ಮಧುಮೇಹ ಇಲ್ಲದೆಯೂ ಪದೇಪದೆ ಬಾಯಾರಿಕೆ, ಅತಿ ಮೂತ್ರ ವಿಸರ್ಜನೆಯೆ? ಇಲ್ಲಿದೆ ಅಸಲಿ ಕಾರಣದ ವಿವರ

AI Generated Image
ರಕ್ತದಲ್ಲಿ ಸಕ್ಕರೆ ಪ್ರಮಾಣ ಸಾಮಾನ್ಯವಾಗಿದ್ದರೂ ಯಾವಾಗಲೂ ಬಾಯಾರಿಕೆ ಮತ್ತು ಪದೇಪದೆ ಮೂತ್ರ ವಿಸರ್ಜನೆಯೆ? ಇದಕ್ಕೆ ಕಾರಣಗಳು ಎಚ್ಚರಿಕೆ ಲಕ್ಷಣಗಳು ಮತ್ತು ತಪಾಸಣೆಗಳ ಕುರಿತು ತಜ್ಞರ ವಿವರಣೆ ಇಲ್ಲಿದೆ:
ನಿರಂತರ ಬಾಯಾರಿಕೆ ಮತ್ತು ಆಗಾಗ್ಗೆ ಶೌಚಾಲಯಕ್ಕೆ ಭೇಟಿ ನೀಡುತ್ತಿದ್ದರೆ ಮಧುಮೇಹವಿರುವ ಸೂಚನೆ ಎಂದು ಪರಿಗಣಿಸಬಹುದು. ಆದರೆ ಮಧುಮೇಹವಿಲ್ಲದೆ ಇದ್ದಾಗಲೂ ಬಾಯಾರಿಕೆಯಾಗುವುದು ಮತ್ತು ಅತಿಯಾಗಿ ಮೂತ್ರ ವಿಸರ್ಜಿಸುವುದು ಏಕೆ?
ಐಎಸ್ಐಸಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಇಂಟರ್ನಲ್ ಮೆಡಿಸಿನ್ ಸೀನಿಯರ್ ಕನ್ಸಲ್ಟಂಟ್ ಡಾ ವಿನೀತಾ ಸಿಂಗ್ ಟಂಡನ್ ಹೇಳುವ ಪ್ರಕಾರ ಅತಿಯಾದ ಬಾಯಾರಿಕೆ ಮತ್ತು ಆಗಾಗ್ಗೆ ಮೂತ್ರ ವಿಸರ್ಜನೆಗೆ ಮಧುಮೇಹ ಒಂದೇ ಕಾರಣವಲ್ಲ.
ಹೆಚ್ಚಿನ ವಯಸ್ಕರು ದಿನಕ್ಕೆ ಆರರಿಂದ ಎಂಟು ಬಾರಿ ಮೂತ್ರ ವಿಸರ್ಜಿಸುತ್ತಾರೆ. ಆದರೂ ಅದು ಬದಲಾಗುತ್ತದೆ. ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ ದೈನಂದಿನ ಚಟುವಟಿಕೆ ಅಥವಾ ನಿದ್ರೆಗೆ ಅಡ್ಡಿಪಡಿಸುತ್ತಿದ್ದರೆ ವೈದ್ಯಕೀಯ ಸಲಹೆ ಪಡೆಯಬೇಕು.
ಒಬ್ಬ ವ್ಯಕ್ತಿ ನಿರಂತರವಾಗಿ ಬಾಯಾರಿಕೆ ಅನುಭವಿಸಿದರೆ, ಎಲ್ಲೆಡೆ ನೀರು ಒಯ್ಯುತ್ತಿದ್ದಲ್ಲಿ, ರಾತ್ರಿ ಪದೇಪದೆ ಮೂತ್ರ ವಿಸರ್ಜಿಸಲು ಎಚ್ಚರಗೊಂಡರೆ ಅಥವಾ ದೈನಂದಿನ ದ್ರವ ಸೇವನೆ ಗಮನಾರ್ಹ ಹೆಚ್ಚಳ ಗಮನಿಸಿದರೆ ಅದರ ದಾಖಲೆ ಇಟ್ಟು ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.
ಆಗಾಗ್ಗೆ ಶೌಚಾಲಯಕ್ಕೆ ಭೇಟಿ ನೀಡುವುದು ಹೆಚ್ಚಾಗಿ ದ್ರವ ಸೇವನೆ ಹೆಚ್ಚಿನ ಪ್ರಮಾಣದಲ್ಲಿ ಆಗಿರುವುದಕ್ಕೂ ಕಾರಣವಾಗಬಹುದು. ನೀರು, ಚಹಾ, ಕಾಫಿ, ಎನರ್ಜಿ ಡ್ರಿಂಕ್ಸ್ ಅಥವಾ ಇತರ ಪಾನೀಯಗಳನ್ನು ಸೇವಿಸುವುದರಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ.
