ಮಾಯಾವತಿ ಇಂಡಿಯಾ ಒಕ್ಕೂಟ ಸೇರಿದ್ದರೆ, ಬಿಜೆಪಿ ಸೋಲುತ್ತಿತ್ತು: ರಾಹುಲ್ ಗಾಂಧಿ

ಲಕ್ನೋ: ಇಂಡಿಯಾ ಒಕ್ಕೂಟಕ್ಕೆ ಮಾಯಾವತಿ ನೇತೃತ್ವದ ಬಿ ಎಸ್ ಪಿ ಸೇರಿದ್ದರೆ ಬಿಜೆಪಿಯು 2024ರ ಲೋಕಸಭಾ ಚುನಾವಣೆಯಲ್ಲಿ ಸೋಲುತ್ತಿತ್ತು ಎಂದು ಕಾಂಗ್ರೆಸ್ ಸಂಸದ, ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಗುರುವಾರ ತಮ್ಮ ಕ್ಷೇತ್ರ ರಾಯ್‌ಬರೇಲಿಗೆ ಎರಡು ದಿನಗಳ ಭೇಟಿಯ ನೀಡಿರುವ ಅವರು ಕಾರ್ಯಕ್ರಮವೊಂದರಲ್ಲಿ ದಲಿತ ವಿದ್ಯಾರ್ಥಿಗಳ ಗುಂಪಿನೊಂದಿಗೆ ಮಾತನಾಡುತ್ತಿದ್ದರು. "ಮಾಯಾವತಿ ಚುನಾವಣೆಗಳಲ್ಲಿ ಸರಿಯಾಗಿ ಸ್ಪರ್ಧಿಸುತ್ತಿಲ್ಲ ಏಕೆ? ನಾವು ಅವರನ್ನು ನಮ್ಮೊಂದಿಗೆ (ಇಂಡಿಯಾ ಒಕ್ಕೂಟ) ಸೇರಲು ಆಹ್ವಾನಿಸಿದ್ದೆವು. ಆದರೆ ಅವರು ಹಾಗೆ ಮಾಡಲಿಲ್ಲ. ಕಾಂಗ್ರೆಸ್, ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಬಿಎಸ್‌ಪಿ ಮೂರು ಪಕ್ಷಗಳು ಒಟ್ಟಿಗೆ ಚುನಾವಣೆ ಸ್ಪರ್ಧಿಸಿದ್ದರೆ, ಬಿಜೆಪಿ ಸೋಲುತ್ತಿತ್ತು" ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟರು.
ರಾಹುಲ್ ಗಾಂಧಿಯವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಬಿ ಎಸ್ ಪಿ ಮುಖ್ಯಸ್ಥೆ ಮಾಯಾವತಿ, ಕಾಂಗ್ರೆಸ್ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. "ಕಾಂಗ್ರೆಸ್ ಪಕ್ಷವು ಪ್ರಬಲವಾಗಿರುವ ಅಥವಾ ಅದರ ಸರ್ಕಾರಗಳನ್ನು ಹೊಂದಿರುವ ರಾಜ್ಯಗಳಲ್ಲಿ ಬಿಎಸ್‌ಪಿ ಬಗ್ಗೆ ದುರುದ್ದೇಶಪೂರಿತ ಮತ್ತು ಕಾರ್ಯಕರ್ತರ ಬಗ್ಗೆ ಜಾತಿವಾದಿ ಮನೋಭಾವವನ್ನು ಹೊಂದಿದೆ. ಆದರೆ ಪಕ್ಷವು ದುರ್ಬಲವಾಗಿರುವ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮಾತುಕತೆ ನಡೆಸುತ್ತಿದೆ. ಇದು ಕಾಂಗ್ರೆಸ್‌ನ ದ್ವಂದ್ವ ಸ್ವಭಾವವಲ್ಲವೇ?" ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಮತ್ತು ಇತರ ಪಕ್ಷಗಳೊಂದಿಗಿನ ಹಿಂದಿನ ಮೈತ್ರಿಗಳು ಬಿಎಸ್‌ಪಿಗೆ ಹಾನಿ ಮಾಡಿವೆ ಎಂದು ಮಾಯಾವತಿ ಪ್ರತಿಪಾದಿಸಿದ್ದಾರೆ. ಏಕೆಂದರೆ ಅದರ ಮೂಲ ಮತಗಳು ವರ್ಗಾವಣೆಯಾದವು. ಕಾಂಗ್ರೆಸ್, ಬಿಜೆಪಿ ಮತ್ತು ಇತರ ಪಕ್ಷಗಳು ಬಾಬಾಸಾಹೇಬ್ ಅಂಬೇಡ್ಕರ್, ಬಿಎಸ್‌ಪಿ ಮತ್ತು ದಲಿತ-ಬಹುಜನ ಹಿತಾಸಕ್ತಿಗಳನ್ನು ವಿರೋಧಿಸುತ್ತಿವೆ ಎಂದು ಅವರು ಆರೋಪಿಸಿದರು.







