ರಕ್ತದಲ್ಲಿನ ಸಕ್ಕರೆ ಮತ್ತು ಮಧುಮೇಹದ ನಡುವೆ ಇರುವ ವ್ಯತ್ಯಾಸವೇನು?

ಸಾಂದರ್ಭಿಕ ಚಿತ್ರ | Photo Credit : magnific.com
ಅಸಹಜ ರಕ್ತದ ಸಕ್ಕರೆ ಮಟ್ಟವನ್ನು ಮೊದಲೇ ಪತ್ತೆ ಹಚ್ಚುವುದರಿಂದ ಸಮಯೋಚಿತ ಜೀವನಶೈಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಮತ್ತು ವೈದ್ಯಕೀಯ ನೆರವು ಪಡೆಯಲು ಸಾಧ್ಯವಾಗುತ್ತದೆ.
ನಾವು ಬಹಳಷ್ಟು ಮಂದಿ ರಕ್ತದಲ್ಲಿನ ಸಕ್ಕರೆ ಮತ್ತು ಮಧುಮೇಹ ಎರಡೂ ಒಂದೇ ಎಂದುಕೊಳ್ಳುತ್ತೇವೆ. ಆದರೆ ಅವು ಒಂದೇ ಅಲ್ಲ. ಹಾಗಿದ್ದರೆ, ರಕ್ತದಲ್ಲಿನ ಸಕ್ಕರೆ ಮತ್ತು ಮಧುಮೇಹದ ನಡುವಿನ ವ್ಯತ್ಯಾಸವೇನು?
ತಜ್ಞರ ಪ್ರಕಾರ, ರಕ್ತದಲ್ಲಿನ ಸಕ್ಕರೆ (ಗ್ಲುಕೋಸ್) ಅಂಶವು ಯಾವುದೇ ಸಮಯದಲ್ಲಿ ನಿಮ್ಮ ರಕ್ತಪ್ರವಾಹದಲ್ಲಿ ಇರುವ ಸಕ್ಕರೆಯ ಪ್ರಮಾಣವನ್ನು ಸೂಚಿಸುತ್ತದೆ. ಗ್ಲುಕೋಸ್ ದೇಹದ ಶಕ್ತಿಯ ಪ್ರಾಥಮಿಕ ಮೂಲವಾಗಿದ್ದು, ನಾವು ಸೇವಿಸುವ ಆಹಾರದಿಂದ ದೊರೆಯುತ್ತದೆ. ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವು ಸಹಜವಾಗಿ ಏರುತ್ತದೆ ಮತ್ತು ಮತ್ತೊಂದು ಊಟಕ್ಕೂ ಮೊದಲು ಕಡಿಮೆಯಾಗುತ್ತದೆ. ಆರೋಗ್ಯವಂತ ವ್ಯಕ್ತಿಗಳಲ್ಲಿಯೂ ರಕ್ತದಲ್ಲಿ ಸಕ್ಕರೆಯ ಅಂಶ ಇರುತ್ತದೆ.
ನ ಮುಂಬೈ ಸೆಂಟ್ರಲ್ನ ಮಧುಮೇಹ ತಜ್ಞ ಡಾ. ಪ್ರಣವ್ ಘೋಡಿ ಅವರ ಪ್ರಕಾರ, ದೈಹಿಕ ಚಟುವಟಿಕೆ, ಒತ್ತಡ, ನಿದ್ರೆ ಮತ್ತು ಇತರ ಅಂಶಗಳ ಆಧಾರದ ಮೇಲೆ ದಿನವಿಡೀ ರಕ್ತದಲ್ಲಿನ ಸಕ್ಕರೆ ಮಟ್ಟವು ಸ್ವಾಭಾವಿಕವಾಗಿ ಬದಲಾಗುತ್ತದೆ. ಮತ್ತೊಂದೆಡೆ, ಮಧುಮೇಹವು ದೇಹವು ರಕ್ತದಲ್ಲಿನ ಸಕ್ಕರೆಯನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದ ವೈದ್ಯಕೀಯ ಸ್ಥಿತಿಯಾಗಿದೆ.
ತಜ್ಞರ ಪ್ರಕಾರ, ಮೇದೋಜೀರಕ ಗ್ರಂಥಿಯು ಸಾಕಷ್ಟು ಇನ್ಸುಲಿನ್ ಉತ್ಪಾದಿಸದೇ ಇರುವುದು ಈ ವೈದ್ಯಕೀಯ ಸ್ಥಿತಿಗೆ ಮುಖ್ಯ ಕಾರಣವಾಗಬಹುದು. ಅಥವಾ ದೇಹವು ಇನ್ಸುಲಿನ್ಗೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸದೇ ಇರುವುದು (ಇನ್ಸುಲಿನ್ ಪ್ರತಿರೋಧ) ಕಾರಣವಾಗಬಹುದು. ಈ ಕಾರಣಗಳಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ನಿರಂತರವಾಗಿ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ.
