ನಿಯಮಿತ ಆಹಾರದಲ್ಲಿ ಪರ್ಸಿಮನ್ ಸೇವಿಸುತ್ತಿರುವ ತಾರೆಯರು! : ಆಹಾರ ತಜ್ಞರು ಈ ಹಣ್ಣಿನ ಬಗ್ಗೆ ಏನು ಹೇಳುತ್ತಾರೆ?

ಸಾಂದರ್ಭಿಕ ಚಿತ್ರ | Photo Credit : FREEPIK
ಪರ್ಸಿಮನ್ ಹಣ್ಣು ಬಹಳ ಹಿಂದಿನಿಂದಲೂ ಭಾರತದಲ್ಲಿ ಬಳಕೆಯಲ್ಲಿದ್ದರೂ ಇತ್ತೀಚೆಗೆ ಹೆಚ್ಚು ಜನಪ್ರಿಯಗೊಳ್ಳಲು ಕಾರಣವೇನು? ಆಹಾರ ತಜ್ಞರು ಹಣ್ಣಿನ ಬಗ್ಗೆ ಏನು ಹೇಳುತ್ತಾರೆ?
ಹಿಂದಿಯಲ್ಲಿ ರಾಮ್ಫಲ್ ಅಥವಾ ಅಮರ್ಫಲ್ ಎಂದು ಕರೆಸಿಕೊಳ್ಳುವ ಪರ್ಸಿಮನ್ ಹಣ್ಣು ಸೇವನೆ ಇದೀಗ ಹೊಸ ಟ್ರೆಂಡ್ ಆಗಿದೆ. ಈ ಹಣ್ಣು ಹೊಸತೇನಲ್ಲ. ಬಹಳ ಹಿಂದಿನಿಂದಲೇ ಉತ್ತರ ಭಾರತದಲ್ಲಿ ಇದರ ಸೇವನೆ ಇದೆ. ತಮ್ಮ ಇನ್ಸ್ಟಾಗ್ರಾಂ ಪೋಸ್ಟ್ಗಳಲ್ಲಿ ಆರೋಗ್ಯ ಸಲಹೆಗಳನ್ನು ನೀಡುವ ನಟಿ ಭಾಗ್ಯಶ್ರೀ ಇತ್ತೀಚೆಗೆ ಈ ಹಣ್ಣಿನ ಬಗ್ಗೆ ವಿವರ ನೀಡಿದ್ದರು. ಫಿಟ್ನೆಸ್ ಕುರಿತಾಗಿ ಬಹಳ ಜಾಗರೂಕರಾಗಿರುವ ಕತ್ರಿನಾ ಕೈಫ್ ಅವರೂ ತಮ್ಮ ನಿಯಮಿತ ಆಹಾರದಲ್ಲಿ ಪರ್ಸಿಮನ್ಗಳನ್ನು ಸೇವಿಸುವುದಾಗಿ ಹೇಳಿದ್ದರು. ಕೇಕ್ ಮತ್ತಿತರ ಡೆಸರ್ಟ್ಗಳಲ್ಲೂ ಆಧುನಿಕ ನಳಮಹರಾಜರು ಇದನ್ನು ಬಳಸುತ್ತಿದ್ದಾರೆ.
ವೈರಲ್ ಆಗಿರುವ ಹಣ್ಣಿನ ವಿಶೇಷತೆಯೇನು?
ಈ ಹಣ್ಣು ಮೂಲತಃ ಚೀನಾದಲ್ಲಿ ಬೆಳೆಯುತ್ತದೆ. ಆದರೆ ಜಪಾನ್ನಲ್ಲಿ ಹೆಚ್ಚು ಬೆಳೆಯುವ ಕಾರಣ ಇದನ್ನು ಜಪಾನೀಸ್ ಪರ್ಸಿಮನ್ ಎಂದೂ ಹೇಳಲಾಗುತ್ತದೆ. ಭಾರತದಲ್ಲಿ ರಾಮ್ಫಲ್ ಋತು ಸೆಪ್ಟೆಂಬರ್ನಿಂದ ಅಕ್ಟೋಬರ್ ನಡುವೆ ಬರುತ್ತದೆ. ಡಿಸೆಂಬರ್ವರೆಗೂ ಇರುತ್ತದೆ. ದೇಶದಲ್ಲಿ ಸಾಮಾನ್ಯವಾಗಿ ಹಚಿಯಾ, ಫುಯು ಮತ್ತು ಜಿರೋ ರೀತಿಯ ಪರ್ಸಿಮನ್ ಹಣ್ಣುಗಳನ್ನು ಬೆಳೆಯಲಾಗುತ್ತದೆ. ಬಹಳಷ್ಟು ಮಂದಿ ಇದನ್ನು ಹೈಬ್ರಿಡ್ ಕಿತ್ತಳೆ ಅಥವಾ ಟೊಮ್ಯಾಟೊ ಎಂದೇ ಭಾವಿಸುತ್ತಾರೆ.