ಏಕೆಂದರೆ, ಕೆಫೀನ್ ಸೌಮ್ಯ ಮೂತ್ರವರ್ಧಕವಾಗಿ ಕೆಲಸ ಮಾಡುತ್ತದೆ. “ಹೆಚ್ಚು ದ್ರವ ನಷ್ಟವಾದಂತೆ ಮತ್ತೆ ಬಾಯಾರಿಕೆ ಅನುಭವಿಸಬಹುದು. ಕುಡಿಯುವುದು ಮುಂದುವರಿದಷ್ಟು ಮೂತ್ರ ವಿಸರ್ಜನೆ ಚಕ್ರ ಹೆಚ್ಚಾಗಬಹುದು. ಡಿಹೈಡ್ರೇಶನ್, ಮೂತ್ರಪಿಂಡದ ಅಸ್ವಸ್ಥತೆ, ಕೆಲವು ಔಷಧಿಗಳು, ಹಾರ್ಮೋನ್ಗಳ ಅಸಮತೋಲನ, ಅತಿಯಾದ ದ್ರವ ಸೇವನೆ ಅಥವಾ ಮಧುಮೇಹದ ಇನ್ಸಿಪಿಡಸ್ನಂತಹ ಸ್ಥಿತಿಗಳು ಇತರ ಕೆಲವು ಅಂಶಗಳಲ್ಲಿ ಸೇರಿವೆ” ಎನ್ನುತ್ತಾರೆ ವೈದ್ಯರು.
ಮಧುಮೇಹ ಇಲ್ಲವೆಂದಾದಲ್ಲಿ ವೈದ್ಯರು ಮೂತ್ರ ಪರೀಕ್ಷೆಗಳು, ಮೂತ್ರಪಿಂಡದ ಕಾರ್ಯ ಪರೀಕ್ಷೆಗಳು, ಎಲೆಕ್ಟ್ರೋಲೈಟ್ ಮಟ್ಟ, ರಕ್ತದ ಕ್ಯಾಲ್ಸಿಯಂ ಮಾಪನ ಮತ್ತು ಹೈಡ್ರೇಶನ್ ಮತ್ತು ಹಾರ್ಮೋನ್ ಸಮತೋಲನ ಮೌಲ್ಯಮಾಪನ ಮಾಡಲು ಪರೀಕ್ಷೆಗಳನ್ನು ಶಿಫಾರಸು ಮಾಡಬಹುದು.
ಇದನ್ನು ಹೊರತುಪಡಿಸಿದರೆ ಕೆಲವು ಔಷಧಿಗಳು ಮುಖ್ಯವಾಗಿ ರಕ್ತದೊತ್ತಡ ಮತ್ತು ಹೃದಯದ ಸ್ಥಿತಿಗಳಿಗೆ ಬಳಸುವ ಮೂತ್ರ ವರ್ಧಕಗಳು, ಮೂತ್ರ ವಿಸರ್ಜನೆಯನ್ನು ಗಮನಾರ್ಹವಾಗಿ ಹೆಚ್ಚಿಸಬಹುದು. ಕೆಲವು ಮನೋವೈದ್ಯಕೀಯ ಔಷಧಿಗಳು ಮತ್ತು ಊತಕ್ಕೆ ಚಿಕಿತ್ಸೆಗಳು ಸಹ ಇದೇರೀತಿಯ ಪರಿಣಾಮಗಳನ್ನು ಬೀರಬಹುದು. ಇಂತಹ ಸಂದರ್ಭದಲ್ಲಿ ವೈದ್ಯರು ವೈದ್ಯಕೀಯ ಇತಿಹಾಸ ಮತ್ತು ಔಷಧಿಗಳ ವಿಮರ್ಶೆಯ ಮೂಲಕ ಕಾರಣ ಗುರುತಿಸುತ್ತಾರೆ.
ಉಳಿದಂತೆ ಇತರ ಲಕ್ಷಣಗಳೆಂದರೆ ತೂಕ ನಷ್ಟ, ಆಯಾಸ, ದೌರ್ಬಲ್ಯ, ಒಣಬಾಯಿ, ತಲೆ ತಿರುಗುವಿಕೆ, ಕಾಲುಗಳಲ್ಲಿ ಊತ, ಜ್ವರ, ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ, ಮೂತ್ರದಲ್ಲಿ ರಕ್ತ, ವಾಕರಿಕೆ, ತಲೆನೋವು ಅಥವಾ ದೃಷ್ಟಿಯಲ್ಲಿ ಬದಲಾವಣೆ ಗಮನಿಸಲು ವೈದ್ಯರು ಸಲಹೆ ನೀಡಿದ್ದಾರೆ.
ಸೂಚನೆ: ಈ ಲೇಖನವನ್ನು ಮಾಧ್ಯಮಗಳ ಮೂಲದಿಂದ ಪಡೆದು ಮಾಹಿತಿಯ ಉದ್ದೇಶಕ್ಕಾಗಿ ನೀಡಲಾಗಿದ. ವೃತ್ತಿಪರ ಸಲಹೆಗಳಿಗೆ ಪರ್ಯಾಯವಲ್ಲ. ಯಾವುದೇ ಆರೋಗ್ಯ ಸಮಸ್ಯೆಗಳಿಗೆ ವಿಶ್ವಾಸಾರ್ಹ ವೈದ್ಯರನ್ನು ಸಂಪರ್ಕಿಸಿ.
ಕೃಪೆ: indianexpress.com






