ಹೃದಯ ಜೋಪಾನವಿರಲಿ
ಇಂದು ವಿಶ್ವ ಹೃದಯ ದಿನ

ಹೃದಯ ಸಂಬಂಧಿ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ, ಜಗತ್ತಿನಾದ್ಯಂತ ಸೆಪ್ಟಂಬರ್ 29ನ್ನು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತಿದೆ.
2000ನೇ ಇಸವಿಯಲ್ಲಿ ಆರಂಭವಾದ ಈ ಆಚರಣೆಯನ್ನು ಪ್ರತೀ ವರ್ಷ ಸೆಪ್ಟಂಬರ್ 29ರಂದು ಬೇರೆ ಬೇರೆ ಘೋಷವಾಕ್ಯಗಳನ್ನು ಇಟ್ಟುಕೊಂಡು ಆಚರಿಸಲಾಗುತ್ತಿದೆ. 2011ರವರೆಗೆ ಸೆಪ್ಟಂಬರ್ ತಿಂಗಳ ಕೊನೆಯ ರವಿವಾರದಂದು ಆಚರಿಸಲಾಗುತ್ತಿತ್ತು. 2012ರಿಂದ ಖಾಯಂ ಆಗಿ ಸೆಪ್ಟಂಬರ್ 29ರಂದು ವಿಶ್ವ ಹೃದಯ ದಿನ ಎಂದು ಆಚರಿಸಲಾಗುತ್ತದೆ. 2026ರ ಘೋಷವಾಕ್ಯ ‘Don't Miss a Beat’ ಎಂದರೆ ನಿಮ್ಮ ಹೃದಯದ ಬಡಿತವನ್ನು ಕಳೆದುಕೊಳ್ಳಬೇಡಿ ಎಂಬುದಾಗಿದೆ. ಪ್ರತೀ ವರ್ಷ ಜಗತ್ತಿನಾದ್ಯಂತ ಕನಿಷ್ಠವೆಂದರೂ 20 ಮಿಲಿಯನ್ ಜನರು ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳಿಂದ ಸಾಯುತ್ತಾರೆ. ಕ್ಯಾನ್ಸರ್, ಏಡ್ಸ್, ಮಲೇರಿಯಾ ಈ ಮೂರು ರೋಗಗಳನ್ನು ಒಟ್ಟು ಸೇರಿಸಿದರೆ ಆಗುವ ವರ್ಷಾವಧಿ ಮರಣದ ಸಂಖ್ಯೆಗಿಂತಲೂ ಹೃದಯ ಸಂಬಂಧಿ ರೋಗಗಳಿಂದ ಉಂಟಾಗುವ ಮರಣ ಹೆಚ್ಚು ಎಂದು ಅಂಕಿ ಅಂಶಗಳಿಂದ ಸಾಬೀತಾಗಿದೆ. ಇದೀಗ ಮಾರಣಾಂತಿಕ ಕಾಯಿಲೆಯ ಪಟ್ಟಿಯ ಮೊದಲ ಸ್ಥಾನದಲ್ಲಿ ಹೃದಯ ಸಂಬಂಧಿ ರೋಗ ವಿರಾಜಮಾನವಾಗಿದೆ.
ಆಧುನಿಕತೆ ಬೆಳೆದಂತೆಲ್ಲಾ ಜನರು ಹೆಚ್ಚು ಆಲಸಿಗಳಾಗಿ ದೈಹಿಕ ಕಸರತ್ತು ಕಡಿಮೆಯಾಗಿ ಮಾನಸಿಕ ಒತ್ತಡ ಜಾಸ್ತಿಯಾಗಿ ಹೊಸಹೊಸ ರೋಗಗಳು ಹುಟ್ಟ ತೊಡಗಿದೆ ಮತ್ತು ಬೆಳವಣಿಗೆ ಹೊಂದಿದ ರಾಷ್ಟ್ರಗಳಲ್ಲಿ ಹೃದಯಾಘಾತ ಮುಂತಾದ ಹೃದಯ ಸಂಬಂಧಿ ರೋಗಗಳು ಬಹುಮುಖ್ಯ ರೋಗವಾಗಿ ಹೊರಹೊಮ್ಮಿದೆ. ಭಾರತದಂತಹ ಬೆಳವಣಿಗೆ ಹೊಂದುತ್ತಿರುವ ದೇಶಗಳಲ್ಲಿಯೂ ಹೃದಯಾಘಾತ ಮುಂತಾದ ರೋಗಗಳು ಬದಲಾಗುತ್ತಿರುವ ಜೀವನ ಪದ್ಧತಿ, ನಗರೀಕರಣ ಮತ್ತು ಕಲುಷಿತ ವಾತಾವರಣದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿದೆ.