ಇತ್ತೀಚೆಗೆ ಹಿಮಾಚಲ ಪ್ರದೇಶದ ಕುಲು ಪ್ರದೇಶದಲ್ಲಿ ಇದನ್ನು ಹೆಚ್ಚು ಬೆಳೆಯುತ್ತಾರೆ. ಸೇಬಿಗಿಂತ ಹೆಚ್ಚಿನ ಆದಾಯ ತಂದುಕೊಡುವುದೇ ಇದನ್ನು ಬೆಳೆಯಲು ಮುಖ್ಯ ಕಾರಣ. 2023ರಲ್ಲಿ ಕುಲು ಪ್ರದೇಶದಲ್ಲಿ 200 ಹೆಕ್ಟೇರ್ಗಳಲ್ಲಿ ಪರ್ಸಿಮನ್ ಬೆಳೆಯಲಾಗಿತ್ತು. ಇಳುವರಿ ಮತ್ತು ಆದಾಯದಲ್ಲಿ ಇದು ರೈತರಿಗೆ ಅತ್ಯುತ್ತಮ ಕೃಷಿಯಾಗಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಮಾರುಕಟ್ಟೆಯಲ್ಲಿ ಇದು ಹೆಚ್ಚು ಲಭ್ಯವಿವೆ. ರಾಮ್ಫಲ್ ಹಿಂದಿನಿಂದಲೂ ಮಾರುಕಟ್ಟೆಯಲ್ಲಿತ್ತು. ಆದರೆ ಸೇಬಿಗೆ ಇರುವ ಪ್ರಾಮುಖ್ಯತೆ ಇದಕ್ಕೆ ಇರಲಿಲ್ಲ. ಸಂಧಿ ನೋವಿಗೆ ಇದು ಅತ್ಯುತ್ತಮ ಔಷಧ ಎಂದು ನೋಯ್ಡಾದ ಹಣ್ಣಿನ ವ್ಯಾಪಾರಿಯೊಬ್ಬರು ಹೇಳುತ್ತಾರೆ. ಆದರೆ ಈ ವರ್ಷ ಪ್ರವಾಹ ಮತ್ತು ಅತಿ ಮಳೆಯಿಂದಾಗಿ ಉತ್ತರ ಭಾರತದಲ್ಲಿ ಇದರ ಇಳುವರಿ ಕಡಿಮೆಯಾಗಿದೆ.
ಚಳಿಗಾಲಕ್ಕೆ ಉತ್ತಮ ಹಣ್ಣು
ಆಹಾರ ತಜ್ಞರ ಪ್ರಕಾರ, ರೈತರಿಗೆ ಲಾಭ ತರುವುದನ್ನು ಹೊರತುಪಡಿಸಿ ನೋಡಿದರೆ, ಆರೋಗ್ಯದ ಲಾಭಗಳಿಗೂ ಇದು ಪ್ರಸಿದ್ಧಿ ಪಡೆದಿದೆ. ಹಣ್ಣಿನ ಉತ್ತಮ ಪೌಷ್ಠಿಕಾಂಶಗಳಿಂದಾಗಿ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಇದನ್ನು ಹೆಚ್ಚು ಬಳಸುತ್ತಿದ್ದಾರೆ. ಪರ್ಸಿಮನ್ಗಳು ಇತ್ತೀಚೆಗೆ ಚಳಿಗಾಲದ ಸೂಪರ್ ಹಣ್ಣುಗಳಾಗುತ್ತಿವೆ. ಅವುಗಳ ಪೌಷ್ಠಿಕಾಂಶಗಳಿಂದಾಗಿ ಚಳಿಗಾಲದ ಅತ್ಯುತ್ತಮ ಆಯ್ಕೆಯಾಗುತ್ತಿವೆ.
ಸಮೃದ್ಧ ಆ್ಯಂಟಿ ಆಕ್ಸಿಡಂಟ್ಗಳು
ಇವು ಸಹಜವಾಗಿಯೇ ಆ್ಯಂಟಿ ಆಕ್ಸಿಡಂಟ್ಗಳು, ಫೈಬರ್ಗಳು ಮತ್ತು ಅಗತ್ಯ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿ ಇರುವ ಕಾರಣ ಒಟ್ಟು ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಕರಗುವ ಮತ್ತು ಕರಗದ ಫೈಬರ್ ಜೀರ್ಣಕ್ರಿಯೆಯಲ್ಲಿ ಸಹಾಯಮಾಡುತ್ತದೆ ಮತ್ತು ಆ ಮೂಲಕ ಹಸಿವೆ ಮತ್ತು ಕೊಬ್ಬು ನಿಯಂತ್ರಿಸಲು ನೆರವಾಗುತ್ತದೆ. ಅವುಗಳ ಆ್ಯಂಟಿ ಆಕ್ಸಿಡಂಟ್ಗಳಲ್ಲಿ ಬೀಟಾ- ಕೆರೋಟಿನ್, ಟ್ಯಾನ್ನಿನ್ಗಳು, ಕ್ಯಾಟೆಚಿನ್ಗಳು ಮತ್ತು ವಿಟಮಿನ್ ಸಿ ಉರಿಯೂತ ಮತ್ತು ಆಕ್ಸಿಡೇಟಿವ್ ಒತ್ತಡ ಕಡಿಮೆ ಮಾಡಲು ನೆರವಾಗುತ್ತವೆ.
