ಸೇನೆಗೆ ಅವಮಾನ: ಪ್ರಧಾನಿಯೇಕೆ ಮೌನ?

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ ಗಡಿಯಾಚೆಗಿನ ಶಕ್ತಿಗಳನ್ನು ನಮ್ಮ ಸೇನೆ ಬಗ್ಗು ಬಡಿಯುವಲ್ಲಿ ಭಾಗಶಃ ಯಶಸ್ವಿಯಾಗಿದೆ. ಆದರೆ ಆಂತರಿಕ ಭದ್ರತೆಗೆ ಸವಾಲಾಗಿರುವ ತನ್ನದೇ ದೇಶದೊಳಗಿರುವ ಭಯೋತ್ಪಾದಕ ಶಕ್ತಿಗಳನ್ನು ಎದುರಿಸಲಾಗದೆ ಅದು ಅಸಹಾಯಕವಾಗಿದೆ. ಸೇನಾ ನೆಲೆಗಳ ಮೇಲೆ ಪಾಕಿಸ್ತಾನ ಸಿಡಿಸಿದ ಕ್ಷಿಪಣಿಗಳನ್ನು ಧ್ವಂಸಗೊಳಿಸುವಲ್ಲಿ ಯಶಸ್ವಿಯಾಗಿರುವ ಭಾರತದ ಯೋಧರು, ಇಲ್ಲಿನ ರಾಜಕೀಯ ನಾಯಕರು ಸೇನೆಯ ಮೇಲೆ ಪ್ರಯೋಗಿಸುತ್ತಿರುವ ಕ್ಷಿಪಣಿ ದಾಳಿಗಳಿಗೆ ಉತ್ತರಿಸಲಾಗದೆ ಕಂಗಾಲಾಗಿದ್ದಾರೆ. ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸೈನಿಕರ ಮೇಲೆಯೇ ಕೆಲವು ರಾಜಕೀಯ ಶಕ್ತಿಗಳು ನಡೆಸುತ್ತಿರುವ ದಾಳಿಯು ಪಹಲ್ಗಾಮ್ನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಮುಂದುವರಿದ ಭಾಗದಂತಿದೆ. ಕದನ ವಿರಾಮ ಘೋಷಣೆಯಾದಾಗ ಕೆಲವು ಶಕ್ತಿಗಳು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮತ್ತು ಅವರ ಕುಟುಂಬದ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ದಾಳಿ ನಡೆಸಿತು. ಗಡಿಯಾಚೆಗಿನ ದುಷ್ಕರ್ಮಿಗಳು ಮತ್ತು ದೇಶದೊಳಗಿರುವ ದುಷ್ಕರ್ಮಿಗಳ ಗುಂಪಿಗೆ ಏಕಕಾಲದಲ್ಲಿ ಉತ್ತರಿಸಬೇಕಾದ ಸ್ಥಿತಿ ಸೇನೆಯದಾಗಿತ್ತು. ಇದಾದ ಬೆನ್ನಿಗೇ, ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಕರ್ನಲ್ ಸೋಫಿಯಾ ಖುರೇಷಿಯವರನ್ನು ಮಧ್ಯಪ್ರದೇಶದ ಬಿಜೆಪಿಯ ಸಚಿವ ವಿಜಯ್ ಶಾ ಎಂಬವರು ‘ಭಯೋತ್ಪಾದಕರ ಸಹೋದರಿ’ ಎಂದು ಕರೆದಿದ್ದಾರೆ. ‘‘ಭಯೋತ್ಪಾದಕರಿಗೆ ಅವರ ಸೋದರಿಯ ಮೂಲಕವೇ ನಾವು ಉತ್ತರಿಸಿದ್ದೇವೆ’’ ಎನ್ನುವ ಹೇಳಿಕೆಯನ್ನು ನೀಡುವ ಮೂಲಕ, ಅವರು ಈ ದೇಶದ ಸೇನೆಯ ನಾಯಕತ್ವವನ್ನು ವಹಿಸಿದ ಯೋಧೆಯನ್ನು ಧರ್ಮದ ಆಧಾರದಲ್ಲಿ ‘ಭಯೋತ್ಪಾದಕರ ಸೋದರಿ’ಯೆಂದು ಗುರುತಿಸಿದ್ದಾರೆ. ಅಂದರೆ, ಅವರ ಪ್ರಕಾರ ಈ ದೇಶದ ಮುಸ್ಲಿಮರೆಲ್ಲರೂ ಭಯೋತ್ಪಾದಕರ ಸಂಬಂಧಿಗಳು. ಇಂತಹ ‘ದೇಶವಿರೋಧಿ’ ರಾಜಕಾರಣಿಗಳನ್ನು ಕಟ್ಟಿಕೊಂಡು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಬೇಕಾದ ಸ್ಥಿತಿ ಭಾರತದ್ದಾಗಿದೆ.