27 ಎಸೆತಗಳಲ್ಲೇ ಯುಎಇ ವಿರುದ್ಧ ಗೆಲುವಿನ ಗುರಿ ತಲುಪಿ ದಾಖಲೆ ಸೃಷ್ಟಿಸಿದ ಭಾರತ

PC: ndtv
ದುಬೈ: ಏಷ್ಯಾ ಕಪ್ ಟಿ20 ಟೂರ್ನಿಯ ಎ ಗುಂಪಿನ ಏಕಪಕ್ಷೀಯ ಪಂದ್ಯದಲ್ಲಿ ಬುಧವಾರ ಕೇವಲ 27 ಎಸೆತಗಳಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ಟಿ20 ತಂಡ ಏಷ್ಯಾ ಕಪ್ ದಾಖಲೆ ಸ್ಥಾಪಿಸಿದೆ.
ಎದುರಾಳಿಗಳನ್ನು 13.1 ಓವರ್ಗಳಲ್ಲಿ ಕೇವಲ 57ಕ್ಕೆ ಕಟ್ಟಿಹಾಕಿದ ಭಾರತ ಕೇವಲ 4.3 ಓವರ್ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು. ಭಾರತ ಗೆಲುವಿನ ಗುರಿ ತಲುಪಿದಾಗ ಇನ್ನೂ 93 ಎಸೆತಗಳು ಬಾಕಿ ಇದ್ದವು. ಈ ಹಿಂದೆ 2014ರಲ್ಲಿ ನೆದರ್ಲೆಂಡ್ಸ್ ವಿರುದ್ಧ ಶ್ರೀಲಂಕಾ 90 ಎಸೆತಗಳಿರುವಾಗ ಗೆಲುವು ಸಾಧಿಸಿದ್ದು ದಾಖಲೆಯಾಗಿತ್ತು.
ಆದಾಗ್ಯೂ ಜಾಗತಿಕ ಟಿ20 ಇತಿಹಾಸದಲ್ಲಿ 101 ಎಸೆತಗಳು ಬಾಕಿ ಇರುವಾಗ ಅಂದರೆ ಕೇವಲ 19 ಎಸೆತಗಳಲ್ಲಿ ಒಮನ್ ವಿರುದ್ಧ ಇಂಗ್ಲೆಂಡ್ ಜಯ ದಾಖಲಿಸಿದ್ದು, ಸರ್ವಕಾಲಿಕ ದಾಖಲೆಯಾಗಿ ಉಳಿದಿದೆ. ಇದನ್ನು ಹೊರತುಪಡಿಸಿದರೆ ಭಾರತದ ಗೆಲುವು ವಿಶ್ವ ಕ್ರಿಕೆಟ್ನಲ್ಲಿ ಎರಡನೇ ಸ್ಥಾನದಲ್ಲಿದೆ.
ಈ ಮೊದಲು ಭಾರತ 2021ರಲ್ಲಿ ಸ್ಕಾಟ್ಲೆಂಡ್ ವಿರುದ್ಧ 81 ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿದ್ದು, ಭಾರತದ ಅತ್ಯುತ್ತಮ ದಾಖಲೆಯಾಗಿತ್ತು.





