ಕರುಳಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದಾದ ಐದು ಆಹಾರಗಳಿಗೆ ವೈದ್ಯರು ನೀಡಿದ ರ್ಯಾಂಕ್ ಎಷ್ಟು!

ಸಾಂದರ್ಭಿಕ ಚಿತ್ರ | Photo Credit : freepik
ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ತಿನಿಸುಗಳನ್ನು ದೈನಂದಿನ ಆಹಾರದಲ್ಲಿ ಸೇವಿಸುವುದು ಅಗತ್ಯ. ಆದರೆ ನಿಯಮಿತವಾಗಿ ಸೇವಿಸುವ ಎಲ್ಲಾ ಆಹಾರಗಳು ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ.
ನಮ್ಮ ಕರುಳಿನ ಆರೋಗ್ಯ ನಿಯಮಿತವಾಗಿ ನಾವು ಏನು ತಿನ್ನುತ್ತೇವೆ ಎನ್ನುವುದನ್ನು ಅವಲಂಬಿಸಿದೆ. ಹೀಗಾಗಿ ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ತಿನಿಸುಗಳನ್ನು ದೈನಂದಿನ ಆಹಾರದಲ್ಲಿ ಸೇವಿಸುವುದು ಅಗತ್ಯ. ಆದರೆ ನಿಯಮಿತವಾಗಿ ಸೇವಿಸುವ ಎಲ್ಲಾ ಆಹಾರಗಳು ಮಾನದಂಡಗಳಿಗೆ ಹೊಂದಿಕೆಯಾಗುವುದಿಲ್ಲ. ದೆಹಲಿಯ ವಸಂತ್ ಕುಂಜ್ನಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ಗ್ಯಾಸ್ಟ್ರೋ ಎಂಟರಾಲಜಿಸ್ಟ್ ಮತ್ತು ಹೆಟಾಲಜಿಸ್ಟ್ ಆಗಿರುವ ಶುಭಂ ವತ್ಸ್ಯ ನಾವು ನಿಯಮಿತವಾಗಿ ಸೇವಿಸುವ ಆಹಾರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 24ರಂದು ಇನ್ಸ್ಟಾಗ್ರಾಮ್ನಲ್ಲಿ ಫೋಸ್ಟ್ ಮಾಡಿರುವ ಅವರು ನಿಯಮಿತ ಶಿಸ್ತಿನ ಆಹಾರದಲ್ಲಿ (ಡಯಟ್) ಸೇವಿಸುವ 5 ತಿನಿಸುಗಳ ಬಗ್ಗೆ ವಿವರ ನೀಡಿ 10 ರಲ್ಲಿ ಅಂಕಗಳನ್ನು ನೀಡಿದ್ದಾರೆ. “ಎಲ್ಲವೂ ನಿಮ್ಮ ಕರುಳಿಗೆ ಉತ್ತಮ ಆಹಾರವಲ್ಲ. ಕರುಳು ನಿತ್ಯದ ಆಹಾರದಿಂದ ಸಿದ್ಧವಾಗುತ್ತದೆ. ಅದಕ್ಕೆ ಬೆಂಬಲವಾಗುವ ಆಹಾರವನ್ನೇ ಸೇವಿಸಬೇಕು. ಅದಕ್ಕೆ ಒತ್ತಡ ಹಾಕಬಾರದು” ಎಂದು ಶುಭಂ ವತ್ಸ್ಯ ಹೇಳಿದ್ದಾರೆ.
ಡಯಟ್ ಕೋಕ್
ಅಂಕ 10/4
ಕೋಕ-ಕೋಲದ ಎದುರು ಡಯಟ್ ಎನ್ನುವ ಪದ ಇದೆ ಎಂದ ಮಾತ್ರಕ್ಕೆ ಅದು ಆರೋಗ್ಯಕರವಾಗುವುದಿಲ್ಲ. ಕೃತಕ ಸಿಹಿಯನ್ನು ಬಳಸಿದ ಕಾರ್ಬೋನೇಟೆಡ್ ಪಾನೀಯವಾಗಿಯೇ ಉಳಿಯುತ್ತದೆ. ಡಯಟ್ ಕೋಕ್ ಕರುಳಿನ ಮೈಕ್ರೋಬಯಾಮ್ನ ಸಂಯೋಜನೆಗೆ ಧಕ್ಕೆತರುತ್ತದೆ. ಪರೋಕ್ಷವಾಗಿ ಇನ್ಸುಲಿನ್ ಪ್ರತಿಸ್ಪಂದನೆ ಮೇಲೆ ಪರಿಣಾಮ ಬೀರುತ್ತದೆ.
ಬಾಳೆಹಣ್ಣು
ಅಂಕ 8/10
ಬಾಳೆ ಹಣ್ಣು ನಿತ್ಯ ಸೇವನೆಗೆ ಅತ್ಯುತ್ತಮ. ಅಗ್ಗದ ಮತ್ತು ಸರಳವಾಗಿ ತಿನ್ನಬಹುದಾದ ಹಣ್ಣು. ಪೆಕ್ಟಿನ್ ಫೈಬರ್ ಹೆಚ್ಚಿರುತ್ತದೆ ಮತ್ತು ಆಮ್ಲೀಯತೆ ಕಡಿಮೆಯಾಗಿ ಜೀರ್ಣಕ್ರಿಯೆಗೆ ಬೆಂಬಲಿಸುತ್ತದೆ. ಆದರೆ ಅತಿಯಾಗಿ ಸೇವಿಸಿದರೆ ಗ್ಯಾಸ್ಟ್ರಿಕ್ ಸಮಸ್ಯೆಗಳು ಬರಬಹುದು. ಹೀಗಾಗಿ ಕಡಿಮೆ ಪ್ರಮಾಣದಲ್ಲಿ ನಿಯಂತ್ರಿತವಾಗಿ ಸೇವಿಸಬೇಕು. ನಿತ್ಯ ಒಂದು ಬಾಳೆ ಹಣ್ಣು ಸೇವಿಸಿದರೆ ಸಾಕಾಗುತ್ತದೆ.