ಮೊದಲೇ ಬಡತನ, ಅನಕ್ಷರತೆ ಮೂಢನಂಬಿಕೆಗಳ ಬೀಡಾಗಿರುವ ಭಾರತ ದೇಶಕ್ಕೆ ಬದಲಾಗುತ್ತಿರುವ ಕಾಲಘಟ್ಟದಲ್ಲಿ ಆಧುನೀಕರಣ, ವ್ಯಾಪಾರೀಕರಣ, ಕೈಗಾರೀಕರಣ ಮತ್ತು ಕಲುಷಿತ ವಾತಾವರಣದಿಂದಾಗಿ ಹೃದಯ ಸಂಬಂಧಿ ರೋಗಗಳು ಬಹು ದೊಡ್ಡ ಸಮಸ್ಯೆಯಾಗಿ ಬೆಳೆದು ನಿಂತಲ್ಲಿ ಆಶ್ಚರ್ಯವೇನಿಲ್ಲ. ಭಾರತ ದೇಶವೊಂದರಲ್ಲಿಯೇ 30 ಲಕ್ಷ ಮಂದಿ ವಾರ್ಷಿಕವಾಗಿ ಹೃದಯಾಘಾತಕ್ಕೆ ತುತ್ತಾಗುತ್ತಾರೆ. ಇದರಲ್ಲಿ 15 ಲಕ್ಷ ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ ಇದರಲ್ಲಿ ಶೇ. 15 ಮಂದಿ ಆಸ್ಪತ್ರೆ ತಲುಪುವ ಮೊದಲೇ ಜೀವ ಕಳೆದುಕೊಳ್ಳುತ್ತಾರೆ. ಇದರಲ್ಲಿ ಹೆಚ್ಚಿನವರು 30 ಮತ್ತು 40ರ ಹರೆಯದವರು ಆಗಿರುವುದು ವಿಷಾದನೀಯ. ಆದರೆ ಸಮಾಧಾನಕರ ವಿಚಾರವೆಂದರೆ ಇದರಲ್ಲಿ 80 ಶೇ.ಹೃದಯಾಘಾತವನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿದೆ.
ಹೃದಯ ರೋಗಗಳನ್ನು ತಡೆಗಟ್ಟುವುದು ಹೇಗೆ?
ಹೆಚ್ಚಿನ ಹೃದಯಾಘಾತ ಮತ್ತು ಹೃದಯ ಸಂಬಂಧಿ ರೋಗಗಳನ್ನು ಉತ್ತಮ ಜೀವನ ಶೈಲಿ ಮತ್ತು ಆಹಾರ ಪದ್ಧತಿಗಳಿಂದ ತಡೆಗಟ್ಟಬಹುದು ಎನ್ನುವುದು ಎಲ್ಲರಿಗೂ ತಿಳಿದ ವಿಚಾರ.
1. ದೈಹಿಕ ವ್ಯಾಯಾಮ
ದೈಹಿಕ ವ್ಯಾಯಾಮ ಅಥವಾ ಕಸರತ್ತು ಹೃದಯದ ಆರೋಗ್ಯಕ್ಕೆ ಅತೀ ಅವಶ್ಯಕ. ಕನಿಷ್ಠ ಪಕ್ಷ ದಿನಕ್ಕೆ 30ನಿಮಿಷಗಳ ಬಿರುಸು ನಡಿಗೆ ಮಾಡಲೇ ಬೇಕು. ಹೀಗೆ ಮಾಡಿದಲ್ಲಿ ಹೃದಯಾಘಾತ ಶೇ. 60ರಷ್ಟು ಕಡಿಮೆಯಾಗುತ್ತದೆ ಎಂದು ಸಂಶೋಧನೆಗಳು ಹೇಳಿವೆ. ಈಗಿನ ಒತ್ತಡದ ಧಾವಂತದ ಬದುಕಿನಲ್ಲಿ ಎಲ್ಲವೂ ಬಹಳ ವೇಗದಲ್ಲಿ ನಡೆಯುತ್ತದೆ. ಅತಿಯಾದ ಕೆಲಸದ ಒತ್ತಡ, ತೀವ್ರ ತರವಾದ ಪೈಪೋಟಿ ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದ ರಸದೂತಗಳ ಸ್ರವಿಕೆ ಏರುಪೇರಾಗಿ ಹೃದಯದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅತಿಯಾದ ಮಾನಸಿಕ ಒತ್ತಡ ಕೂಡಾ ಹೃದಯಘಾತಕ್ಕೆ ಪರೋಕ್ಷವಾಗಿ ಕಾರಣವಾಗಬಲ್ಲದು.
