ಪರದೆಯ ಸಮಯ ಕಡಿಮೆ ಮಾಡದೆ ಇದ್ದರೆ ಜೀವನದ ಸಮಯ ಕಡಿಮೆಯಾಗಬಹುದು!

ಸಾಂದರ್ಭಿಕ ಚಿತ್ರ | Photo Credit : freepik
ಕೆಲವು ದೀರ್ಘಾವಧಿಯ ಅಧ್ಯಯನಗಳ ಪ್ರಕಾರ, ಅಧಿಕ ಸ್ಕ್ರೀನ್ ಸಮಯದಿಂದ ಪರಿಧಮನಿಯ ಹೃದಯ ರೋಗ, ಹೃದಯಾಘಾತ ಮತ್ತು ನಂತರದ ಜೀವನದಲ್ಲಿ ಪಾರ್ಶ್ವವಾಯುಗಳ ಅಪಾಯ ಹೆಚ್ಚಿರುತ್ತದೆ.
ಫೋನ್, ಲ್ಯಾಪ್ಟಾಪ್ಗಳು, ಟಿವಿಗಳು ಮೊದಲಾದವುಗಳಿಂದ ಇತ್ತೀಚೆಗೆ ಜನರು ಸ್ಕ್ರೀನ್ ಮುಂದೆ ಕಾಲ ಕಳೆಯುವ ಸಮಯ ಹೆಚ್ಚಾಗಿದೆ. ಕೆಲಸ, ಸಂದೇಶ, ಸುದ್ದಿ, ರೀಲ್ಗಳು, ಜ್ಞಾಪನೆಗಳು ಮೊದಲಾದವುಗಳಿಂದ ದೀರ್ಘ ಸಮಯ ಪರದೆಯ ಹೊಳಪಿನಲ್ಲಿ ದಿನ ಮಸುಕಾಗಿ ಬಿಡುತ್ತದೆ. ಜೀವನದಲ್ಲಿ ಈ ಒತ್ತಡ ಅನಿವಾರ್ಯವೆಂದು ಭಾಸವಾಗುತ್ತದೆ. ಊಟ ಮಾಡುವಾಗ, ಕುಟುಂಬದ ಜೊತೆಗೆ ಸಮಯ ಕಳೆಯುವಾಗ ಹೀಗೆ ನಿರಂತರ ಪರದೆಯ ಒತ್ತಡವು ಜೀವನವನ್ನು ಹೇಗೆ ಬದುಕಬೇಕು ಎಂಬುದನ್ನೇ ಬದಲಿಸುತ್ತದೆ. ರಾತ್ರಿ ಮಲಗುವ ಮೊದಲು ಪರದೆ ನೋಡುವುದರಿಂದ ಮಾನಸಿಕ ಒತ್ತಡವೂ ಉಂಟಾಗುತ್ತದೆ. ಮಾನಸಿಕ ಒತ್ತಡ ನಿಧಾನವಾಗಿ ದೇಹಕ್ಕೆ ವರ್ಗಾವಣೆಯಾಗುತ್ತದೆ. ಅಧಿಕ ರಕ್ತದೊತ್ತಡ, ಅನಿಯಮಿತ ಹೃದಯ ಬಡಿತದ ಸಮಸ್ಯೆಗೆ ಕಾರಣವಾಗುತ್ತದೆ. ದೀರ್ಘಕಾಲದ ಡಿಜಿಟಲ್ ಒತ್ತಡವು ಹೃದಯದ ಸಮಸ್ಯೆಗಳು, ಉರಿಯೂತ ಮತ್ತು ಆತಂಕದ ಸಮಸ್ಯೆಗೆ (Anxiety attacks) ಕಾರಣವಾಗುತ್ತದೆ.
ಇಂಟರ್ವೆನ್ಷನಲ್ ಕಾರ್ಡಿಯಾಲಜಿ ಅಧ್ಯಕ್ಷ ಡಾ. ಸುಭಾಷ್ ಚಂದ್ರ ಅವರ ಪ್ರಕಾರ, ದೀರ್ಘಕಾಲ ಕುಳಿತಿರುವುದರಿಂದ ರಕ್ತಪರಿಚಲನೆ ನಿಧಾನವಾಗುತ್ತದೆ ಮತ್ತು ಬೊಜ್ಜು, ಅಧಿಕ ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವ ಅಪಾಯ ಏರುತ್ತದೆ. ಇವೆಲ್ಲವೂ ಹೃದಯದ ರೋಗಗಳಿಗೆ ಮುಖ್ಯ ಕಾರಣಗಳಾಗಿವೆ. ಪರದೆಗಳು ನೀಲಿ ಬೆಳಕನ್ನು ಹೊರಸೂಸುತ್ತವೆ. ಅವು ಮೆಲಟೊನಿನ್ ಉತ್ಪಾದನೆಗೆ ಅಡ್ಡಿಪಡಿಸುತ್ತವೆ ಮತ್ತು ನಿದ್ರೆಯ ಮಾದರಿಯನ್ನು ಹದಗೆಡಿಸುತ್ತವೆ. ಕಳಪೆ ನಿದ್ರೆಯು ಅಧಿಕ ರಕ್ತದೊತ್ತಡ ಮತ್ತು ಇತರ ಹೃದಯ ಸಂಬಂಧಿತ ಸ್ಥಿತಿಗಳಿಗೆ ತಿಳಿದಿರುವ ಅಪಾಯಕಾರಿ ಅಂಶವಾಗಿದೆ.
“ನಿರಂತರ ನೊಟಿಫಿಕೇಶನ್ಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆಯು ಒತ್ತಡದ ಮಟ್ಟಗಳು ಹಾಗೂ ಕಾರ್ಟಿಸೋಲ್ (ಒತ್ತಡದ ಹಾರ್ಮೋನ್) ಅನ್ನು ಹೆಚ್ಚಿಸಬಹುದು. ಕಾಲಕ್ರಮೇಣ ಇದರಿಂದ ರಕ್ತದೊತ್ತಡ ಏರಬಹುದು ಮತ್ತು ಹೃದಯ-ರಕ್ತನಾಳ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗಬಹುದು. ಕೆಲವು ದೀರ್ಘಾವಧಿಯ ಅಧ್ಯಯನಗಳ ಪ್ರಕಾರ ಅಧಿಕ ಸ್ಕ್ರೀನ್ ಸಮಯ (ಮುಖ್ಯವಾಗಿ ಟಿವಿ ವೀಕ್ಷಣೆ) ಪರಿಧಮನಿಯ ಹೃದಯ ರೋಗ, ಹೃದಯಾಘಾತ ಮತ್ತು ನಂತರದ ಜೀವನದಲ್ಲಿ ಪಾರ್ಶ್ವವಾಯುಗಳ ಅಪಾಯ ಹೆಚ್ಚಿರುತ್ತದೆ” ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ.
ಡಿಜಿಟಲ್ ಬಳಕೆಯ ಕುರಿತ ಅರಿವಿನ ಕೊರತೆ
ಆಧುನಿಕ ಜೀವನಶೈಲಿಯಿಂದ ಒತ್ತಡ ಬರುತ್ತದೆ ಎಂದುಕೊಳ್ಳುತ್ತೇವೆ. ಒತ್ತಡದ ಲಕ್ಷಣಗಳು ಬಂದಾಗ ಅದಕ್ಕೆ ಡಿಜಿಟಲ್ ಬಳಕೆಯ ಕಾರಣವೂ ಇರಬಹುದು ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ. ಪರದೆಯ ಒತ್ತಡ ಬಹಿರಂಗವಾಗಿ ಕಾಣಿಸುವುದಿಲ್ಲ. ಗಾಯಗಳಾಗುವುದಿಲ್ಲ. ಆದರೆ ಸದ್ದಿಲ್ಲದೆ ವರ್ಷಗಳಿಂದ ಅದು ಒತ್ತಡವನ್ನು