ಅನಾರೋಗ್ಯ, ಒತ್ತಡ, ಕೆಲವು ಔಷಧಿಗಳು, ನಿದ್ರೆಯ ಕೊರತೆ ಅಥವಾ ಭಾರೀ ಊಟದ ಕಾರಣದಿಂದ ರಕ್ತದಲ್ಲಿನ ಸಕ್ಕರೆಯಲ್ಲಿ ತಾತ್ಕಾಲಿಕ ಹೆಚ್ಚಳ ಸಂಭವಿಸಬಹುದು. “ಮಧುಮೇಹವನ್ನು ನಿರ್ದಿಷ್ಟ ಪ್ರಯೋಗಾಲಯ ಪರೀಕ್ಷೆಗಳಾದ ಫಾಸ್ಟಿಂಗ್ ಬ್ಲಡ್ ಶುಗರ್, HbA1c ಅಥವಾ ಓರಲ್ ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆಗಳ ಮೂಲಕ ರೋಗನಿರ್ಣಯ ಮಾಡಲಾಗುತ್ತದೆ” ಎಂದು ವೈದ್ಯರು ಹೇಳಿದ್ದಾರೆ.
ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಒಂದು ಅಳತೆಯಾಗಿದ್ದರೆ, ಮಧುಮೇಹವು ಒಂದು ರೋಗವಾಗಿದೆ. “ರಕ್ತದಲ್ಲಿ ಸಕ್ಕರೆಯ ಅಂಶ ಇರುವುದು ಸಹಜ. ಆದರೆ ನಿರಂತರವಾಗಿ ರಕ್ತದಲ್ಲಿ ಸಕ್ಕರೆಯ ಅಂಶ ಅಧಿಕವಾಗಿರುವುದು ಮಧುಮೇಹವನ್ನು ಸೂಚಿಸಬಹುದು” ಎಂದು ತಜ್ಞರು ತಿಳಿಸಿದ್ದಾರೆ.
ಹಾಗೆ ನೋಡಿದರೆ, ರಕ್ತದಲ್ಲಿನ ಸಕ್ಕರೆ ಒಂದು ಮಾಪನವಾಗಿದ್ದರೆ, ಮಧುಮೇಹ ಒಂದು ರೋಗವಾಗಿದೆ. ರಕ್ತದಲ್ಲಿ ಸಕ್ಕರೆಯ ಅಂಶ ಇರುವುದು ಸಹಜ. ಆದರೆ ನಿರಂತರವಾಗಿ ಅಧಿಕ ಸಕ್ಕರೆಯ ಅಂಶ ಇರುವುದು ಮಧುಮೇಹವನ್ನು ಸೂಚಿಸುತ್ತದೆ. ಒಮ್ಮೆ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಹೆಚ್ಚಾಗಿದೆ ಎಂದ ಮಾತ್ರಕ್ಕೆ ವ್ಯಕ್ತಿಗೆ ಮಧುಮೇಹವಿದೆ ಎಂದು ಹೇಳಲಾಗದು. ರೋಗನಿರ್ಣಯಕ್ಕೆ ಫಾಸ್ಟಿಂಗ್ ಬ್ಲಡ್ ಶುಗರ್, HbA1c ಅಥವಾ ಓರಲ್ ಗ್ಲುಕೋಸ್ ಟಾಲರೆನ್ಸ್ ಪರೀಕ್ಷೆ ಅಗತ್ಯವಾಗುತ್ತದೆ.
ಆರೋಗ್ಯಕರ ಆಹಾರ ಪದ್ಧತಿ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದರಿಂದ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಹಾಗೂ ಮಧುಮೇಹ ಬರುವ ಅಪಾಯವನ್ನು ಕಡಿಮೆ ಮಾಡಬಹುದು.
“ಮಧುಮೇಹ ನಿಧಾನವಾಗಿ ಬೆಳೆಯಬಹುದು. ಆರಂಭಿಕ ಹಂತಗಳಲ್ಲಿ ಯಾವುದೇ ಲಕ್ಷಣಗಳು ಗೋಚರಿಸದ ಕಾರಣ ನಿಯಮಿತ ತಪಾಸಣೆ ಅಗತ್ಯ. ಅಸಹಜ ರಕ್ತದ ಸಕ್ಕರೆ ಮಟ್ಟವನ್ನು ಮೊದಲೇ ಪತ್ತೆ ಹಚ್ಚುವುದರಿಂದ ಸಮಯೋಚಿತ ಜೀವನಶೈಲಿ ಬದಲಾವಣೆಗಳನ್ನು ಅಳವಡಿಸಿಕೊಳ್ಳಲು ಮತ್ತು ವೈದ್ಯಕೀಯ ನೆರವು ಪಡೆಯಲು ಸಾಧ್ಯವಾಗುತ್ತದೆ. ಹೀಗಾಗಿ ಹೃದಯ, ಮೂತ್ರಪಿಂಡ, ಕಣ್ಣುಗಳು ಮತ್ತು ನರಗಳ ಮೇಲೆ ಉಂಟಾಗುವ ದೀರ್ಘಕಾಲೀನ ಪರಿಣಾಮಗಳನ್ನು ತಡೆಯಬಹುದು” ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಮಾಹಿತಿ ಕೃಪೆ: India Express