3. ಅನಾರೋಗ್ಯಕರವಾದ ಆಹಾರ ಪದ್ಧತಿ
ನಮ್ಮ ಹಿರಿಯರು ಯಾವಾಗಲೂ ಹೇಳುವ ಮಾತು ‘‘ಊಟ ಬಲ್ಲವನಿಗೆ ರೋಗವಿಲ್ಲ’’ ಎಂಬುದು ಅಕ್ಷರಶಃ ಸತ್ಯ. ನಮ್ಮ ಆಹಾರಕ್ಕೂ ಹೃದಯಕ್ಕೂ ನೇರ ಸಂಬಂಧವಿದೆ. ಅತಿಯಾದ ಕೊಬ್ಬಿನಂಶ ಇರುವ, ಅತಿಯಾದ ಸೋಡಿಯಂ ಇರುವ ಕರಿದ ತಿಂಡಿಗಳು ಮತ್ತು ಸಿದ್ಧ ಆಹಾರವನ್ನು ತೆಗೆದುಕೊಳ್ಳಬಾರದು. ಸಿದ್ಧ ಆಹಾರಗಳು ಮತ್ತು ಪರಿಷ್ಕರಿಸಿದ ಆಹಾರಗಳಿಗೆ ಹೆಚ್ಚಾಗಿ ಹೆಚ್ಚು ಪ್ರಕ್ಟೋಸ್ ಇರುವ ಸಿಹಿಕಾರಕ ವಸ್ತುಗಳನ್ನು ಸೇರಿಸಲಾಗುತ್ತದೆ. ಇಂತಹ ಆಹಾರ ಪದಾರ್ಥಗಳು ರಕ್ತದಲ್ಲಿನ ಟೈಗ್ಲಿಸರೈಡ್ ಎಂಬ ಕೊಬ್ಬಿನ ಅಂಶವನ್ನು ಹೆಚ್ಚು ಮಾಡಿ ಹೃದಯಾಘಾತದ ಸಂಭವವನ್ನು ಹೆಚ್ಚು ಮಾಡಬಹುದು. ಆಮ್ಲಯುಕ್ತ ಪೇಯಗಳು ಮತ್ತು ರಾಸಾಯನಿಕ ಮಿಶ್ರಿತ ಸಿದ್ಧ ಆಹಾರಗಳೂ ಕೂಡಾ ಹೃದಯದ ಆರೋಗ್ಯಕ್ಕೆ ಮಾರಕವಾಗಬಲ್ಲದು.