ಹೇರುತ್ತದೆ. ಸಮಸ್ಯೆ ಗಂಭೀರವಾಗುವ ಹೊತ್ತಿಗೆ ನಮ್ಮ ಫೋನ್ ಅದಕ್ಕೆ ಕಾರಣ ಎನ್ನುವುದನ್ನು ಒಪ್ಪಿಕೊಳ್ಳುವುದಿಲ್ಲ. ಅಲ್ಲದೆ, ನಾವು ಅವಲಂಬಿಸಿರುವ ಸಾಧನ ನಮಗೆ ಹಾನಿ ತರಬಹುದು ಎಂದು ಒಪ್ಪಿಕೊಳ್ಳುವುದಿಲ್ಲ. ಫೋನ್ಗಳು ಕೆಲಸ, ಆದಾಯ, ಸಂಪರ್ಕ ಮತ್ತು ಸುರಕ್ಷೆಗೆ ಸಂಬಂಧಿಸಿದವು. ಅವುಗಳ ಪರಿಣಾಮವನ್ನು ಪ್ರಶ್ನಿಸುವುದು ಅನಾನುಕೂಲವೆನಿಸುತ್ತದೆ. ನಮ್ಮ ಅಭ್ಯಾಸಗಳನ್ನು ಪುನರ್ವಿಮರ್ಶಿಸುವ ಬದಲಾಗಿ ಎಚ್ಚರಿಕೆಗಳನ್ನು ಅಲಕ್ಷಿಸುವುದು ಸುಲಭ. ದೀರ್ಘಕಾಲೀನ ಪರದೆಯ ಸಮಯ ನಿಮ್ಮ ಒಟ್ಟು ಆರೋಗ್ಯಕ್ಕೆ ಸಮಸ್ಯೆ ಒಡ್ಡುತ್ತದೆ. ಮಾತ್ರವಲ್ಲದೆ, ನಿರಂತರ ಸುಸ್ತು ಅಥವಾ ಕಳಪೆ ನಿದ್ರೆ, ರಕ್ತದೊತ್ತಡ ಏರಿಕೆ, ತೂಕ ಏರಿಕೆ ಅಥವಾ ತೂಕ ಇಳಿಸಲು ಕಷ್ಟವಾಗುವುದು, ಒತ್ತಡದ ಅನುಭವ, ಫೋನ್/ಕಂಪ್ಯೂಟರ್ ಕುರಿತ ಆತಂಕ ಮತ್ತು ದೈಹಿಕ ಚಟುವಟಿಕೆಯಲ್ಲಿ ಆಸಕ್ತಿ ಕಡಿಮೆಯಾಗಿರುವುದು ಕಂಡುಬರುತ್ತದೆ.
ನಿತ್ಯ ಜೀವನದಲ್ಲಿ ಹುದುಗಿದ ಪರದೆ
ಡಿಜಿಟಲ್ ಒತ್ತಡ ಅಪಾಯಕಾರಿ ಎಂದು ಅನಿಸುವುದಿಲ್ಲ. ಏಕೆಂದರೆ ಅದು ನಮ್ಮ ನಿತ್ಯ ಜೀವನದಲ್ಲಿ ಹುದುಗಿ ಹೋಗಿದೆ. ಫೋನ್ ಬಳಸುತ್ತೇವೆ, ಇಮೇಲ್ಗೆ, ಸಂದೇಶಕ್ಕೆ ಉತ್ತರಿಸುತ್ತೇವೆ. ಆದರೆ ಆ ಎಲ್ಲಾ ಒತ್ತಡವನ್ನು ದೇಹ ಸಹಿಸುತ್ತದೆ. ಕಾರ್ಟಿಸೋಲ್ ಮತ್ತು ಅಡ್ರೆನಲಿನ್ ಮಟ್ಟಗಳು ಅತ್ಯಧಿಕವಾಗಿರುತ್ತವೆ. ಹೀಗಾಗಿ ರಕ್ತದೊತ್ತಡ ಮತ್ತು ಹೃದಯದ ದರ ಏರಿಕೆಯಲ್ಲಿ ಇರುತ್ತವೆ. ಶಾಂತ ಸ್ಥಿತಿಗೆ ಹೋಗುವ ಸಾಮರ್ಥ್ಯವನ್ನು ದೇಹ ಕಳೆದುಕೊಳ್ಳುತ್ತದೆ. ರಕ್ತದೊತ್ತಡ ಪೂರ್ಣವಾಗಿ ಇಳಿಯುವುದಿಲ್ಲ. ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣ ತಪ್ಪುತ್ತದೆ. ರಕ್ತನಾಳಗಳು ಆರಾಮದ ಬದಲಾಗಿ ತೀವ್ರ ಒತ್ತಡದ ಸ್ಥಿತಿಯಲ್ಲಿರುತ್ತವೆ. ಡಿಜಿಟಲ್ ಒತ್ತಡ ನಿದ್ರೆಯ ಮೇಲೂ ಪರಿಣಾಮ ಬೀರುತ್ತದೆ. ಚಲನೆಯನ್ನು ಕಡಿಮೆಗೊಳಿಸುತ್ತದೆ.
