಲ್ಲಿ ಸಿಬ್ಬಂದಿಯೊಬ್ಬರು ಆದಿತ್ಯ ಪ್ರಕಾಶ್ಗೆ ಊಟವನ್ನು ತಮ್ಮ ವಿಭಾಗದ ಮೈಕ್ರೋವೇವ್ನಲ್ಲಿ ಬಿಸಿ ಮಾಡದಂತೆ ಸೂಚಿಸಿದ್ದರು. ಬಿಸಿ ಮಾಡುವುದರಿಂದ ಕಮಟು ವಾಸನೆ ಬರುತ್ತದೆ ಎಂದು ಅವರು ಹೇಳಿದ್ದರು.
ಆದಿತ್ಯ ಪ್ರಕಾಶ್ರ ಊಟದಿಂದ ಕಮಟು ವಾಸನೆ ಬರುತ್ತಿರುವ ಕಾರಣದಿಂದ ಅವರು ಮೈಕ್ರೋವೇವ್ನಲ್ಲಿ ಅದನ್ನು ಬಿಸಿ ಮಾಡಬಾರದು ಎಂದು ಸಿಬ್ಬಂದಿಯೊಬ್ಬರು ದೂರು ನೀಡಿದ್ದರು. ಅದಕ್ಕೆ ಉತ್ತರವಾಗಿ ಆದಿತ್ಯ ಪ್ರಕಾಶ್, “ಇದು ಕೇವಲ ಊಟ, ನಾನು ಬಿಸಿ ಮಾಡುತ್ತೇನೆ ಮತ್ತು ಹೊರಹೋಗುತ್ತೇನೆ” ಎಂದು ಉತ್ತರಿಸಿದ್ದರು. ಆದರೆ ಈ ವಾಗ್ವಾದ ಬಿಸಿಯಾಗಿ ವ್ಯಾಜ್ಯವಾಗಿ ಬದಲಾಗಿದೆ. 34 ವರ್ಷದ ಆದಿತ್ಯ ಮತ್ತು 35 ವರ್ಷದ ಉರ್ಮಿ ವಿಶ್ವವಿದ್ಯಾಲಯದ ವಿರುದ್ಧ ಕೊಲೊರಾಡೊದ ಅಮೆರಿಕ ಸಂಯುಕ್ತ ಸಂಸ್ಥಾನದ ಜಿಲ್ಲಾ ನ್ಯಾಯಾಲಯದಲ್ಲಿ “ತಾರತಮ್ಯದ ವರ್ತನೆ” ತೋರಲಾಗುತ್ತಿದೆ ಎಂದು ದೂರು ಸಲ್ಲಿಸಿದ್ದಾರೆ.
ದಕ್ಷಿಣ ಏಷ್ಯಾದವರು ತಮ್ಮ ಊಟವನ್ನು ಎಲ್ಲರೂ ಓಡಾಡುವ ಪ್ರದೇಶದಲ್ಲಿ ಮಾಡಬಾರದು ಎಂದು ವಿಭಾಗದ ಅಡುಗೆಯ ನಿಯಮಗಳಲ್ಲಿ ಸೇರಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಆದಿತ್ಯ ಪ್ರಕಾಶ್ ಪ್ರಕಾರ ಆತನನ್ನು ಊಟದ ವಿಚಾರವಾಗಿ ಪದೇಪದೆ ಹಿರಿಯ ಸಿಬ್ಬಂದಿಗಳ ಸಭೆಯಲ್ಲಿ ಕರೆಯಲಾಗಿದೆ ಮತ್ತು ಆತ ಇತರರಿಗೆ ಅಸುರಕ್ಷಿತವಾದ ಭಾವನೆ ಹುಟ್ಟಿಸುವ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂದು ಅವರಿಗೆ ತಿಳಿಸಲಾಗಿತ್ತು.
ಉರ್ಮಿಯನ್ನು ಊಟದ ವಿಚಾರಕ್ಕೆ ಸಂಬಂಧಿಸಿ ಸಹಾಯಕ ಅಧ್ಯಾಪಕರ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಮೊಕದ್ದಮೆಯಲ್ಲಿ ತಿಳಿಸಲಾಗಿತ್ತು. ಪಾಲಕ್ ಪನೀರ್ ಘಟನೆಯ ನಂತರ ಉರ್ಮಿ ಸತತ ಎರಡು ದಿನ ಭಾರತೀಯ ಆಹಾರವನ್ನು ತಂದು ಸೇವಿಸುವ ಮೂಲಕ ‘ಗಲಭೆ ಸೃಷ್ಟಿಗೆ’ ಪ್ರಯತ್ನಿಸಿದ್ದಾರೆ ಎಂದು ವಿಶ್ವವಿದ್ಯಾಲಯದ ವಿಭಾಗ ಆರೋಪಿಸಿತ್ತು.
ಎರಡು ವರ್ಷಗಳ ಕಾಲ ನಡೆದ ಕಾನೂನು ಹೋರಾಟದ ಬಳಿಕ ವಿಶ್ವವಿದ್ಯಾಲಯ ಕೊನೆಗೂ 2025 ಸೆಪ್ಟೆಂಬರ್ನಲ್ಲಿ ರೂ 1.8 ಕೋಟಿ ರೂ. ತೆರಲು ಒಪ್ಪಿಕೊಂಡಿದೆ ಮತ್ತು ಅವರ ಸ್ನಾತಕೋತ್ತರ ಪದವಿಯನ್ನು ನೀಡಲು ಒಪ್ಪಿಕೊಂಡಿದೆ. ಆದರೆ ಅವರು ಭವಿಷ್ಯದಲ್ಲಿ ವಿಶ್ವವಿದ್ಯಾಲಯದಲ್ಲಿ ನೋಂದಣಿ ಮಾಡುವುದು ಅಥವಾ ಉದ್ಯೋಗ ಮಾಡುವುದನ್ನು ತಡೆಹಿಡಿಯಲಾಗಿದೆ. ಇಬ್ಬರೂ ಜನವರಿಯಲ್ಲಿ ಭಾರತಕ್ಕೆ ಮರಳಿದ್ದಾರೆ.
ಭಾರತಕ್ಕೆ ಆಗಮಿಸಿದ ಬಳಿಕ ಇನ್ಸ್ಟಾಗ್ರಾಂ ಪೋಸ್ಟ್ ಹಾಕಿದ ಉರ್ಮಿ ಭಟ್ಟಾಚಾರ್ಯ ತಮ್ಮ ಅನುಭವವನ್ನು ಬರೆದುಕೊಂಡಿದ್ದಾರೆ. “ಈ ವರ್ಷ ನಾನು ಹೋರಾಟ ಮಾಡಿದ್ದೇನೆ. ನನ್ನ ಚರ್ಮದ ಬಣ್ಣ, ನನ್ನ ಜನಾಂಗೀಯ ಹಿನ್ನೆಲೆ ಮತ್ತು ಭಾರತೀಯ ಉಚ್ಛಾರಣೆ ಏನೇ ಇರಲಿ, ನನಗೆ ಬೇಕಾದುದನ್ನು ತಿನ್ನುವ ಮತ್ತು ನನ್ನ ಇಚ್ಛೆಯಂತೆ ಪ್ರತಿಭಟಿಸುವ ಸ್ವಾತಂತ್ರ್ಯಕ್ಕಾಗಿ ನಾನು ಹೋರಾಡಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ.
https://www.instagram.com/p/DSXhzTVk8_y/?utm_source=ig_web_copy_link
ಈ ನಡುವೆ ಕೊಲೊರಾಡೊ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ಜೊತೆಗೆ ವ್ಯಾಜ್ಯವನ್ನು ಸೆಟಲ್ಮೆಂಟ್ (ಇತ್ಯರ್ಥ) ಮಾಡಿಕೊಂಡಿರುವುದನ್ನು ಖಚಿತಪಡಿಸಿದೆ. ಆದರೆ ಯಾವುದೇ ಬಾಧ್ಯತೆಯನ್ನು ಸ್ವೀಕರಿಸಲು ಕೊಲೊರಾಡೊ ವಿಶ್ವವಿದ್ಯಾಲಯ ನಿರಾಕರಿಸಿದೆ.