3. ಜೀವನ ಶೈಲಿಯ ಬದಲಾವಣೆ
ನಾವು ಕೆಲಸ ಮಾಡುವ ಸ್ಥಳಗಳಲ್ಲಿ ಮಾನಸಿಕ ಒತ್ತಡದ ವಾತಾವರಣವಿದ್ದಲ್ಲಿ ಹೃದಯದ ಮೇಲೆ ದುಷ್ಪರಿಣಾಮ ಬೀರಬಹುದು. ಕೆಲಸದ ಒತ್ತಡದಿಂದ ನಿದ್ದೆ ಕಡಿಮೆಯಾದಲ್ಲಿ ಹೃದಯದ ರಕ್ತನಾಳಗಳಲ್ಲಿ ಕ್ಯಾಲ್ಸಿಯಂ ಮತ್ತು ಇತರ ಲವಣಗಳು ಶೇಖರಣೆಗೊಂಡು ಹೃದಯಾಘಾತವಾಗುವ ಸಂಭವ ಜಾಸ್ತಿ ಇರುತ್ತದೆ. ಅದೇ ರೀತಿ ಮಾನಸಿಕ ಒತ್ತಡದಿಂದ ರಸದೂತಗಳ ಏರುಪೇರು ಉಂಟಾಗಿ ಹೃದಯಕ್ಕೆ ಮಾರಕವಾಗಬಹುದು. ಅಮೆರಿಕದ ಹೃದಯ ಸಂಘದ ಅಂಕಿಅಂಶಗಳ ಪ್ರಕಾರ ದಿನದಲ್ಲಿ 2 ಗಂಟೆಗಳಿಗಿಂತಲೂ ಜಾಸ್ತಿ ಹೊತ್ತು ಟಿವಿ ನೋಡುಗರಲ್ಲಿ ಶೇ. 125ಕ್ಕೂ ಹೆಚ್ಚು ಹೃದಯಾಘಾತವಾಗುವ ಸಂಭವವಿರುತ್ತದೆ. ಅತಿಯಾದ ಮದ್ಯಪಾನ, ಧೂಮಪಾನ ಖಂಡಿತವಾಗಿಯೂ ಹೃದಯ ರೋಗಗಳಿಗೆ ನೇರ ರಹದಾರಿ ನೀಡಬಹುದು. ಧೂಮಪಾನ, ಮದ್ಯಪಾನ ಬರೀ ಹೃದಯಕ್ಕೆ ಮಾತ್ರವಲ್ಲ, ದೇಹದ ಎಲ್ಲಾ ಅಂಗಾಂಗಗಳಿಗೆ ಮತ್ತು ಸಮಾಜದ ಒಳಿತಿಗೆ ಯಾವತ್ತೂ ಪೂರಕವಲ್ಲ.
4.ಬೊಜ್ಜು, ಅನುವಂಶಿಯತೆ ಮತ್ತಿತರ ಕಾರಣಗಳು
ಅತಿಯಾದ ಬೊಜ್ಜು ಯಾವತ್ತೂ ಹೃದಯದ ಬದ್ಧವೈರಿ. ಇದು ಯಾವ ಕಾಲಕ್ಕೂ ಹೃದಯಾಘಾತಕ್ಕೆ ಮುನ್ನುಡಿ ಬರೆಯಬಹುದು. ಈಗಿನ ಬದಲಾದ ಆಹಾರ ಪದ್ಧತಿಯಿಂದಾಗಿ, ಚಿಕ್ಕ ಮಕ್ಕಳಲ್ಲೂ ಬೊಜ್ಜು ಜಾಸ್ತಿಯಾಗುತ್ತಿದೆ. ಮೊದಲೆಲ್ಲಾ 50, 60ರ ಆಸುಪಾಸಿನಲ್ಲಿ ಆಗುತ್ತಿದ್ದ ಹೃದಯಾಘಾತ ಈಗೀಗ ಮೂವತ್ತರ ಯುವಕರಲ್ಲಿ ಬರುವುದು ನಿಜಕ್ಕೂ ಬಹಳ ಆಘಾತಕಾರಿ. ಅದೇ ರೀತಿ ಅನುವಂಶೀಯತೆ ಕೂಡ ಹೃದ್ರೋಗಕ್ಕೆ ಕಾರಣವಾಗಬಹುದು. ವಂಶವಾಹಿನಿಗಳ ಮುಖಾಂತರ ಬರುವ ಹೃದಯಘಾತಕ್ಕೆ ಜೀವನಶೈಲಿ, ಆಹಾರ ಪದ್ಧತಿಯಲ್ಲಿ ಹೆಚ್ಚಿನ ಮಾರ್ಪಾಡು ಮಾಡಿ ಹೃದಯಕ್ಕೆ ಹೆಚ್ಚು ತೊಂದರೆ ಆಗದಂತೆ ನಿಗಾ ವಹಿಸಬೇಕು. ಅದೇ ರೀತಿ ಅಧಿಕ ರಕ್ತದ ಒತ್ತಡ ಮತ್ತು ಮಧುಮೇಹ ರೋಗಿಗಳು, ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವವರು ಮತ್ತು ದೇಹದ ತೂಕ ಜಾಸ್ತಿ ಇರುವವರು, ಸಾಕಷ್ಟು ಮುಂಜಾಗರೂಕತೆ ವಹಿಸಿ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಮಾರ್ಪಾಡು ಮಾಡಿದಲ್ಲಿ ಹೃದ್ರೋಗ ಸಂಬಂಧಿ ರೋಗಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು.






