ವಿಟಮಿನ್ ಡಿ ಪೂರಕಗಳ ಅಧಿಕ ಸೇವನೆಯಿಂದ ಕಿಡ್ನಿ ಮತ್ತು ಹೃದಯಕ್ಕೆ ಸಮಸ್ಯೆ ಇದೆಯೆ?

ಸಾಂದರ್ಭಿಕ ಚಿತ್ರ | Photo Credit : freepik
ವಿಟಮಿನ್ ಡಿ ಪೂರಕಗಳನ್ನು ಸ್ವಯಂ ಔಷಧ ಮತ್ತು ದೊಡ್ಡ ಪ್ರಮಾಣದಲ್ಲಿ ದೀರ್ಘ ಕಾಲ ಸೇವಿಸುವುದರಿಂದ ಗಂಭೀರ ಪರಿಣಾಮಗಳಾಗಬಹುದು.
ವಿಟಮಿನ್ ಡಿ ಪೂರಕಗಳನ್ನು ಸೇವಿಸುವುದರಿಂದ ಹೃದಯ ಮತ್ತು ಕಿಡ್ನಿಗೆ (ಮೂತ್ರಪಿಂಡ) ಹಾನಿಯಾಗಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆಗಳು ಕೇಳಿಬರುತ್ತಿವೆ. ಈ ಹಿನ್ನೆಲೆಯಲ್ಲಿ ತಜ್ಞರು ಏನು ಹೇಳುತ್ತಾರೆ? ತಜ್ಞರ ಪ್ರಕಾರ ಸ್ವಯಂ ಔಷಧಿ ತೆಗೆದುಕೊಳ್ಳುವುದು ಮತ್ತು ದೊಡ್ಡ ಪ್ರಮಾಣದಲ್ಲಿ ದೀರ್ಘ ಕಾಲ ಸೇವಿಸುವುದರಿಂದ ಗಂಭೀರ ಪರಿಣಾಮಗಳಾಗಬಹುದು. ಫೂರಕ ಔಷಧಗಳನ್ನು ವೈದ್ಯರ ಸಲಹೆಯಲ್ಲಿಯೇ ಸೇವಿಸಬೇಕು.
ತಜ್ಞರ ಪ್ರಕಾರ, ವಿಟಮಿನ್ ಡಿ ಕೊಬ್ಬು ಕರಗುವ ವಿಟಮಿನ್ ಹೊಂದಿದೆ. ಅಂದರೆ ದೇಹ ಹೆಚ್ಚುವರಿ ಪ್ರಮಾಣವನ್ನು ಅಷ್ಟು ಬೇಗನೇ ಹೊರ ಹಾಕುವುದಿಲ್ಲ. ಕಾಲಾನುಸಾರ ಇದು ವಿಷಕಾರಿ ಅಂಶಗಳನ್ನು ಹೆಚ್ಚಿಸಬಹುದು. ಇದರಿಂದ ಗಂಭೀರ ಕಿಡ್ನಿ ವೈಫಲ್ಯ, ಅಸಹಜವಾದ ಹೃದಯಬಡಿತ, ವಾಕರಿಕೆ, ವಾಂತಿ ಮತ್ತು ನಿರ್ಜಲೀಕರಣದ ಸಮಸ್ಯೆ ಕಾಡಬಹುದು.
ವಿಟಮಿನ್ ಡಿ ಕೊರತೆ ಸಾಮಾನ್ಯ ಸಮಸ್ಯೆ
ಪೂರಕ ಔಷಧಿ ಸೇವನೆ ದೊಡ್ಡ ಸಮಸ್ಯೆಯಲ್ಲ. ವೈದ್ಯರ ಮೇಲ್ವಿಚಾರಣೆ ಇಲ್ಲದೆ ಸೇವಿಸುವುದು ತಪ್ಪು. ವಿಟಮಿನ್ ಡಿ ಕೊರತೆ ವ್ಯಾಪಕವಾಗಿರುವಾಗ ನಿತ್ಯವೂ ಅಧಿಕ ಡೋಸ್ನ ಪೂರಕ ಔಷಧಿ ಸೇವನೆ ಒಳಿತು ಎಂದು ಭಾವಿಸುತ್ತಾರೆ. ವಾಸ್ತವದಲ್ಲಿ ವಿಟಮಿನ್ ಡಿ ಹಾರ್ಮೋನ್ ರೀತಿಯಲ್ಲಿ ಕೆಲಸಮಾಡುತ್ತದೆಯೇ ವಿನಾ ವಿಟಮಿನ್ ರೀತಿಯಲ್ಲಿ ಅಲ್ಲ. ಅತಿಯಾಗಿ ಸೇವಿಸುವುದರಿಂದ ರಕ್ತದಲ್ಲಿನ ಕ್ಯಾಲ್ಸಿಯಂ ಮಟ್ಟವನ್ನು ಏರಿಸಬಹುದು. ಅದರಿಂದ ಕಿಡ್ನಿಗೆ ಹಾನಿ ಮತ್ತು ಹೃದಯ ಸಮಸ್ಯೆಗಳಿಗೆ ಕಾರಣವಾಗಬಹುದು.