ಹಣ್ಣಿನಲ್ಲಿ ವಿಟಮಿನ್ಗಳಾದ ಎ ಮತ್ತು ಇ, ಫೋಲ್ಯಾಟ್ ಮತ್ತು ಪೊಟ್ಯಾಶಿಯಂ, ತಾಮ್ರ ಮತ್ತು ಮ್ಯಾಂಗನೀಸ್ನಂತಹ ಖನಿಜಗಳೂ ಇವೆ. ಇವು ಒಟ್ಟಾರೆ ಆರೋಗ್ಯ ಮತ್ತು ಚರ್ಮದ ಆರೋಗ್ಯಕ್ಕೆ ಕೊಡುಗೆ ನೀಡುತ್ತವೆ. ಕಡಿಮೆ ಕೊಬ್ಬು, ಸಾಧಾರಣ ಕ್ಯಾಲೊರಿಗಳು ಮತ್ತು ಅಧಿಕ ಆರೋಗ್ಯ ಲಾಭಗಳು ಇರುವ ಕಾರಣದಿಂದ ಪರ್ಸಿಮನ್ಗಳು ಸುಲಭವಾದ ಪೌಷ್ಠಿಕಾಂಶದ ಆಹಾರವಾಗಿದೆ.
ಮಧುಮೇಹಿಗಳು ಮಿತವಾಗಿ ಸೇವಿಸಬಹುದು
ಪರ್ಸಿಮನ್ಗಳು ಮಧ್ಯ ಗ್ಲೈಕಮಿಕ್ ರೇಂಜ್ ಹೊಂದಿರುವುದರಿಂದ ಮಧುಮೇಹಿಗಳೂ ಸೇವಿಸಬಹುದು. ಅವುಗಳಲ್ಲಿ ಹೆಚ್ಚು ಫೈಬರ್ ಅಂಶಗಳಿರುವುದರಿಂದ ಗ್ಲುಕೋಸ್ ಹೀರುವಿಕೆಯನ್ನು ಕಡಿಮೆ ಮಾಡುತ್ತವೆ. ಆದರೆ ಸಹಜವಾಗಿ ಸಿಹಿಯಾಗಿರುವ ಕಾರಣ ಮಧುಮೇಹಿಗಳು ಹೆಚ್ಚು ಸೇವಿಸಬಾರದು. ಒಂದು ಅಥವಾ ಅರ್ಧ ತಿಂದರೆ ಏನಾಗುವುದಿಲ್ಲ.
ಆದರೆ ಹಣ್ಣಾಗದ ಪರ್ಸಿಮನ್ಗಳನ್ನು ಅತಿಯಾಗಿ ಸೇವಿಸಿದರೆ ಟ್ಯಾನ್ನಿನ್ ಅಂಶದಿಂದಾಗಿ ಮಲಬದ್ಧತೆಗೆ ಕಾರಣವಾಗಬಹುದು. ಕರುಳಿನ ಸಮಸ್ಯೆ ಇರುವವರು ಕಡಿಮೆ ಸೇವಿಸಬೇಕು.
ಜನಪ್ರಿಯವಾದ ಪುರಾತನ ಹಣ್ಣು
ಪರ್ಸಿಮನ್ಗಳು ಬಹಳ ಹಿಂದಿನಿಂದಲೂ ಬಳಕೆಯಲ್ಲಿದ್ದರೂ ಇತ್ತೀಚೆಗೆ ಅವುಗಳ ಸಮೃದ್ಧ ಪೌಷ್ಠಿಕಾಂಶಗಳಿಂದಾಗಿ ಹೆಚ್ಚು ಜನಪ್ರಿಯವಾಗುತ್ತಿವೆ. ಮುಖ್ಯವಾಗಿ ತಾರೆಯರು ತಮ್ಮ ಆಹಾರದಲ್ಲಿ ಬಳಸುತ್ತಿರುವುದು, ಕಡಿಮೆ ಕೊಬ್ಬಿನಿಂದಾಗಿ ಕೇಕ್ಗಳು ಮತ್ತಿತರ ಡೆಸರ್ಟ್ಗಳಲ್ಲಿ ಬಳಕೆಯಾಗುತ್ತಿರುವುದು ಹಣ್ಣಿನ ಜನಪ್ರಿಯತೆಯನ್ನು ಹೆಚ್ಚಿಸಿದೆ.







