ಸಕ್ಕರೆ ಮುಕ್ತ ಎರಿಥ್ರಿಟಾಲ್ ಸೇವನೆ ಬಗ್ಗೆ ಮಧುಮೇಹ ತಜ್ಞರು ಎಚ್ಚರಿಸಿರುವುದೇಕೆ?

ಸಾಂದರ್ಭಿಕ ಚಿತ್ರ | Photo Credit : freepik
ಸಕ್ಕರೆ-ಮುಕ್ತ ಎರಿಥ್ರಿಟಾಲ್ ಹೊಂದಿರುವ ಡಯಟ್ ಪಾನೀಯಗಳು, ಪ್ರೊಟೀನ್ ಬಾರ್ಗಳು ಮತ್ತು ಡೆಸರ್ಟ್ಗಳ ಸೇವನೆ ವಿರುದ್ಧ ಮಧುಮೇಹ ತಜ್ಞರು ಎಚ್ಚರಿಕೆ ನೀಡಿರುವುದೇಕೆ?
ಎರಿಥ್ರಿಟಾಲ್ ಎನ್ನುವುದು ಒಂದು ಸಕ್ಕರೆ ಆಲ್ಕೋಹಾಲ್ (ಪಾಲಿಯೋಲ್) ಆಗಿದ್ದು, ಅನೇಕ ಆಹಾರಗಳಲ್ಲಿ ಕಡಿಮೆ ಕ್ಯಾಲರಿ ಸಿಹಿಯಾಗಿ ಬಳಸಲಾಗುತ್ತದೆ. ನೈಸರ್ಗಿಕವಾಗಿಯೂ ಹಣ್ಣುಗಳಲ್ಲಿರುತ್ತದೆ. ಆದರೆ ಗ್ಲುಕೋಸ್ ಹುದುಗಿಸುವ ಮೂಲಕ ವಾಣಿಜ್ಯ ರೂಪದಲ್ಲಿ ತಯಾರಿಸಲಾಗುತ್ತದೆ. ಅನೇಕ ಸಕ್ಕರೆ ಮುಕ್ತ ಆಹಾರಗಳಲ್ಲಿ ಇದನ್ನು ಬಳಸಲಾಗುತ್ತದೆ. ಆದರೆ ತಜ್ಞರು ಇದರ ಬಳಕೆಯ ಬಗ್ಗೆ ಎಚ್ಚರಿಸುತ್ತಿರುವುದೇಕೆ?
ಎರಿಥ್ರಿಟಾಲ್ ಅನ್ನು ಸಾಮಾನ್ಯವಾಗಿ ಡಯಟ್ ಪಾನೀಯ, ಪ್ರೊಟೀನ್ ಬಾರ್ಗಳು ಮತ್ತು ‘ಶೂನ್ಯ ಸಕ್ಕರೆ’ ಡೆಸರ್ಟ್ಗಳಲ್ಲಿ ಬಳಸಲಾಗುತ್ತದೆ. ಸಕ್ಕರೆಯಂತೆ ರುಚಿಯಿದ್ದರೂ ಕ್ಯಾಲರಿಗಳನ್ನು ಹೆಚ್ಚಿಸುವುದಿಲ್ಲ. ಹೀಗಾಗಿ ರಕ್ತದಲ್ಲಿ ಸಕ್ಕರೆಯನ್ನು ಕಾಪಾಡಬೇಕಾದವರು ಅಥವಾ ತೂಕ ಇಳಿಸಬೇಕೆಂದವರು ಇದರ ಉತ್ಪನ್ನಗಳನ್ನು ಸೇವಿಸುತ್ತಾರೆ. ಆದರೆ ಹೊಸ ಸಂಶೋಧನೆಯೊಂದು ಹೇಳಿರುವಂತೆ ದೊಡ್ಡ ಪ್ರಮಾಣದಲ್ಲಿ ರಕ್ತದಲ್ಲಿ ಎರಿಥ್ರಿಟಾಲ್ ಇದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ತರಬಹುದು. ತಜ್ಞರ ಪ್ರಕಾರ ಅಪರೂಪಕ್ಕೆ ಬಳಸಿದರೆ ವಿಷಕಾರಿಯಲ್ಲ. ಆದರೆ ನಿಯಮಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ರೋಗಗಳಿಗೆ ಕಾರಣವಾಗಬಹುದು.
ಸಕ್ಕರೆ ಆಲ್ಕೋಹಾಲ್ ಅನ್ನು ಅತಿಯಾಗಿ ಸೇವಿಸಿದರೆ ಕರುಳಿನಲ್ಲಿ ಸೂಕ್ತವಾಗಿ ಹೀರಿಕೊಳ್ಳದೆ ಇರುವುದರಿಂದ ಹೊಟ್ಟೆ ಉಬ್ಬರಿಸಬಹುದು, ಗ್ಯಾಸ್ ತುಂಬವುದು ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಅವು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯದ ಸಮತೋಲನಕ್ಕೆ ಹಾನಿ ಮಾಡಬಹುದು. ಹೀಗಾಗಿ ಜೀರ್ಣಕ್ರಿಯೆಗೆ ಹಾನಿಯಾಗಬಹುದು ಮತ್ತು ಚಯಾಪಚಯ ಕೆಲಸವನ್ನು ನಿಧಾನಗೊಳಿಸಬಹುದು. ಅದರಿಂದ ಕಾಲಕ್ರಮೇಣ ತೂಕ ನಷ್ಟದ ಬದಲಿಗೆ ತೂಕ ಹೆಚ್ಚಾಗಬಹುದು.
ಎರಿಥ್ರಿಟಾಲ್ನಿಂದ ಹೃದಯರೋಗದ ಅಪಾಯವೇಕೆ?
ತಜ್ಞರು ಹೇಳುವ ಪ್ರಕಾರ ನಮ್ಮ ದೇಹಗಳು ಸಹಜವಾಗಿ ಸಣ್ಣ ಪ್ರಮಾಣದಲ್ಲಿ ಎರಿಥ್ರಿಟಾಲ್ ಉತ್ಪಾದಿಸುತ್ತವೆ. ಆದರೆ ಸಂಸ್ಕರಿತ ಆಹಾರ ಅಥವಾ ಸಿಹಿಯ ಮೂಲಕ ಅದನ್ನು ಸೇವಿಸಿದಾಗ ರಕ್ತದ ಮಟ್ಟ ಹೆಚ್ಚಾಗುತ್ತದೆ. ಎರಿಥ್ರಿಟಾಲ್ನಿಂದ ರಕ್ತ ಹೆಪ್ಪುಗಟ್ಟಲು ನೆರವಾಗುವ ಪ್ಲೇಟ್ಲೆಟ್ಗಳನ್ನು ಹೆಚ್ಚು ಅಂಟಿಕೊಳ್ಳುವಂತೆ ಮಾಡಬಹುದಾಗಿದ್ದು, ರಕ್ತ ಹೆಪ್ಪುಗಟ್ಟುವುದು ಹೆಚ್ಚಾಗುವ ಅಪಾಯವಿದೆ. ಅದರಿಂದಾಗಿ ರಕ್ತನಾಳಗಳನ್ನು ಬ್ಲಾಕ್ ಮಾಡಬಹುದು. ಹಾಗೆ ಹೃದಯ ಸಂಬಂಧಿ ರೋಗ ಅಥವಾ ಪಾರ್ಶ್ವವಾಯುವಿಗೆ ಕಾರಣವಾಗಲಿದೆ. ಈಗಾಗಲೇ ಅದರ ಅಪಾಯವಿರುವವರ ಮೇಲೆ ಹೆಚ್ಚು ಪರಿಣಾಮ ಬೀರಬಹುದು.
ಹಾಗಿದ್ದರೂ ಮಧುಮೇಹಿಗಳಿಗೆ ಸಕ್ಕರೆಗಿಂತ ಸುರಕ್ಷಿತವೆ?
ಸಕ್ಕರೆ ಮಾಡುವಂತೆ ಎರಿಥ್ರಿಟಾಲ್ ಗ್ಲುಕೋಸ್ ಅಥವಾ ಇನ್ಸುಲಿನ್ ಪ್ರಮಾಣವನ್ನು ಏರಿಸುವುದಿಲ್ಲ. ಆದರೆ ಮಧುಮೇಹಿಗಳಿಗೆ ಹೃದಯ ರೋಗದ ಅಪಾಯ ಹೆಚ್ಚಿಸುತ್ತದೆ. ಸಿಹಿಯು ರಕ್ತ ಹೆಪ್ಪುಗಟ್ಟುವ ಅಪಾಯವನ್ನು ಹೆಚ್ಚು ಮಾಡುತ್ತಿದ್ದಲ್ಲಿ, ಅದನ್ನು ಬಳಸದೆ ಇರುವುದು ಉತ್ತಮ. ಅದಕ್ಕೆ ಬದಲಾಗಿ ಸಿಹಿಯ ನೈಸರ್ಗಿಕ ಪರ್ಯಾಯಗಳಾಗಿರುವ ಸ್ಟಿವಿಯ ಅಥವಾ ಮಾಂಕ್ ಫ್ರುಟ್ ಸಕ್ಕರೆಗಳನ್ನು ಬಳಸಬಹುದು. ಅದರಲ್ಲಿ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇರುತ್ತದೆ. ಮುಖ್ಯವಾಗಿ ಸಿಹಿ ರುಚಿಯ ಆಹಾರಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತವೆ.
ಸಿಹಿಯನ್ನು ಸುರಕ್ಷಿತವಾಗಿ ಹೇಗೆ ಬಳಸಬಹುದು?
ಆರೋಗ್ಯಕರವೆಂದರೆ ಸಿಹಿ ತಿನ್ನುವುದು ಕಡಿಮೆ ಮಾಡುವುದು. ಅಲ್ಟ್ರಾ-ಪ್ರೊಸೆಸ್ಡ್ ಸಕ್ಕರೆ ಮುಕ್ತ ತಿನಿಸುಗಳನ್ನು ಕನಿಷ್ಠ ಪ್ರಮಾಣದಲ್ಲಿ ಸೇವಿಸಬೇಕು. ಬದಲಾಗಿ ಹಣ್ಣುಗಳಿಂದ ಸಿಹಿ ಸೇವಿಸಬಹುದು. ಅವುಗಳಿಂದ ಫೈಬರ್, ಆಂಟಿ ಆಕ್ಸಿಡಂಟ್ಗಳು ಮತ್ತು ವಿಟಮಿನ್ಗಳು ಸಿಗುತ್ತವೆ. ದೇಹಕ್ಕೆ ಜಲಸಂಚಯನ ಚೆನ್ನಾಗಿರಬೇಕು, ನಿದ್ರೆ ಚೆನ್ನಾಗಿ ಮಾಡಬೇಕು. ಸಕ್ಕರೆ ಮುಕ್ತ ಎಂದ ಮಾತ್ರಕ್ಕೆ ಅಪಾಯ ಮುಕ್ತ ಎಂದುಕೊಳ್ಳಬಾರದು. ಲೇಬಲ್ಗಳನ್ನು ಓದಬೇಕು. ಏನೇ ಸೇವಿಸಿದರೂ ಹದದಲ್ಲಿ ತಿನ್ನಬೇಕು. ಉತ್ತಮ ಸಿಹಿಯೆಂದರೆ ಸಮತೋಲನವೇ ವಿನಾ ರಾಸಾಯನಿಕ ಪರ್ಯಾಯವಲ್ಲ.
ಕೃಪೆ: ಇಂಡಿಯನ್ ಎಕ್ಸ್ಪ್ರೆಸ್







