ಬಿಜೆಪಿ ಸರಕಾರದ ಅವಧಿಯ ವೈದ್ಯಕೀಯ ಕಾಲೇಜುಗಳ ಕಟ್ಟಡ ಕಾಮಗಾರಿಯಲ್ಲಿ ಅಕ್ರಮ

ಬೆಂಗಳೂರು : ಬಿಜೆಪಿ ಸರಕಾರದ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರ ಅವಧಿಯಲ್ಲಿ ಕೈಗೆತ್ತಿಕೊಂಡಿದ್ದ ವೈದ್ಯಕೀಯ ಕಾಲೇಜುಗಳ ಕಟ್ಟಡ ಕಾಮಗಾರಿಯಲ್ಲಿ ಭ್ರಷ್ಟಾಚಾರ, ನಿಯಮ ಉಲ್ಲಂಘನೆ, ಅನಗತ್ಯ ವೆಚ್ಚ ಹೆಚ್ಚುವರಿ ಕಾಮಗಾರಿಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅರೋಪಕ್ಕೆ ಗುರಿಯಾಗಿರುವವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ದೋಷಾರೋಪ ಪಟ್ಟಿ ತಯಾರಿಸಲು ಕಾಂಗ್ರೆಸ್ ಸರಕಾರವು ಮುಂದಾಗಿದೆ.
ರಾಜ್ಯದ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ವೈದ್ಯಕೀಯ ಕಾಲೇಜುಗಳ ಕಟ್ಟಡ ಕಾಮಗಾರಿಗಳಲ್ಲಿ ನಿಯಮ ಉಲ್ಲಂಘನೆ, ಭ್ರಷ್ಟಾಚಾರ ಮತ್ತು ಅನಗತ್ಯ ವೆಚ್ಚವಾಗಿದೆ ಎಂದು ಲೋಕೋಪಯೋಗಿ ಇಲಾಖೆಯು ನೀಡಿರುವ ತಾಂತ್ರಿಕ ವರದಿ ಆಧರಿಸಿ ದೋಷಾರೋಪ ಪಟ್ಟಿ ತಯಾರಿಸಲು ವೈದ್ಯಕೀಯ ಶಿಕ್ಷಣ ಇಲಾಖೆಯು ಆದೇಶಿಸಿದೆ.
ನಿಯಮ ಪಾಲನೆಯಾಗಿಲ್ಲ. ಸಕ್ಷಮ ಪ್ರಾಧಿಕಾರಗಳ ಆಡಳಿತಾತ್ಮಕ ಅನುಮೋದನೆ ಪಡೆಯದೇ ದುರುದ್ದೇಶಪೂರ್ವಕವಾಗಿ ಹೆಚ್ಚುವರಿ ಕಾಮಗಾರಿ ನಡೆಸಿರುವುದನ್ನು ತನಿಖಾ ತಂಡವು ದೃಢಪಡಿಸಿದೆ.
ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ, ಚಿಕ್ಕಮಗಳೂರು ವೈದ್ಯಕೀಯ ಕಾಲೇಜುಗಳ ನಿರ್ಮಾಣ ಕಾಮಗಾರಿಯಲ್ಲಿ ದೊಡ್ಡಮಟ್ಟದ ಭ್ರಷ್ಟಾಚಾರ ನಡೆದಿದೆ ಎಂಬ ದೂರುಗಳ ಕುರಿತು ಸರಕಾರವು ರಚಿಸಿದ್ದ ತನಿಖಾ ತಂಡವು ವರದಿ ನೀಡಿತ್ತು. ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿರುವ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿದೆ.
ಈ ನಾಲ್ಕು ವೈದ್ಯಕೀಯ ಕಾಲೇಜುಗಳಲ್ಲಿ ನಡೆದಿರುವ ವಿವಿಧ ರೀತಿಯ ಅಕ್ರಮಗಳ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ ವರ್ಷದ ಬಳಿಕ ಆರೋಪಿತರ ವಿರುದ್ಧ ದೋಷಾರೋಪ ಪಟ್ಟಿ ತಯಾರಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಿಸಿರುವುದು ಮುನ್ನೆಲೆಗೆ ಬಂದಿದೆ.