ಮಕ್ಕಳ ಪರದೆ ಸಮಯ ಕಡಿಮೆಯಾಗಬೇಕು
ಡೆನ್ಮಾರ್ಕ್ನಲ್ಲಿ ಸಾವಿರ ಮಂದಿ ಭಾಗವಹಿಸಿದ ಅಧ್ಯಯನವೊಂದು ಹೇಳಿರುವ ಪ್ರಕಾರ, “ಮಕ್ಕಳು ಮತ್ತು ಹದಿಹರೆಯದವರಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಟಿವಿ ವೀಕ್ಷಣೆ ಹೆಚ್ಚಾದಾಗ ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್ ಮತ್ತು ಇನ್ಸುಲಿನ್ ಪ್ರತಿರೋಧದಂತಹ ಹೃದಯ-ಚಯಾಪಚಯ ರೋಗಗಳು ಹೆಚ್ಚಾಗಿರುತ್ತವೆ. ಮಕ್ಕಳ ಮತ್ತು ಹದಿಹರೆಯದವರ ಪರದೆಯ ಸಮಯವನ್ನು ಕಡಿಮೆ ಮಾಡುವುದರಿಂದ ದೀರ್ಘಕಾಲದವರೆಗೆ ಹೃದಯ ಮತ್ತು ಚಯಾಪಚಯ ಆರೋಗ್ಯವನ್ನು ರಕ್ಷಿಸಬಹುದಾಗಿದೆ.”
“ಅಧಿಕ ಪರದೆಯಿಂದ ಸಂಭವಿಸಿದ ರೋಗಗಳು ಅಥವಾ ಮರಣಗಳ ಬಗ್ಗೆ ಕೇಳಿದ ನಂತರವೂ ವ್ಯಕ್ತಿಗಳು ತಮ್ಮ ಅಭ್ಯಾಸವನ್ನು ಬದಲಿಸಿಕೊಳ್ಳುವುದಿಲ್ಲ. ತಮಗೆ ಅಂತಹ ಸಮಸ್ಯೆ ಬರಲಾರದು ಎಂದು ಅಭಿಪ್ರಾಯಪಡುತ್ತಾರೆ. ಆರಂಭಿಕ ಚಿಹ್ನೆಗಳ ಕುರಿತಂತೆ ಜನರಲ್ಲಿ ಎಷ್ಟು ಅರಿವಿನ ಕೊರತೆಯಿದೆ ಎನ್ನುವುದು ಆತಂಕಕಾರಿ” ಎನ್ನುತ್ತಾರೆ ಅಧ್ಯಯನದ ಮುಖ್ಯ ವೈದ್ಯರಾದ ಡೇವಿಡ್ ಹಾರ್ನರ್.