ಸಂಸ್ಕರಿತ ಚೀಸ್
ಅಂಕ 3/10
ಸಂಸ್ಕರಿಸದೆ ಇರುವ ಚೀಸ್ ಸೇವನೆ ಉತ್ತಮ. ಸಂಸ್ಕರಿಸಿದ ಚೀಸ್ನ ಸಮಸ್ಯೆಯೆಂದರೆ ಅದು ಪಿಜ್ಜಾದಲ್ಲಿನ ಚೀಸ್ ಅನ್ನು ಸಹ ಒಳಗೊಂಡಿರಬಹುದು. ಅಂತಹ ಸಂಸ್ಕರಿಸಿದ ಚೀಸ್ ಕರುಳಿಗೆ ಅನುಕೂಲಕರವಲ್ಲ.
ಕಾಂಜಿ
10/10
ಕಾಂಜಿ ನೈಸರ್ಗಿಕ ಪಾನೀಯವಾಗಿದೆ. ಉತ್ತರ ಭಾರತ ಮೂಲದ ಹುದುಗಿಸಿದ ಪ್ರೊಬಯಾಟಿಕ್ ಪಾನೀಯವಾಗಿದ್ದು, ವಿಭಿನ್ನ ಪ್ರದೇಶಗಳಲ್ಲಿ ವಿಭಿನ್ನ ಪದಾರ್ಥಗಳನ್ನು ಬಳಸಿ ಕಾಂಜಿಯನ್ನು ತಯಾರಿಸಲಾಗುತ್ತದೆ. ಪಂಜಾಬ್ನಲ್ಲಿ ಕಪ್ಪು ಕ್ಯಾರೆಟ್, ಉತ್ತರ ಪ್ರದೇಶದಲ್ಲಿ ಸಾಸಿವೆ, ಮತ್ತು ಕೆಲವೆಡೆ ಬೀಟ್ರೂಟ್, ಮತ್ತು ಮಸಾಲೆಗಳಿಂದ ತಯಾರಿಸಲಾಗುತ್ತದೆ. ಹುದುಗುವಿಕೆ ಪ್ರಕ್ರಿಯೆಯು ಪೋಷಕಾಂಶಗಳು ಜೈವಿಕವಾಗಿ ಲಭ್ಯವಿರುವಂತೆ ಮಾಡುತ್ತದೆ. ದೇಹವು ಆ್ಯಂಟಿ ಆಕ್ಸಿಡಂಟ್ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ವೈದ್ಯರ ಪ್ರಕಾರ ಕಾಂಜಿ ಪ್ರಕೃತಿದತ್ತವಾದ ಪ್ರೊಬಯಾಟಿಕ್ ಮತ್ತು ಎನ್ಜೈಮ್ಗಳನ್ನು ಹೊಂದಿದ್ದು, ಉತ್ತಮ ಬ್ಯಾಕ್ಟೀರಿಯ ಬೆಳೆಯಲು ನೆರವಾಗುತ್ತದೆ. ಹಾನಿಕರ ಮೈಕ್ರೋಬ್ಗಳನ್ನು ನಿಗ್ರಹಿಸುತ್ತದೆ ಮತ್ತು ಉರಿಯೂತಕಾರಿಗಳನ್ನು ಕಡಿಮೆಗೊಳಿಸುತ್ತದೆ.
ವೈಟ್ ಬ್ರೆಡ್
ಅಂಕ 3/10
ವೈದ್ಯರ ಪ್ರಕಾರ ವೈಟ್ ಬ್ರೆಡ್ (ಸಾಮಾನ್ಯ ಬ್ರೆಡ್) ಅನ್ನು ಮೈದಾದ ಸಂಸ್ಕರಿಸಿದ ಹಿಟ್ಟು ಅಥವಾ ಮೈದಾದಿಂದ ತಯಾರಿಸಲಾಗುತ್ತದೆ ಅದರಲ್ಲಿ ಫೈಬರ್ ಇರುವುದಿಲ್ಲ. ಅಧಿಕ ಗ್ಲಿಸೆಮಿಕ್ ಸೂಚಿ ಹೊಂದಿದ್ದು, ಸೇವನೆಯ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟ ಏರುತ್ತದೆ ಮತ್ತು ತಕ್ಷಣವೇ ಕುಸಿಯುತ್ತದೆ. ಹಸಿವೆಯನ್ನು ತಗ್ಗಿಸುವುದಿಲ್ಲ ಮತ್ತು ಚಯಾಪಚಯ ಅಪಾಯವನ್ನು ಹೆಚ್ಚಿಸುತ್ತದೆ.
ಸೂಚನೆ: ಈ ಲೇಖನವನ್ನು ಸಾಮಾಜಿಕ ಜಾಲತಾಣದಲ್ಲಿರುವ ಮಾಹಿತಿಯಿಂದ ರಚಿಸಲಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆಗಳಿಗೆ ಪರ್ಯಾಯವಲ್ಲ. ವೈದ್ಯಕೀಯ ಸ್ಥಿತಿಯ ಕುರಿತ ಯಾವುದೇ ಅನುಮಾನ ಪರಿಹರಿಸಿಕೊಳ್ಳಲು ವಿಶ್ವಾಸಾರ್ಹ ವೈದ್ಯರ ಸಲಹೆ ಪಡೆಯಿರಿ.






