44 ಕೆ.ಜಿ ತೂಕ ಕಳೆದುಕೊಂಡ ಫಿಟ್ನೆಸ್ ಟ್ರೈನರ್ ಹೇಳಿದ ಸರಳ ಸೂತ್ರಗಳು..

PC: x.com/ndtvLifestyle
ದೇಹ ತೂಕ ಇಳಿಸಿಕೊಳ್ಳುವುದು ಸುಲಭವೇನೂ ಅಲ್ಲ; ಆದರೆ ಅಸಾಧ್ಯವೂ ಅಲ್ಲ. ತೂಕ ಕಳೆದುಕೊಳ್ಳುವ ಗುರಿ ಸಾಧನೆಯ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮುಂದುವರಿಸಿದರೆ ಸಾಧ್ಯ ಎನ್ನುವುದನ್ನು ಫಿಟ್ನೆಸ್ ಟ್ರೈನರ್ ಯಶ್ ವರ್ಧನ್ ಸ್ವಾಮಿ ಸಾಧಿಸಿ ತೋರಿಸಿದ್ದಾರೆ.
ಜೀವನಶೈಲಿಯಲ್ಲಿ ಅಲ್ಪ ಮಾರ್ಪಾಡು ಮಾಡಿಕೊಂಡು ಹದಿಮೂರು ವರ್ಷ ಹಿಂದೆ 44 ಕೆ.ಜಿ. ದೇಹತೂಕ ಇಳಿಸಿಕೊಂಡ ಯಶೋಗಾಥೆಯನ್ನು ಫಿಟ್ನೆಸ್ ಟ್ರೈನರ್ ಹಂಚಿಕೊಂಡಿದ್ದಾರೆ.
"ಬೊಜ್ಜು ಎನ್ನುವುದು ದೇಹದ ಸಮಸ್ಯೆ ಮಾತ್ರವಲ್ಲ; ಅದು ಜೀವನದ ಸಮಸ್ಯೆ. ನೀವು ಬೊಜ್ಜು ಹೊಂದಿದ್ದರೆ, ನಿಮ್ಮ ಜೀವನದ ಎಲ್ಲ ಆಯಾಮಗಳು ವ್ಯತ್ಯಯವಾಗುತ್ತವೆ. ನಿಮ್ಮ ಆರೋಗ್ಯ, ಸಂಪತ್ತು, ಸಂಬಂಧ" ಎಂದು ಹೇಳುವ ಅವರು, ದೇಹತೂಕ ಇಳಿಕೆಯ ಪಯಣದಲ್ಲಿ ದೊಡ್ಡ ಸವಾಲು "ನಿಮ್ಮ ಮನಸ್ಸು" ಎಂದು ವಿಶ್ಲೇಷಿಸುತ್ತಾರೆ.
"ಕೊಬ್ಬು ಕರಗಿಸಿಕೊಳ್ಳುವುದು ಹೇಗೆ ಎನ್ನುವುದು ಎಲ್ಲರಿಗೂ ಗೊತ್ತು; ಕಡಿಮೆ ತಿನ್ನುವುದು, ಹೆಚ್ಚು ಚಲನೆ ಮತ್ತು ನಿರಂತರವಾಗಿ ಇದನ್ನು ಮಾಡುವುದು. ಆದರೆ ನಾವು ನಮ್ಮ ಮನಸ್ಸು ಮತ್ತು ಮನಃಶಾಸ್ತ್ರವನ್ನು ನಿಯಂತ್ರಿಸಿಕೊಳ್ಳುವುದಿಲ್ಲ. ಇದರಿಂದಾಗಿ ಸುಧೀರ್ಘ ಅವಧಿಗೆ ನಮ್ಮ ಯೋಜನೆ ಮುಂದುವರಿಸಲು ಅವಕಾಶವಾಗುವುದಿಲ್ಲ" ಎನ್ನುವುದು ಅವರ ಅಭಿಮತ.
"ಭಾರತದಲ್ಲಿ ಬೊಜ್ಜು ಆತಂಕಕಾರಿಯಾಗಿ ಬೆಳೆಯುತ್ತಿದೆ; ನಿಮ್ಮ ಆರೋಗ್ಯವನ್ನು ಬಲಿಪಡೆಯುವ ಸಾಂಕ್ರಾಮಿಕವಾಗಿ ಬೆಳೆದಿದೆ" ಎಂದು ಯಶ್ ಹೇಳುತ್ತಾರೆ. "ಬೊಜ್ಜು ರಾತ್ರೋರಾತ್ರಿ ನಿಮ್ಮ ಆರೋಗ್ಯವನ್ನು ಹಾಳು ಮಾಡುವುದಿಲ್ಲ. ಅದು ನಿಮ್ಮ ಆರೋಗ್ಯವನ್ನು ಕಸಿದುಕೊಳ್ಳುತ್ತದೆ. ನಿಮ್ಮ ಆತ್ಮವಿಶ್ವಾಸ, ಘನತೆ, ನಮ್ಮನ್ನು ನಾವು ಹೇಗೆ ನೋಡಿಕೊಳ್ಳುತ್ತೇವೆ ಎಂಬ ಅಂಶಗಳನ್ನು ಒಂದೊಂದನ್ನೇ ಕಸಿದುಕೊಳ್ಳುತ್ತದೆ" ಎಂದು ಹೇಳುತ್ತಾರೆ.
ನಿಮ್ಮ ತೂಕ ಇಳಿಕೆಯ ಪಯಣ ನಿಮ್ಮ ಅಂತರಂಗದಲ್ಲೇ ಆರಂಭವಾಗಬೇಕು; ನಿರಂತರವಾಗಿ ಹೆಚ್ಚುವರಿ ಕಿಲೋ ಇಳಿಸುವ ಪ್ರಯತ್ನ ಮುಂದುವರಿಯಬೇಕು ಎಂಬ ಸಂದೇಶ ಅವರದ್ದು.







