ಒತ್ತುವರಿ ತೆರವು ಕಾರ್ಯಾಚರಣೆ ತಡೆಗೆ ಹೈಕೋರ್ಟ್ ನಕಾರ: ಅಹ್ಮದಾಬಾದ್ ನಲ್ಲಿ 2000 ಗುಡಿಸಲುಗಳು ನೆಲಸಮ

PC: x.com/vickychudasma
ಅಹ್ಮದಾಬಾದ್: ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆ ನೀಡಲು ಗುಜರಾತ್ ಹೈಕೋರ್ಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಚಂಡೋಲಾ ಲೇಕ್ ಪ್ರದೇಶದ ಕನಿಷ್ಠ 2000 ಗುಡಿಸಲುಗಳನ್ನು ಅಧಿಕಾರಿಗಳು ನೆಲಸಮ ಮಾಡಿದ್ದಾರೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದು ವಾಸಿಸುತ್ತಿದ್ದಾರೆ ಎಂಬ ಗುಮಾನಿಯಿಂದ ನಗರ ಪೊಲೀಸರು ಮೂರು ದಿನಗಳ ಹಿಂದಷ್ಟೇ ಈ ಪ್ರದೇಶದಲ್ಲಿ 900 ಮಂದಿಯನ್ನು ವಶಕ್ಕೆ ಪಡೆದಿದ್ದರು.
ಸೋಮವಾರ ತೆರವು ಕಾರ್ಯಾಚರಣೆ ಆರಂಭವಾದ ಬೆನ್ನಲ್ಲೇ ಚಂಡೋಲಾ ಸಿಯಾಸತ್ ನಗರ ಪ್ರದೇಶದ ಹದಿನೆಂಟು ಮಂದಿ ನಿವಾಸಿಗಳು, ತಡೆಯಾಜ್ಞೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಮೌನಾ ಭಟ್ಟ ಮಂಗಳವಾರ ಹೈಕೋರ್ಟ್ ರಜಾ ದಿನವಾದರೂ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ಆನಂದ್ ಯಾಜ್ಞಿಕ್, ಎಲ್ಲ ಅರ್ಜಿದಾರರು ಭಾರತೀಯ ಪೌರರಾಗಿದ್ದು, ಈ ಭಾಗದಲ್ಲಿ 50 ವರ್ಷಗಳಿಂದ ವಾಸವಿದ್ದಾರೆ. ತಮ್ಮ ಪೌರತ್ವ ಸಾಬೀತುಪಡಿಸಲು ಅವರ ಬಳಿ ಸಾಕಷ್ಟು ದಾಖಲೆಗಳಿವೆ. ಸುಪ್ರೀಂಕೋರ್ಟ್ ಆದೇಶದಂತೆ ನಿವಾಸಿಗಳಿಗೆ ತೆರವು ನೋಟಿಸ್ ನೀಡದೇ ಕಾರ್ಯಾಚರಣೆ ಕೈಗೆತ್ತಿಕೊಂಡಿರುವುದರಿಂದ ಇದನ್ನು ವಿರೋಧಿಸಲಾಗುತ್ತಿದೆ ಎಂದು ವಾದ ಮಂಡಿಸಿದರು.
ಅರ್ಜಿದಾರರು ಭೂಮಿಯ ಮಾಲೀಕರಲ್ಲ; ಅದರೆ ಸಿಆರ್ ಝೆಡ್ ಅಧಿಸೂಚನೆಯಡಿ ಗುರುತಿಸಿರುವ ಮತ್ತು ಪುನರ್ವಿಂಗಡಣೆ ಮಾಡಲಾದ ನಕ್ಷೆಯ ಪ್ರಕಾರ ಅವರು ಜಲಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವುದು ತಿಳಿದು ಬಂದಿದೆ. ಇದರ ಜತೆಗೆ ನಿವಾಸಿಗಳಿಗೆ ಕೊಳಗೇರಿ ಪುನರ್ವಸತಿ ಯೋಜನೆಯಡಿ ರಾಜ್ಯ ಸರ್ಕಾರ 2010ರಲ್ಲಿ ಸೌಲಭ್ಯಗಳನ್ನೂ ನೀಡಿದೆ. ಆದ್ದರಿಂದ ಪರ್ಯಾಯ ವಸತಿ ವ್ಯವಸ್ಥೆ ಮಾಡದೇ ತೆರವುಗೊಳಿಸುವಂತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಅಕ್ರಮವಾಗಿ ವಲಸೆ ಬಂದ ಬಾಂಗ್ಲಾದೇಶಿಗರ ವಿರುದ್ಧ ಕ್ರಮ ಕೈಗೊಳ್ಳುವ ನೆಪದಲ್ಲಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಆದರೆ ಶಂಕಿತ ವ್ಯಕ್ತಿಗಳ ಪೌರತ್ವದ ಬಗ್ಗೆ ಸಕ್ಷಮ ಪ್ರಾಧಿಕಾರ ನಿರ್ಧರಿಸುವವರೆಗೆ ಇಂಥ ಕ್ರಮ ಕಾನೂನುಬಾಹಿರ ಎಂದು ವಾದಿಸಿದರು.
ಅದರೆ ಈ ವಾದವನ್ನು ರಾಜ್ಯ ಸರ್ಕಾರ ತಳ್ಳಿಹಾಕಿದ್ದು, ಜಲಪ್ರದೇಶದ ಭೂಭಾಗವನ್ನು ಅತಿಕ್ರಮಿಸಲಾಗಿದೆ ಹಾಗೂ ಯಾವುದೇ ಬಗೆಯ ಅನಧಿಕೃತ ಒತ್ತುವರಿ ಮತ್ತು ನಿರ್ಮಾಣಕ್ಕೆ ತೆರವು ನೋಟಿಸ್ ನೀಡುವ ಅಗತ್ಯವಿಲ್ಲ ಎಂದು ಪ್ರತಿವಾದ ಮಂಡಿಸಿತು. ವಾದ- ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್, ತಡೆಯಾಜ್ಞೆ ನೀಡಲು ನಿರಾಕರಿಸಿ ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜೂನ್ಗೆ ಮುಂದೂಡಿದೆ.







