ಒಂದೇ ಬಾರಿಗೆ ಬಹುಕೆಲಸ ಮಾಡುವುದು ಶಕ್ತಿಯಲ್ಲ, ಮೆದುಳಿಗೆ ಸುಸ್ತು ನೀಡುವ ಅಭ್ಯಾಸ!

ಸಾಂದರ್ಭಿಕ ಚಿತ್ರ | Photo Credit : freepik
ಆಗಾಗ್ಗೆ ಕಾರ್ಯ ಬದಲಾಯಿಸುವುದರಿಂದ ಮೆದುಳಿನ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ. ಹೀಗಾಗಿ ಮಾನಸಿಕ ಆಯಾಸ ಉಂಟಾಗಿ ಗಮನ ಕಡಿಮೆಯಾಗುತ್ತದೆ.
ಬಹಳಷ್ಟು ಮಂದಿ ಒಂದೇ ಸಮಯಕ್ಕೆ ಎರಡೆರಡು ಕೆಲಸ ಮಾಡುವುದು ಮಹಾನ್ ಸಾಧನೆ ಎಂದುಕೊಳ್ಳುವುದು ಇದೆ. ವಾಹನ ಚಲಾಯಿಸುವಾಗ ಫೋನ್ನಲ್ಲಿ ಮಾತಾಡುವುದು, ಸಭೆಗಳ ಸಮಯದಲ್ಲಿ ಮೊಬೈಲ್ ಸಂದೇಶ ಕಳುಹಿಸುವುದು, ಟೆಲಿವಿಜನ್ ನೋಡುವಾಗ ಲಾಂಡ್ರಿ ಮಡಚುವುದು ಇತ್ಯಾದಿ ಅನೇಕ ಕೆಲಸಗಳನ್ನು ಏಕಕಾಲದಲ್ಲಿ ಮಾಡುವಲ್ಲಿ ಹೆಮ್ಮೆ ಪಡುತ್ತಾರೆ. ಈ ಸಾಮರ್ಥ್ಯವನ್ನು ಬಹುತೇಕ ದಕ್ಷತೆಯ ಸಂಕೇತವಾಗಿ ಅಥವಾ ಅತಿಶಕ್ತಿ ಎಂದು ನೋಡಲಾಗುತ್ತದೆ. ಆದರೆ ನರವಿಜ್ಞಾನಿಗಳ ಪ್ರಕಾರ ಬಹುಕಾರ್ಯ ನಿಜವಾಗಿಯೂ ಸಾಧ್ಯವಿಲ್ಲ. ನಾವು ಬಹು ಕಾರ್ಯ ಎಂದು ಕರೆಯುವುದು ವಾಸ್ತವದಲ್ಲಿ ಕಾರ್ಯಬದಲಾವಣೆಯಾಗಿದ್ದು, ಮೆದುಳಿಗೆ ಹೊಡೆತ ಕೊಡಲಿದೆ!
ಕಾರ್ಯ ಬದಲಾವಣೆಯಿಂದ ಮೆದುಳಿನ ಶಕ್ತಿಯ ಸೋರಿಕೆ
ನ್ಯೂರೋಲೀಪ್ನ ಸಂಸ್ಥಾಪಕ ಕುಮಾರ್ ಬಾಗ್ರೊಡಿಯ ಪ್ರಕಾರ, ಪ್ರತಿ ಬಾರಿ ಮೆದುಳು ಒಂದು ಕಾರ್ಯದಿಂದ ಇನ್ನೊಂದಕ್ಕೆ ಬದಲಾದಾಗ ಅದು ಮೊದಲನೆ ಸಂದರ್ಭ ತೊರೆದು ಎರಡನೆಯದನ್ನು ಗ್ರಹಿಸಬೇಕು. ಈ ನಿರಂತರ ಬದಲಾವಣೆಗೆ ಹೆಚ್ಚಿನ ಶಕ್ತಿ ಬಳಕೆಯಾಗುತ್ತದೆ. ದೇಹದ ತೂಕದ ಶೇ 2ರಷ್ಟು ಮಾತ್ರ ಹೊಂದಿದ್ದರೂ, ಮೆದುಳು ದೇಹದ ಶಕ್ತಿಯ ಮೂರನೇ ಒಂದು ಭಾಗವನ್ನು ಬಳಸುತ್ತದೆ. ಆಗಾಗ್ಗೆ ಕಾರ್ಯ ಬದಲಾಯಿಸುವುದರಿಂದ ಮೆದುಳಿನ ಮೇಲೆ ಅನಗತ್ಯ ಒತ್ತಡ ಉಂಟಾಗುತ್ತದೆ. ಹೀಗಾಗಿ ಮಾನಸಿಕವಾಗಿ ವ್ಯಕ್ತಿ ಆಯಾಸಗೊಂಡು ಗಮನ ಕಡಿಮೆಯಾಗುತ್ತದೆ.
