ರಾಷ್ಟ್ರ ರಾಜಧಾನಿಯಲ್ಲಿ ಬೆಳ್ಳಂಬೆಳಿಗ್ಗೆ ಅಕಾಲಿಕ ಮಳೆ; ತಾಪಮಾನ ಕುಸಿಯುವ ಸಾಧ್ಯತೆ

PC: x.com/IndiaToday
ಹೊಸದಿಲ್ಲಿ: ದೆಹಲಿಯ ವಿವಿಧೆಡೆಗಳಲ್ಲಿ ಶುಕ್ರವಾರ ಅಕಾಲಿಕ ಮಳೆ ಬಿದ್ದಿದ್ದು, ಪಶ್ಚಿಮ ಪ್ರಕ್ಷುಬ್ಧತೆಯ ಪರಿಣಾಮ ತುಂತುರು ಮಳೆ ಮುಂದುವರಿಯುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತುಂತುರು ಮಳೆಯ ಜತೆಗೆ ಗುಡುಗು, ಮಿಂಚು ಹಾಗೂ 30-40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಗುರುವಾರ ಅಪರೂಪಕ್ಕೆ ಎಂಬಂತೆ ಗರಿಷ್ಠ ಉಷ್ಣಾಂಶ 27.1 ಡಿಗ್ರಿ ಸೆಲ್ಷಿಯಸ್ ಗೆ ಏರಿತ್ತು. ಇದು ವಾಡಿಕೆಯ ತಾಪಮಾನಕ್ಕಿಂತ ಏಳು ಡಿಗ್ರಿಯಷ್ಟು ಅಧಿಕ. ಕಳೆದ ಏಳು ವರ್ಷಗಳಲ್ಲೇ ದಾಖಲಾದ ಗರಿಷ್ಠ ತಾಪಮಾನ ಎನಿಸಿದೆ.
ಶುಭ್ರ ಆಕಾಶ ಮತ್ತು ಪೂರ್ವಾಭಿಮುಖವಾದ ನಿರಂತರ ಗಾಳಿಯಿಂದಾಗಿ ಸೂರ್ಯ ರಶ್ಮಿಯ ಅವಧಿ ಹೆಚ್ಚಿ ತಾಪಮಾನದಲ್ಲಿ ಹೆಚ್ಚಳವಾಗಿದೆ. ವರ್ಷದ ಈ ಅವಧಿಯಲ್ಲಿ ಪಶ್ಚಿಮಾಭಿಮುಖ ಮಾರುತ ತಂಪಾಗಿದ್ದು, ಪೂರ್ವಾಭಿಮುಖ ಗಾಳಿ ಬಿಸಿಯಾಗಿರುತ್ತದೆ" ಎಂದು ಹವಾಮಾನ ಅಧಿಕಾರಿಗಳು ವಿವರಿಸಿದ್ದಾರೆ.
ಶುಕ್ರವಾರ ಆಗಾಗ್ಗೆ ತುಂತುರು ಮಳೆಯಾಗುವ ಸಾಧ್ಯತೆ ಇರುವುದರಿಂದ ತಾಪಮಾನ ಇಳಿಕೆಯಾಗಲಿದೆ. ಶುಕ್ರವಾರ ಗರಿಷ್ಠ ತಾಪಮಾನ 18-20 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆ ಇದ್ದು, ಶನಿವಾರದ ವೇಳೆ ಇದು 16-18 ಡಿಗ್ರಿಗೆ ಕುಸಿಯಲಿದೆ ಎಂದು ಇಲಾಖೆ ಅಂದಾಜಿಸಿದೆ.