ಆಡಳಿತಾತ್ಮಕ ಅನುಮೋದನೆ ಪಡೆಯದೇ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅನಗತ್ಯ ವೆಚ್ಚ ಮಾಡಲಾಗಿತ್ತು. ಇದಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಅನುಬಂಧ -1ರಿಂದ 4 ನ್ನು ಒಳಗೊಂಡ ದೋಷಾರೋಪಣೆ ಪಟ್ಟಿ ತಯಾರಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ಜಿ.ನಂಜುಂಡಯ್ಯ ಅವರನ್ನು 2026ರ ಮಾರ್ಚ್‌ನಲ್ಲಿಯೇ ಆದೇಶ ಹೊರಡಿಸಿದೆ.
ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ವೈದ್ಯಕೀಯ ಕಾಲೇಜುಗಳ ಕಟ್ಟಡಕಾಮಗಾರಿಗಳಿಗೆ ನಿಯಮಗಳನ್ನು ಪಾಲಿಸಲು ದುರುದ್ದೇಶಪೂರ್ವಕವಾಗಿ ಸಕ್ಷಮ ಪ್ರಾಧಿಕಾರದ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯದೇ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಅನಗತ್ಯ ವೆಚ್ಚ ಮಾಡಿರುವುದನ್ನು ಸರಕಾರದ ಹಂತದಲ್ಲಿ ಗಮನಿಸಲಾಗಿದೆ. ಇದರಿಂದ ಸರಕಾರದ ಬೊಕ್ಕಸಕ್ಕೆ ಅಧಿಕ ಪ್ರಮಾಣದಲ್ಲಿ ನಷ್ಟವಾಗಿರುವುದು ಪರಿಶೀಲನಾರ್ಹವಾಗಿದೆ ಎಂದು ಆದೇಶದಲ್ಲಿ ವಿವರಿಸಿತ್ತು.
ಲೋಕೋಪಯೋಗಿ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯ ತನಿಖಾ ತಂಡವು 2023ರ ನವೆಂಬರ್ 13ರಂದೇ ತನಿಖಾ ವರದಿ ಸಲ್ಲಿಸಿತ್ತು. ತನಿಖಾ ತಂಡವು ಸಲ್ಲಿಸಿದ್ದ ತನಿಖಾ ವರದಿಯನ್ನು ಸರಕಾರವು ದಾಖಲೆಗಳೊಂದಿಗೆ ಪರಿಶೀಲನೆ ನಡೆಸಿತ್ತು. ಟೆಂಡರ್ ಪ್ರಕ್ರಿಯೆಯಲ್ಲಿ ಕೆಲವು ನಿರ್ಬಂಧಿತ ಷರತ್ತುಗಳಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗುತ್ತಿಗೆದಾರರು ಭಾಗವಹಿಸಲು ತಪ್ಪಿಸಿದಂತಾಗಿತ್ತು. ಅಲ್ಲದೇ ಸ್ಪರ್ಧಾತ್ಮಕ ಪ್ರಕ್ರಿಯೆಯನ್ನು ನಿಯಂತ್ರಣ ಮಾಡಲಾಗಿತ್ತು. ಹೀಗಾಗಿ ಟೆಂಡರ್‌ನಲ್ಲಿ ಕೇವಲ 3 ಮಂದಿ ಬಿಡ್‌ದಾರರು ಮಾತ್ರ ಭಾಗವಹಿಸಿದ್ದರು. ಈ ಮೂವರೂ ಅರ್ಹತೆ ಪಡೆದಿದ್ದರು.
ಟೆಂಡರ್ ಪ್ರಕ್ರಿಯೆಯನ್ನು ರಾಜ್ಯ ಮಟ್ಟದ ತಾಂತ್ರಿಕ ಸಮಿತಿಯಲ್ಲಿ ಮಂಡಿಸಿ ಅನುಮೋದನೆ ಪಡೆದಿದ್ದರೂ ಸಹ ಸಂಬಂಧಪಟ್ಟ ಅಧಿಕಾರಿ ವರ್ಗವು ನಿಯಮಗಳ ಉಲ್ಲಂಘನೆ ಮಾಡಿರುವುದು ತನಿಖಾ ವರದಿಯಿಂದ ನಿಖರವಾಗಿ ಕಂಡು ಬಂದಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಆದೇಶದಲ್ಲಿ ವಿವರಿಸಿದೆ.
