ಸಮಾಜಮುಖಿ ಸಂವೇದನೆಯನ್ನು ಹೊಂದಿರುವ ಕತೆಗಳು

ಎಂ. ಅಶೀರುದ್ದೀನ್ ಸಾರ್ತಬೈಲ್ ಅವರ ಮೊದಲ ಸಣ್ಣ ಕತೆಗಳ ಸಂಕಲನ ‘ಪಾಸ’ ತನ್ನ ಹೆಸರಿನಿಂದಲೇ ಗಮನ ಸೆಳೆಯುತ್ತದೆ. ಕನ್ನಡದ ಕಥಾ ಸಂಕಲನವೊಂದು ತುಳು ಭಾಷೆಯ ಶೀರ್ಷಿಕೆಯನ್ನು ಹೊಂದಿರುವುದು ವಿಶೇಷ. ಪಾಸ ಎಂದರೆ ತುಳುವಿನಲ್ಲಿ ಉಪವಾಸ ಎಂದರ್ಥ. ಮುಖ್ಯವಾಗಿ ಇದು ಮುಸ್ಲಿಮರ ರಮಝಾನ್ ಸಂದರ್ಭದ ಉಪವಾಸಕ್ಕೆ ಅನ್ವಯಿಸುವಂತಹದ್ದು. ‘ಉಪವಾಸ’ ಪವಿತ್ರವೂ ಹೌದು, ದೇಹ ದಂಡನೆಯೂ ಹೌದು ಎಂದು ಲೇಖಕರು ಮುನ್ನುಡಿಯಲ್ಲಿ ತಿಳಿಸುತ್ತಾರೆ. ಮುಂದುವರಿದು ಉಪವಾಸ ಹಸಿವನ್ನು ನೆನಪಿಸುತ್ತದೆ ಹಾಗೂ ಹಸಿದಿರುವ ಜನರನ್ನು ನೆನಪಿಸುತ್ತದೆ ಎಂದಿರುವುದು ಅರ್ಥಪೂರ್ಣವೆನಿಸುತ್ತದೆ.
ಅಶೀರುದ್ದೀನ್ ವೃತ್ತಿಯಲ್ಲಿ ಶಿಕ್ಷಕರು. ಅವರು ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿರುವವರು. ಅವರಲ್ಲಿ ಸಾಮಾಜಿಕ ಪ್ರಜ್ಞಾವಂತಿಕೆ ಹಾಗೂ ಸಾಹಿತ್ಯಿಕ ಆಸಕ್ತಿ ಜೊತೆಗೂಡಿದೆ. ಹೀಗಾಗಿ ಈ ಸಂಕಲನದಲ್ಲಿರುವ ಕತೆಗಳು ಸಮಾಜಮುಖಿ ಸಂವೇದನೆಯನ್ನು ಹೊಂದಿವೆ.
ಈ ಸಂಕಲನದಲ್ಲಿ ೧೬ ಕತೆಗಳಿವೆ. ಇವುಗಳಲ್ಲಿ ‘ಮಸೀದಿಯ ಕಲ್ಲು’, ‘ಮಸೀದಿಯ ಕಲೆಕ್ಷನ್’, ‘ಒಂದು ತುಂಡು ಮಾಂಸ’, ‘ಪಾಸ’, ‘ಬಡ್ಡಿಮಗ’, ‘ಒಂದು ಕೊಂಡೆ ಹಾಲು’, ‘ಕಿಟ್’, ‘ದಾಡಿವಾಲ’ ಮನಸ್ಸನ್ನು ತಟ್ಟುತ್ತವೆ. ಮುಸ್ಲಿಮ್ ಲೇಖಕರ ಕತೆಗಳೆಂದರೆ ಕೇವಲ ಮುಸ್ಲಿಮ್ ಸಂವೇದನೆಯ ಕತೆಗಳೆಂಬ ತಪ್ಪು ಅಭಿಪ್ರಾಯ ಹಲವರಲ್ಲಿದೆ. ಹಿಂದೂ ಮತ್ತು ಮುಸ್ಲಿಮರು ನೆರೆಹೊರೆಯವರಾಗಿ ಜೀವನ ಮಾಡುವಾಗ ಸಹಜವಾಗಿಯೇ ಮಾನವೀಯ ಸಂವೇದನೆ ಎಲ್ಲವನ್ನೂ ಮೀರಿ ನಿಲ್ಲುತ್ತದೆ. ಅಶೀರುದ್ದೀನ್ ಕತೆಗಳಲ್ಲಿ ಇಂತಹ ಗುಣಗಳನ್ನು ಗುರುತಿಸಬಹುದು.
‘ಮಸೀದಿಯ ಕಲ್ಲು’ ಕೋಮುವಾದಿಗಳ ಕಿಡಿಗೇಡಿತನಕ್ಕೆ ಹೇಗೆ ಸ್ವಧರ್ಮೀಯನಾಗಿರುವ ಬಡವನೊಬ್ಬ ತೊಂದರೆಗೀಡಾಗುತ್ತಾನೆ ಎಂಬುದನ್ನು ನಿರೂಪಿಸುತ್ತದೆ. ‘ಮಸೀದಿಯ ಕಲೆಕ್ಷನ್’ ಮತ್ತು ‘ಬಡ್ಡಿ ಮಗ’ ಕತೆಗಳು ಧಾರ್ಮಿಕ ಡಾಂಭಿಕತನವನ್ನು ಬಯಲಿಗೆಳೆಯುತ್ತವೆ. ಹೇಳುವುದೊಂದು ಮಾಡುವುದು ಇನ್ನೊಂದು ಎನ್ನುವಂತಹ ಮಾದರಿಯ ವ್ಯಕ್ತಿಗಳು ಎಲ್ಲ ಮತ, ಧರ್ಮಗಳಲ್ಲೂ ಇದ್ದಾರೆ ಎಂಬುದನ್ನು ಈ ಕತೆಗಳು ತೆರೆದಿಡುತ್ತವೆ. ‘ಒಂದು ಕೊಂಡೆ ಹಾಲು’ ಮತ್ತು ‘ಕಿಟ್’ ಕತೆಗಳು ಮತೀಯ ಸಾಮರಸ್ಯ, ಮಾನವೀಯತೆಯಗಳಿಗೆ ಕನ್ನಡಿ ಹಿಡಿಯುತ್ತವೆ. ಈ ಸಂಕಲನದ ಶೀರ್ಷಿಕೆ ಹೊತ್ತ ಕತೆ ‘ಪಾಸ’ ಪ್ರಾತಿನಿಧಿಕವಾದ ಕತೆಯಾಗಿ ನಿಲ್ಲುವಂತಹ ಅರ್ಹತೆಯನ್ನು ಪಡೆಯುತ್ತದೆ. ಸಹಜವಾಗಿರುವ ಮಾನವೀಯ ಸಂಬಂಧಗಳ ಬಂಧ ಹಾಗೂ ಅಂತಃಕರಣದ ಭಾವನೆಗಳು ಸಂಕುಚಿತ ಕೋಮುವಾದವನ್ನು ಮೀರಿ ನಿಲ್ಲುವಂತಹ ವಾಸ್ತವ ಚಿತ್ರಣ ಇಲ್ಲಿ ಕಾಣುತ್ತದೆ. ಇದೊಂದು ಯಶಸ್ವಿ ಕತೆ. ‘ದಾಡಿವಾಲ’ ಎಂಬ ಕಿರು ಕತೆ ಗಡ್ಡ ಬಿಟ್ಟ ಮುಸ್ಲಿಮರನ್ನೆಲ್ಲ ಉಗ್ರಗಾಮಿಯೆಂದು ಅಪಾರ್ಥ ಮಾಡಿಕೊಳ್ಳುವವರ ಭ್ರಮೆಯನ್ನು ಕಳಚುತ್ತದೆ.
ಅಶೀರುದ್ದೀನ್ ಅವರ ಕೆಲವು ಕತೆಗಳು ಅತ್ಯಂತ ಸರಳ ರೇಖೆಯಲ್ಲಿ ಸಾಗುತ್ತ ಅವಸರದ ಅಂತ್ಯ ಕಾಣುತ್ತವೆ. ಒಂದರೆಡು ಕತೆಗಳು ತೆಳು ಭಾವನೆಗಳಿಗೆ ಸೀಮಿತಗೊಳ್ಳುತ್ತವೆ. ಕತೆಗಳ ಯಶಸ್ಸು ಕಲೆಗಾರಿಕೆಯ ಸೂಕ್ಷ್ಮ ಹಾಗೂ ಸಂಕೀರ್ಣತೆಯೊಂದಿಗೆ ಹೆಣೆದುಕೊಳ್ಳುವುದರಲ್ಲಿದೆ. ಇದು ಲೇಖಕರ ಮೊದಲ ಕೃತಿಯಾಗಿರುವುದರಿಂದ ಇವೆಲ್ಲ ಸಹಜ. ಆದರೆ ಅಶೀರುದ್ದೀನ್‌ಅವರಿಗೆ ಕತೆ ಕಟ್ಟುವ ವಿಧಾನ ತಿಳಿದಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಾಹಿತ್ಯದ ಹೆಚ್ಚಿನ ಬೆಳವಣಿಗೆಯನ್ನು ಅವರಿಂದ ನಿರೀಕ್ಷಿಸಬಹುದು.