ಭಯವಲ್ಲ, ಗಮನ ಕೊಡಬೇಕಾದ ಅಗತ್ಯವಿದೆ
ಪರದೆಯ ಬಗ್ಗೆ ಜನರಲ್ಲಿ ಆತಂಕ ಹುಟ್ಟಿಸುವುದು ಉದ್ದೇಶವಲ್ಲ. ಆದರೆ ಅವುಗಳಿಂದ ಹಾನಿಯುಂಟಾಗುವುದಿಲ್ಲ ಎನ್ನುವ ಭಾವನೆ ತೊಡೆದುಹಾಕಬೇಕು. ಫೋನ್ ಬದಿಗಿಟ್ಟರೆ ಸಿಗುವ ಶಾಂತಿಯನ್ನು ಗಮನಿಸಬೇಕು. ಫೋನ್ ತಲುಪುವ ಕಾತುರತೆಯಿಂದ ಆಗುವ ಒತ್ತಡವನ್ನೂ ಗಮನಿಸಬೇಕು.
ಹೃದಯದ ಆರೋಗ್ಯಕ್ಕಾಗಿ ಅನುಸರಿಸಿ
ಡಾ. ಸುಭಾಷ್ ಚಂದ್ರ ಅವರು ಹೃದಯದ ಆರೋಗ್ಯಕ್ಕಾಗಿ ಪರದೆಯಿಂದ ದೂರ ಇರಲು ಅನುಸರಿಸಬೇಕಾದ ಕೆಲವು ಪರಿಹಾರಗಳನ್ನು ಸೂಚಿಸಿದ್ದಾರೆ. ಅವುಗಳೆಂದರೆ:
* ಪ್ರತಿ 30–40 ನಿಮಿಷಗಳಿಗೊಮ್ಮೆ ಸ್ಕ್ರೀನ್ ಬಳಸಿ ಎದ್ದು ನಿಂತು ವ್ಯಾಯಾಮ ಮಾಡಿ ಅಥವಾ ಕೆಲವು ನಿಮಿಷಗಳ ಕಾಲ ನಡೆಯಿರಿ.
* ಮಲಗುವ ಮೊದಲು 1–2 ಗಂಟೆಗಳ ಕಾಲ ಪರದೆ ನೋಡುವುದನ್ನು ತಪ್ಪಿಸಿ. ಇದರಿಂದ ಉತ್ತಮ ನಿದ್ರೆ ಸಾಧಿಸಬಹುದು.
* ವಾರಕ್ಕೆ ಕನಿಷ್ಠ 150 ನಿಮಿಷಗಳ ಕಾಲ ಮಧ್ಯಮ ದೈಹಿಕ ಚಟುವಟಿಕೆಯನ್ನು ಗುರಿಯಾಗಿರಿಸಿ. ಸಣ್ಣ ನಡಿಗೆ, ಮೆಟ್ಟಿಲು ಹತ್ತುವುದು ಅಥವಾ ಮನೆಕೆಲಸಗಳನ್ನು ಮಾಡುವ ಮೂಲಕ ದೀರ್ಘ ಕುಳಿತುಕೊಳ್ಳುವ ಅವಧಿಗಳನ್ನು ತಪ್ಪಿಸಿ.
* ಸಾಮಾಜಿಕ ಮಾಧ್ಯಮದ ಒತ್ತಡ ಮತ್ತು ನಿರಂತರ ನೊಟಿಫಿಕೇಶನ್ ಕಡಿಮೆ ಮಾಡಲು ಅಪ್ಲಿಕೇಶನ್ ಟೈಮರ್ಗಳನ್ನು ಬಳಸಿ ಅಥವಾ ಡಿಜಿಟಲ್ ಡಿಟಾಕ್ಸ್ ವಿರಾಮಗಳನ್ನು ತೆಗೆದುಕೊಳ್ಳಿ.
* ಮುಖ್ಯವಾಗಿ ನೀವು ಹೆಚ್ಚು ಸ್ಕ್ರೀನ್ ಬಳಸುವವರಾಗಿದ್ದರೆ ನಿಯಮಿತವಾಗಿ ರಕ್ತದೊತ್ತಡ, ಕೊಲೆಸ್ಟ್ರಾಲ್ ಮತ್ತು ಗ್ಲೂಕೋಸ್ ಮಟ್ಟವನ್ನು ಮೇಲ್ವಿಚಾರಣೆ ಮಾಡಿಕೊಳ್ಳಿ.
ಕೃಪೆ: timesofindia.com