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಯೋಧರ ಬಗ್ಗೆ ಒಂದಿಷ್ಟು ಗೌರವವಿರುವುದು ನಿಜವೇ ಆಗಿದ್ದರೆ, ಬಿಜೆಪಿಯ ವರಿಷ್ಠರು ತಕ್ಷಣವೇ ವಿಜಯ್ ಶಾರನ್ನು ಸಚಿವ ಸ್ಥಾನದಿಂದ ಇಳಿಸುವುದು ಮಾತ್ರವಲ್ಲ, ಪಕ್ಷದಿಂದ ವಜಾಗೊಳಿಸಿ ಆತನ ವಿರುದ್ಧ ದೂರು ದಾಖಲಿಸಬೇಕಾಗಿತ್ತು. ದೇಶದ ಪ್ರಶ್ನೆ ಬಂದಾಗ ಸ್ವಪಕ್ಷೀಯರೆಂಬ ನೆಲೆಯಲ್ಲಿ ಕ್ಷಮಿಸುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಬಿಜೆಪಿ ವರಿಷ್ಠರು ಸಾಬೀತು ಮಾಡಬೇಕಾಗಿತ್ತು. ಆಪರೇಷನ್ ಸಿಂಧೂರ ಘೋಷಣೆಯಾದಾಗ ಸರಕಾರದ ವೈಫಲ್ಯವನ್ನು ಟೀಕೆ ಮಾಡಿದ, ಮೋದಿಯ ಬೇಜವಾಬ್ದಾರಿಯನ್ನು ಪ್ರಶ್ನಿಸಿದ ಹಲವು ಯೂಟ್ಯೂಬರ್ಗಳ ಮೇಲೆ ಸರಕಾರ ಪ್ರಕರಣ ದಾಖಲಿಸಿತ್ತು. ಒಂದೆರಡು ಯೂಟ್ಯೂಬ್ ಚಾನೆಲ್ಗಳನ್ನು ನಿಷೇಧಿಸುವವರೆಗೆ ಸರಕಾರದ ಕ್ರಮ ಮುಂದುವರಿದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಸರಕಾರದ ವೈಫಲ್ಯವನ್ನು ಟೀಕಿಸಿದ ಹಲವರ ವಿರುದ್ಧ ಪೊಲೀಸರು ಸ್ವಯಂ ಆಸಕ್ತಿಯಿಂದ ಕ್ರಮ ತೆಗೆದುಕೊಂಡಿದ್ದರು. ಆದರೆ ಆಪರೇಷನ್ ಸಿಂಧೂರದಲ್ಲಿ ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಭಾರತೀಯ ಸೇನೆಯನ್ನು ಮುನ್ನಡೆಸಿದ ಕರ್ನಲ್ ಸೋಫಿಯಾ ಖುರೇಷಿಯವರನ್ನು ‘ಭಯೋತ್ಪಾದಕರ ಸೋದರಿ’ ಎಂದು ಕರೆದ ಸಚಿವ ವಿಜಯ್ ಶಾ ಬಗ್ಗೆ ಜಾಣ ಕುರುಡುತನವನ್ನು ಪ್ರದರ್ಶಿಸಿತು. ವಿರೋಧ ಪಕ್ಷಗಳು ಈ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ಒಂದು ದಿನದ ಬಳಿಕ, ಇದೀಗ ಮಧ್ಯಪ್ರದೇಶದ ಹೈಕೋರ್ಟ್ ಆತನ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ಆದೇಶ ನೀಡಿದೆ. ಈ ಆದೇಶದ ಬಳಿಕವಾದರೂ ಬಿಜೆಪಿಯು ‘ದೇಶವಿರೋಧಿ’ ಹೇಳಿಕೆಗಾಗಿ ಆತನನ್ನು ಸಚಿವ ಸ್ಥಾನದಿಂದ ಕೆಳಗಿಳಿಸಿ, ಪಕ್ಷದಿಂದ ವಜಾಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಬಿಜೆಪಿಯ ದಿಲ್ಲಿ ವರಿಷ್ಠರು ಈವರೆಗೆ ಈತನ ಹೇಳಿಕೆಯ ವಿರುದ್ಧ ತುಟಿ ಬಿಚ್ಚಿಲ್ಲ. ಮಾತು ಮಾತಿಗೆ ವಿರೋಧ ಪಕ್ಷದ ದೇಶಪ್ರೇಮವನ್ನು ಪ್ರಶ್ನಿಸುವ ಪ್ರಧಾನಿ ಮೋದಿಯೂ ಮೌನ ತಳೆಯುವ ಮೂಲಕ ಸಚಿವ ವಿಜಯ್ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಈ ಮೂಲಕ ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ ಸೇನೆಯ ತ್ಯಾಗ ಬಲಿದಾನವನ್ನು ಅವರು ತಮ್ಮ ವೈಯಕ್ತಿಕ ರಾಜಕೀಯಕ್ಕೆ ಬಲಿಕೊಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಬಿಹಾರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಈ ಕಾರ್ಯಾಚರಣೆಯನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿಯು ಚುನಾವಣಾ ಪ್ರಚಾರಕ್ಕಾಗಿ ಮಿಲಿಟರಿ ಧಿರಿಸಿನಲ್ಲಿ ಪ್ರಧಾನಿ ಮೋದಿಯವರ ಪ್ಲೆಕ್ಸ್ಗಳನ್ನು ಹಾಕುತ್ತಿದೆ. ಬಿಜೆಪಿಯು ಸೇನೆಯ ತ್ಯಾಗ ಬಲಿದಾನಗಳನ್ನು ತನ್ನ ಚುನಾವಣೆಗೆ ಬಳಸಲು ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳ ನಾಯಕರು ಟೀಕಿಸುತ್ತಿದ್ದಾರೆ. ಈಗಾಗಲೇ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಸಾಧಕ ಬಾಧಕಗಳು ಚರ್ಚೆಯಲ್ಲಿವೆ. ಸೇನೆಗೆ ಸ್ವಾತಂತ್ರ್ಯ ನೀಡಿದ್ದೇನೆ ಎಂದಿದ್ದ ಪ್ರಧಾನಿ ಮೋದಿಯವರು, ಬಳಿಕ ಅಮೆರಿಕದ ನಿರ್ದೇಶನದಂತೆ ಕದನ ವಿರಾಮ ಘೋಷಿಸಿದ್ದಾರೆ ಎನ್ನುವ ಆರೋಪಗಳಿವೆ. ಈ ಕಾರ್ಯಾಚರಣೆಯಲ್ಲಿ ದೇಶಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ ಮತ್ತು ಹಲವು ಸೈನಿಕರು ಹುತಾತ್ಮರಾಗಿದ್ದಾರೆ. ನಾಗರಿಕರೂ ಪಾಕಿಸ್ತಾನದ ದಾಳಿಗೆ ತುತ್ತಾಗಿದ್ದಾರೆ. ಇವೆಲ್ಲದರ ಸತ್ಯಾಸತ್ಯತೆಯ ಬಗ್ಗೆ ಸ್ಪಷ್ಟೀಕರಣ ನೀಡುವ ಬದಲು, ಈ ನಾಶನಷ್ಟವನ್ನು ಪ್ರಧಾನಿಯು ತನ್ನ ಹೆಗ್ಗಳಿಕೆಯೆಂದು ಬಿಂಬಿಸಲು ಹೊರಡುವುದು ಸೇನೆಗೆ ಮಾಡುವ ಅವಮಾನವೇ ಆಗಿದೆ.
‘‘ಭಯೋತ್ಪಾದಕರ ಉದ್ದೇಶವೇ ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವುದು’’ ಎನ್ನುವ ಎಚ್ಚರಿಕೆಯನ್ನು ಸೇನೆಯು ಮೊದಲ ಪತ್ರಿಕಾಗೋಷ್ಠಿಯ ಸಂದರ್ಭದಲ್ಲೇ ನೀಡಿತ್ತು. ಅಷ್ಟೇ ಅಲ್ಲ, ಕರ್ನಲ್ ಸೋಫಿಯಾ ಖುರೇಷಿಯವರನ್ನು ಮುಂದಿಟ್ಟು ಪತ್ರಿಕಾಗೋಷ್ಠಿ ನಡೆಸುವ ಮೂಲಕ, ಪಾಕಿಸ್ತಾನಕ್ಕೂ ಭಾರತಕ್ಕೂ ಏಕಕಾಲದಲ್ಲಿ ಸಂದೇಶವೊಂದನ್ನು ನೀಡಿತ್ತು. ದೇಶದ ವಿಷಯ ಬಂದಾಗ ಭಾರತ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಒಗ್ಗಟ್ಟಿನಿಂದ ನಿಮಗೆ ಉತ್ತರ ನೀಡುತ್ತದೆ ಎನ್ನುವ ಸಂದೇಶ ಅದು. ಇದೇ ಸಂದರ್ಭದಲ್ಲಿ, ಪಾಕಿಸ್ತಾನದ ವಿರುದ್ಧ ನಡೆಯುವ ಕಾರ್ಯಾಚರಣೆ ಧರ್ಮಾಧಾರಿತವಾದುದಲ್ಲ. ಭಯೋತ್ಪಾದನೆಗೆ ಧರ್ಮವಿಲ್ಲ. ದೇಶ ಧರ್ಮಾತೀತವಾಗಿ ಒಂದಾಗಿ ನಿಲ್ಲಬೇಕಾದ ಸಮಯ ಇದು ಎನ್ನುವ ಸೂಚನೆಯನ್ನು ಸೇನೆ ದೇಶಕ್ಕೆ ನೀಡಿತ್ತು. ವಿಪರ್ಯಾಸವೆಂದರೆ, ಒಂದೆಡೆ ಸೇನೆ ಪಾಕಿಸ್ತಾನದ ವಿರುದ್ಧ ತಮ್ಮ ಪ್ರಾಣ ಒತ್ತೆಯಿಟ್ಟು ಕಾರ್ಯಾಚರಣೆ ನಡೆಸುತ್ತಿರಬೇಕಾದರೆ, ಇತ್ತ ದೇಶದಲ್ಲಿ ಮಾಧ್ಯಮಗಳು, ಸಂಘಪರಿವಾರ ಮತ್ತು ಬಿಜೆಪಿಯ ನಾಯಕರು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಗರಿಷ್ಠ ಪ್ರಯತ್ನ ನಡೆಸಿದರು. ಯುದ್ಧದ ಸಂದರ್ಭದಲ್ಲಿ ಪ್ರದರ್ಶಿಸಬೇಕಾದ ವಿವೇಕ, ತಾಳ್ಮೆ, ಮುತ್ಸದ್ದಿತನ ಯಾರಲ್ಲೂ ಕಾಣಲಿಲ್ಲ. ಗಡಿಯಾಚೆಗಿನ ದುಷ್ಕರ್ಮಿಗಳನ್ನು ಎದುರಿಸುವುದಕ್ಕಿಂತ ದೇಶದೊಳಗಿರುವ ವದಂತಿಗಳನ್ನು ಎದುರಿಸುವುದೇ ಸೇನೆಗೆ ಅತಿ ದೊಡ್ಡ ಸಮಸ್ಯೆಯಾಯಿತು. ಮಾನವ ಹಕ್ಕು ಸಂಘಟನೆಯೊಂದು ನೀಡಿದ ವರದಿಯ ಪ್ರಕಾರ, ಪಹಲ್ಗಾಮ್ ದಾಳಿಯ ಬಳಿಕ ೧೮೪ ಮುಸ್ಲಿಮ್ ವಿರೋಧಿ ದ್ವೇಷ ಘಟನೆಗಳು ನಡೆದಿವೆ. ಈ ಸಂದರ್ಭವನ್ನು ಹಿಂದೂ-ಮುಸ್ಲಿಮ್ ಎಂಬ ವಿಭಜನಾ ರಾಜಕೀಯಕ್ಕಾಗಿ ಬಿಜೆಪಿ ಮತ್ತು ಸಂಘಪರಿವಾರ ಗರಿಷ್ಟ ಪ್ರಮಾಣದಲ್ಲಿ ಬಳಸಿಕೊಂಡಿದೆ. ಭಯೋತ್ಪಾದಕರಿಗೆ ಪೂರಕವಾಗುವ, ಸಹಾಯವಾಗುವ ರೀತಿಯಲ್ಲಿ ದೇಶವನ್ನು ದ್ವೇಷದ ಮೂಲಕ ವಿಭಜಿಸುವ ಕೆಲಸವನ್ನು ಮಾಡಿದೆ. ಇದು ಈ ದೇಶದ ಸೇನೆಯ ತ್ಯಾಗ ಬಲಿದಾನಕ್ಕೆ ಎಸಗಿದ ದ್ರೋಹವಾಗಿದೆ. ಕದನ ವಿರಾಮವೇನೋ ಗಡಿಯಲ್ಲಿ ಘೋಷಣೆಯಾಗಿದೆ. ಆದರೆ, ದೇಶದೊಳಗೆ ಧರ್ಮಗಳ ನಡುವೆ, ಜಾತಿಗಳ ನಡುವಿನ ಕದನಕ್ಕೆ ವಿರಾಮ ಎಂದು? ಈ ಕದನ ವಿರಾಮಕ್ಕೂ ಅಮೆರಿಕವೇ ಮಧ್ಯಸ್ಥಿಕೆ ವಹಿಸಬೇಕು ಎಂದು ಪ್ರಧಾನಿ ಮೋದಿ ಬಯಸುತ್ತಿದ್ದಾರೆಯೇ? ಎಂದು ಜನರು ಕೇಳುವಂತಾಗಿದೆ.