ಈ ತನಿಖಾ ವರದಿಯು 93 ಪುಟಗಳನ್ನು ಹೊಂದಿದೆ. ಈ ವರದಿಯೊಂದಿಗೆ ಎಲ್ಲ ದಾಖಲೆಗಳು 8 ಸಂಪುಟ ಮತ್ತು 15 ಅನುಬಂಧಗಳನ್ನು ಒಳಗೊಂಡಿದೆ. ಈ ಎಲ್ಲ ದಾಖಲೆಗಳನ್ನು ಆಧರಿಸಿ ಶಿಸ್ತು ಕ್ರಮ ಜರುಗಿಸಬೇಕಿದೆ. ಕರಡು ದೋಷಾರೋಪ ಪಟ್ಟಿಯೊಂದಿಗೆ ಅನುಬಂಧ-1ರಿಂದ 4ನ್ನು ತಯಾರಿಸಬೇಕಿದೆ. ಅಲ್ಲದೇ ತನಿಖಾ ತಂಡವು ಸಲ್ಲಿಸಿರುವ ದಾಖಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕಾರಣ ಶಿಸ್ತು ಕ್ರಮದ ಉದ್ದೇಶವು ಪೂರ್ಣಗೊಳಿಸಬೇಕು. ಇದಕ್ಕೂ ಮುನ್ನ ಪ್ರಾರಂಭಿಕವಾಗಿ ಕರಡು ದೋಷಾರೋಪ ಪಟ್ಟಿ ತಯಾರಿಸುವುದು ಮುಖ್ಯವಾಗಿದೆ ಎಂದು ಆದೇಶದಲ್ಲಿ ಹೇಳಿರುವುದು ಗೊತ್ತಾಗಿದೆ. ಲೋಕೋಪಯೋಗಿ ಇಲಾಖೆ ನೀಡಿರುವ ತಾಂತ್ರಿಕ ವರದಿ ಆಧಾರದ ಮೇಲೆ ಚಿಕ್ಕಬಳ್ಳಾಪುರ, ಹಾವೇರಿ, ಯಾದಗಿರಿ ಮತ್ತು ಚಿಕ್ಕಮಗಳೂರು ವೈದ್ಯಕೀಯ ಕಾಲೇಜುಗಳ ಕಟ್ಟಡಗ ಕಾಮಗಾರಿಗಳಿಗೆ ನಿಯಮಗಳನ್ನು ಪಾಲಿಸಿಲ್ಲ ಎಂಬುದು ಖಚಿತಪಟ್ಟಿದೆ. ಹಾಗೆಯೇ ಸಕ್ಷಮ ಪ್ರಾಧಿಕಾರದ ಆಡಳಿತಾತ್ಮಕ ಅನುಮೋದನೆಯನ್ನು ಪಡೆಯದೇ ಇರುವುದರ ಹಿಂದೆ ದುರದ್ದೇಶವಿದೆ. ಈ ಮೂಲಕ ಅನಗತ್ಯವಾಗಿ ಹೆಚ್ಚುವರಿ ಕಾಮಗಾರಿ ಮತ್ತು ಅನಗತ್ಯವಾಗಿ ವೆಚ್ಚ ಮಾಡಲಾಗಿದೆ ಎಂದು ಆದೇಶದಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಸಚಿವ ಸಂಪುಟದ ಅನುಮೋದನೆ ಪಡೆದಿರಲಿಲ್ಲ
ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮೊದಲು 525 ಕೋಟಿ ರೂ. ಮಂಜೂರಾಗಿತ್ತು. ಆದರೆ, ಯಾವುದೇ ಪೂರ್ವಾನುಮತಿಯಿಲ್ಲದೆ ಈ ವೆಚ್ಚವನ್ನು 810 ಕೋಟಿ ರೂ.ಗೆ ಏರಿಸಲಾಗಿತ್ತು ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ತಿಳಿಸಿದ್ದರು. ವೆಚ್ಚದಲ್ಲಿ ಹೆಚ್ಚುವರಿಯಾಗಿ ಸೇರಿಸಲಾದ 285 ಕೋಟಿ ರೂಪಾಯಿಗಳಿಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಪಡೆದಿರಲಿಲ್ಲ. ಈ ವೈದ್ಯಕೀಯ ಕಾಲೇಜುಗಳ ಕಾಮಗಾರಿಗಳಿಗೆ ಸುಮಾರು 467 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ವೈದ್ಯಕೀಯ ಕಾಲೇಜುಗಳ ನಿರ್ಮಾಣದ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದ ಡಾ.ಕೆ.ಸುಧಾಕರ್ ಅವರು ಈ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.







