ಹಿಮಾಚಲ ಪ್ರದೇಶ: ಭೂಕುಸಿತದ ಅವಶೇಷಗಳಡಿ 5 ಗಂಟೆ ಸಿಕ್ಕಿಹಾಕಿಕೊಂಡಿದ್ದ ಮಹಿಳೆ ಸ್ವಯಂರಕ್ಷಣೆ!

ಹಿಮಾಚಲ ಪ್ರದೇಶ ಉಪ ಮುಖ್ಯಮಂತ್ರಿ ಮುಕೇಶ್ ಅಗ್ನಿಹೋತ್ರಿ ಅವರೊಂದಿಗೆ ತನುಜಾ ಠಾಕೂರ್ PC: screengrab/x.com/Agnihotriinc
ಕುಲು, ಹಿಮಾಚಲ ಪ್ರದೇಶ: ಭೂಕುಸಿತದ ಅವಶೇಷಗಳಡಿ ಐದು ಗಂಟೆ ಕಾಲ ಸಿಕ್ಕಿಹಾಕಿಕೊಂಡಿದ್ದ 20 ವರ್ಷದ ಯುವತಿಯೊಬ್ಬಳು ಸ್ವತಃ ಬರಿಗೈಯಿಂದ ರಾಶಿ ಮಣ್ಣು ಅಗೆದು ಐದು ಗಂಟೆ ಬಳಿಕ ಜೀವಂತವಾಗಿ ಹೊರಬಂದ ಪವಾಡಸದೃಶ ಘಟನೆ ಮಂಡಿಯಲ್ಲಿ ಬೆಳಕಿಗೆ ಬಂದಿದೆ. ಮೊದಲು ಉಸಿರಾಡಲು ಅಗತ್ಯವಿರುವಷ್ಟು ಮಣ್ಣನ್ನು ಸರಿಸಿ ಸ್ಥಳಾವಕಾಶ ಮಾಡಿಕೊಂಡು ಜೀವರಕ್ಷಣೆ ಮಾಡಿಕೊಂಡರು.
ಕ್ಷಣ ಕ್ಷಣಕ್ಕೂ ಮಣ್ಣು, ಕಲ್ಲು ಮತ್ತು ಅವಶೇಷಗಳ ರಾಶಿ ಮತ್ತಷ್ಟು ಆಳಕ್ಕೆ ತಳ್ಳುತ್ತಿದ್ದರೂ, ಕೆಚ್ಚೆದೆಯಿಂದ ಮಣ್ಣನ್ನು ಸರಿಸುತ್ತಾ ಬಂದರು. ಬದುಕಿನ ಹೋರಾಟದಲ್ಲಿ ಒಂದು ಕ್ಷಣ ಎಚ್ಚರ ತಪ್ಪಿದರೂ ಸಾವು ಖಚಿತ ಎನ್ನುವುದು ಮನವರಿಕೆಯಾದಾಗ ಎಲ್ಲ ಶಕ್ತಿಯನ್ನು ಒಗ್ಗೂಡಿಸಿ ಹೋರಾಡಿದರು. "ನನಗೆ ಉಸಿರಾಡಲು ಸ್ಥಳಾವಕಾಶ ಇರುವಷ್ಟು ಮಣ್ಣು ಸರಿಸುತ್ತಾ ಬಂದೆ" ಎಂದು ಯುವತಿ ತನುಜಾ ಠಾಕೂರ್ ಸಾಹಸಗಾಥೆ ವಿವರಿಸಿದರು.
ಹೊರಗೆ ಅವರ ಕುಟುಂಬದವರು ಮತ್ತು ಗ್ರಾಮಸ್ಥರು ಐದು ಗಂಟೆಗಳಿಂದ ಆಕೆಗಾಗಿ ಹುಡುಕಾಟ ನಡೆಸುತ್ತಿದ್ದರೆ, ಒಳಗೆ ಮಣ್ಣಿನಲ್ಲಿ ಹೂತು ಬದುಕಿನ ಕೊನೆ ಕ್ಷಣಗಳನ್ನು ಎದುರಿಸುತ್ತಿದ್ದರು. "ನಾನು ಜೀವಂತವಾಗಿ ಹೊರಬರಬೇಕು ಎಂಬ ಛಲದಿಂದ ಇದ್ದೆ" ಎಂದರು. ಕೊನೆಗೆ ಮಣ್ಣಿನ ಅವಶೇಷಗಳಡಿ ಸಿಕ್ಕಿಕೊಂಡಿದ್ದ ತನುಜಾ ಠಾಕೂರ್ ಅವರನ್ನು ಪೋಷಕರು ಹೊರಕ್ಕೆ ಎಳೆದರು.
ಮಿಂಚಿನ ಪ್ರವಾಹದಿಂದಾಗಿ ಮಂಡಿಯಲ್ಲಿ ವ್ಯಾಪಕ ಸಾವು ನೋವು ಹಾಗೂ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು, ಜೂನ್ 30- ಜುಲೈ 1ರ ಮೇಘಸ್ಫೋಟದಲ್ಲಿ ಜೀವನ್ಮರಣ ಹೋರಾಟ ನಡೆಸಿ ತನುಜಾ ಜೀವಂತವಾಗಿ ಹೊರಬಂದರು. "ಪ್ರತಿಯೊಬ್ಬರೂ ಓಡಿ ಹೋಗಿದ್ದರು. ಪ್ರವಾಹದ ನೀರು ಮನೆಗಳಿಗೆ ನುಗ್ಗುತ್ತಿತ್ತು. ಭಯದಿಂದ ಜನ ಚೀರಾಡುತ್ತಿದ್ದರು. ಸುರಕ್ಷಿತ ಜಾಗಕ್ಕೆ ತೆರಳಲು ನಾನು ಹೊರಬಂದೆ. ನಮ್ಮ ಮನೆಯ ಸುತ್ತಲೂ ಭೂಕುಸಿತದಿಂದ ಮಣ್ಣಿನ ದೊಡ್ಡ ರಾಶಿಯೇ ಆವರಿಸಿತು" ಎಂದು ವಿವರಿಸಿದರು.