ಬಹುಕಾರ್ಯದಿಂದ ಗಮನ ದುರ್ಬಲ
ಬಹುಕಾರ್ಯದ ಅಭ್ಯಾಸವು ಭಾಗಶಃ ಗಮನದ ಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಮೆದುಳಿಗೆ ತರಬೇತಿ ನೀಡುತ್ತದೆ. ಕಾಲಾನಂತರದಲ್ಲಿ ಇದು ಏಕಾಗ್ರತೆ ದುರ್ಬಲಗೊಳಿಸುತ್ತದೆ ಮತ್ತು ಆಳವಾದ, ಕೇಂದ್ರೀಕೃತ ಕೆಲಸದಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಬಹುಕಾರ್ಯದ ಹೊರತಾಗಿಯೂ ಯಶಸ್ಸು ದೊರೆಯಲಿದೆ. ಬಹುಕಾರ್ಯದಿಂದ ಯಶಸ್ಸು ದೊರೆಯುತ್ತದೆ ಎನ್ನುವ ಭಾವನೆ ತಪ್ಪು. ಹೀಗೆ ದೀರ್ಘಕಾಲದ ಗಮನಹರಣದ ಮಾದರಿಗಳು ಸುಸ್ತು, ಚಡಪಡಿಕೆ ಮತ್ತು ಆತಂಕಕ್ಕೆ ಕಾರಣವಾಗಲಿದೆ.
ನರವಿಜ್ಞಾನಿ ರಿಚರ್ಡ್ ಸೈಟೋವಿಕ್ ತಮ್ಮ “ಯುವರ್ ಸ್ಟೋನ್ ಏಜ್ ಬ್ರೈನ್ ಇನ್ ದಿ ಸ್ಕ್ರೀನ್ ಏಜ್” ಎಂಬ ಪುಸ್ತಕದಲ್ಲಿ ಮಾನವರು ಬಹುಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಶಕ್ತಿಯ ಕೊರತೆ ಹೊಂದಿರುತ್ತಾರೆ ಎನ್ನುವುದನ್ನು ಒತ್ತಿ ಹೇಳುತ್ತಾರೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದ ಪ್ರಯೋಗಗಳಲ್ಲಿ ಬಹುಕಾರ್ಯ ನಿರ್ವಹಿಸುವವರು ಅಪ್ರಸ್ತುತ ಮಾಹಿತಿ ಶೋಧಿಸಲು, ಆಲೋಚನೆಗಳನ್ನು ಸಂಘಟಿಸಲು ಮತ್ತು ಕಾರ್ಯಗಳನ್ನು ಪರಿಣಾಮಕಾರಿಯಾಗಿ ಬದಲಿಸಲು ಹೆಣಗಾಡುತ್ತಾರೆ ಎಂದು ಖಚಿತವಾಗಿವೆ.
ಒಂದೇ ಕಾರ್ಯಕ್ಕೆ ಸಜ್ಜಾಗಿರುವ ಮೆದುಳು
ವಿಕಸನದ ದೃಷ್ಟಿಕೋನದಲ್ಲಿ ನೋಡಿದಾಗ ಮಾನವನ ಮೆದುಳು ಗಮನ ಕೇಂದ್ರೀಕರಿಸಲೆಂದೇ ಸಜ್ಜಾಗಿದೆ. ಉದಾಹರಣೆಗೆ ನಿರಂತರ ಸಂಭಾಷಣೆಗಳು ಅಥವಾ ಅಡೆತಡೆಯಿಲ್ಲದ ಸಮಸ್ಯೆ ಪರಿಹಾರಕ್ಕಾಗಿ ಸಿದ್ಧವಾಗಿದೆ. ಆದರೆ ಒಂದೇ ಬಾರಿಗೆ ಒಂದಕ್ಕಿಂತ ಹೆಚ್ಚು ಮಾಹಿತಿ ಮೆದುಳಿಗೆ ತುಂಬಿಸುವ ಆಧುನಿಕ ಅಭ್ಯಾಸಗಳು ವಿನ್ಯಾಸಕ್ಕೆ ವಿರುದ್ಧವಾಗಿವೆ. ಜನರು ಒಂದು ಸಮಯಕ್ಕೆ ಒಂದೇ ಕಾರ್ಯದತ್ತ ಗಮನಹರಿಸಿದಾಗ ವೇಗವಾಗಿ ಮತ್ತು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುತ್ತಾರೆ ಎಂದು ಅಧ್ಯಯನಗಳು ಸಾಬೀತು ಮಾಡಿವೆ.
ಬಹು ಕಾರ್ಯದ ಆರೋಗ್ಯ ಅಪಾಯಗಳು
ಬಹು ಕಾರ್ಯದ ಪರಿಣಾಮವು ಉತ್ಪಾದಕತೆಯನ್ನು ಮೀರಿದೆ. ನಿರಂತರವಾಗಿ ಕೆಲಸ ಬದಲಿಸುವುದರಿಂದ ಒತ್ತಡದ ಮಟ್ಟ, ರಕ್ತದೊತ್ತಡ ಮತ್ತು ಹೃದಯ ಬಡಿತ ತಾತ್ಕಾಲಿಕವಾಗಿ ಹೆಚ್ಚಿಸಬಹುದು ಎಂದು ವೈಜ್ಞಾನಿಕ ಪುರಾವೆಗಳು ತೋರಿಸಿವೆ. ಅಧ್ಯಯನಗಳ ಪ್ರಕಾರ ದೀರ್ಘಕಾಲದಲ್ಲಿ ಈ ಪರಿಣಾಮಗಳು ಆತಂಕ, ಖಿನ್ನತೆಗೆ ಕಾರಣವಾಗಬಹುದು ಮತ್ತು ಸೆರೆಬ್ರೊವಾಸ್ಕ್ಯುಲರ್ ರೋಗ ಮತ್ತು ಅರಿವಿನ ಕುಸಿತದ ಅಪಾಯ ಹೆಚ್ಚಿಸಬಹುದು.
ಅಪಾಯವನ್ನು ಕಡಿಮೆಗೊಳಿಸುವುದು ಹೇಗೆ?
* ನರವಿಜ್ಞಾನಿಗಳು ಕೆಲವು ಸಲಹೆಗಳನ್ನು ನೀಡಿದ್ದಾರೆ:
* ಒಂದು ಕಾರ್ಯದ ಮೇಲೆ ಕನಿಷ್ಠ 20 ನಿಮಿಷ ಗಮನಹರಿಸಿ ನಂತರ ಬೇರೆ ಕೆಲಸಕ್ಕೆ ಹೋಗಬೇಕು.
* ಇಮೇಲ್ಗಳನ್ನು ನಿರಂತರವಾಗಿ ಪರೀಕ್ಷಿಸುವ ಬದಲಾಗಿ ನಿರ್ದಿಷ್ಟ ವೇಳಾಪಟ್ಟಿ ನಿಗದಿಗೊಳಿಸಿ.
* ಅಧಿಸೂಚನೆಗಳನ್ನು ಆಫ್ ಮಾಡಿ ಶಾಂತ ಸ್ಥಳದಲ್ಲಿ ಕೆಲಸ ಮಾಡುವ ಮೂಲಕ ಅಡಚಣೆಯನ್ನು ತಪ್ಪಿಸಿ.
* ಮಾನಸಿಕವಾಗಿ ಅತಿಯಾದ ಭಾರ ಹೊರುವುದನ್ನು ಕಡಿಮೆಗೊಳಿಸಲು ಕಾರ್ಯಕ್ಷೇತ್ರವನ್ನು ಒಂದಕ್ಕೆ ಮಿತಿಗೊಳಿಸಿ.
* ಕೈಯಲ್ಲಿರುವ ಕಾರ್ಯ ಪೂರ್ಣಗೊಳ್ಳಲು ಸಾವಧಾನತೆಯಿಂದ ಇರುವುದನ್ನು ಅಭ್ಯಾಸ ಮಾಡಿ.
ಅಂತಿಮವಾಗಿ ಹೇಳುವುದಾದಲ್ಲಿ, ಬಹುಕಾರ್ಯವು ಶಕ್ತಿಯಲ್ಲ. ಬದಲಾಗಿ ಮಾನಸಿಕವಾಗಿ ಶಕ್ತಿ ಖಾಲಿ ಮಾಡುವುದು. ಗಮನವನ್ನು ದುರ್ಬಲಗೊಳಿಸುವುದು ಮತ್ತು ದೀರ್ಘಕಾಲೀನ ಆರೋಗ್ಯ ಪರಿಣಾಮಗಳನ್ನು ಆಹ್ವಾನಿಸುವುದಾಗುತ್ತದೆ. ಅಧಿಕ ಉತ್ಪಾದಕತೆ ಮತ್ತು ಯೋಗಕ್ಷೇಮದ ಮಾರ್ಗವೆಂದರೆ ಒಂದು ಬಾರಿಗೆ ಒಂದೇ ಕೆಲಸ ಮಾಡುವುದು ಮತ್ತು ಅದರತ್ತ ಸಂಪೂರ್ಣ ಗಮನಹರಿಸುವುದು.