ಯಾವ ಸೂಚನೆಗಳಿಗೆ ಜಾಗರೂಕತೆ ವಹಿಸಬೇಕು?
ಪದೇಪದೆ ವಾಕರಿಕೆ, ವಾಂತಿ, ಹಸಿವೆ ಇಲ್ಲದಿರುವುದು, ಅತಿಯಾದ ಬಾಯಾರಿಕೆ, ಸುಸ್ತು ಮತ್ತು ಹೃದಯದ ಅತಿಯಾದ ಸ್ಪಂದನೆಯಂತಹ ಸೂಚನೆಗಳಿಗೆ ಜಾಗರೂಕರಾಗಬೇಕು. ಗಂಭೀರ ಪ್ರಕರಣಗಳಲ್ಲಿ ಮೂತ್ರ ಕಡಿಮೆಯಾಗಬಹುದು, ಹೃದಯದ ಗತಿಯಲ್ಲಿ ಹಠಾತ್ ಏರಬಹುದು. ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಕಾಣಬೇಕು.
ವಿಟಮಿನ್ ಡಿ ವಿಷ ಹೃದಯಕ್ಕೆ ಹೇಗೆ ಸಮಸ್ಯೆ ಒಡ್ಡುತ್ತದೆ?
ವಿಟಮಿನ್ ಡಿ ವಿಷದಿಂದ ಆಗುವ ಅಧಿಕ ಕ್ಯಾಲ್ಸಿಯಂ ಮಟ್ಟಗಳು ಹೃದಯದ ವಿದ್ಯುತ್ ಸಂಚಾರ ವ್ಯವಸ್ಥೆಗೆ ತೊಂದರೆ ಒಡ್ಡಬಹುದು. ಅದರಿಂದ ಹೃದಯದ ಅತಿ ಸ್ಪಂದನೆ, ಅನಿಯಮಿತ ಹೃದಯಬಡಿತ, ಅಥವಾ ಅತ್ಯಧಿಕ ವೇಗ ಮತ್ತು ಅತಿ ಕಡಿಮೆ ಹೃದಯದ ದರಗಳನ್ನು ಕಾಣಬಹುದು. ಇಂತಹ ಸಂದರ್ಭದಲ್ಲಿ ಸೂಕ್ತ ಸಮಯದಲ್ಲಿ ವೈದ್ಯರನ್ನು ಕಾಣದೆ ಇದ್ದರೆ ಅಪಾಯಕಾರಿಯಾಗಿ ಪರಿಣಮಿಸಬಹುದು.
ವಿಟಮಿನ್ ಡಿ ಅತಿ ಸೇವನೆಯಿಂದ ಯಾರಿಗೆ ಹೆಚ್ಚು ಅಪಾಯ?
ಈಗಾಗಲೇ ಕಿಡ್ನಿ ಸಮಸ್ಯೆ ಇರುವವರು, ಹೃದಯದ ಅನಾರೋಗ್ಯದಿಂದ ಬಳಲುತ್ತಿರುವವರು ದೀರ್ಘ ಸಮಯ ರಕ್ತದ ಪರೀಕ್ಷೆ ಇಲ್ಲದೆ ವಾರ ಅಥವಾ ಮಾಸಿಕವಾಗಿ ಹೈಡೋಸ್ ವಿಟಮಿನ್ ಡಿ ಪೂರಕಗಳನ್ನು ಸೇವಿಸಬಾರದು. ಯುವಕರು ಮತ್ತು ಆರೋಗ್ಯಕರ ಮಂದಿಗೂ ಸಮಸ್ಯೆಯಾಗಬಹುದು.
ವಿಟಮಿನ್ ಡಿ ಸುರಕ್ಷಿತವಾಗಿ ಸೇವನೆ ಹೇಗೆ?
ರಕ್ತ ಪರೀಕ್ಷೆಯಿಂದ ವಿಟಮಿನ್ ಡಿ ಪೂರಕ ಬೇಕೇ ಇಲ್ಲವೆ ಎನ್ನುವುದು ತಿಳಿಯುತ್ತದೆ. ಪ್ರತಿ ವ್ಯಕ್ತಿಗಳಿಗೆ ಭಿನ್ನವಾಗಿ ಡೋಸ್ ಮತ್ತು ಅವಧಿಯನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ನಿಗದಿಪಡಿಸಬೇಕು. ಅಗತ್ಯಕ್ಕಿಂತ ಹೆಚ್ಚು ಸೇವನೆಯಿಂದ ಹೆಚ್ಚುವರಿ ಲಾಭವಾಗದು, ಹಾನಿಯಾಗುವ ಸಾಧ್ಯತೆಯೇ ಹೆಚ್ಚು.
ಕೃಪೆ: ಇಂಡಿಯನ್ ಎಕ್ಸ್ಪ್ರೆಸ್







