ಯುರೋಪ್ ಒಕ್ಕೂಟದ ಅಧ್ಯಕ್ಷೆಯಾಗಿ ಉರ್ಸುಲಾ ವೊನ್ ಡೆರ್ ಲೆಯೆನ್ ಪುನರಾಯ್ಕೆ
ಉರ್ಸುಲಾ ವೊನ್ ಡೆರ್ ಲೆಯೆನ್ | PC : NDTV
ಕೋಲ್ಕತಾ : ಯುರೋಪಿಯನ್ ಒಕ್ಕೂಟದ ಅಧ್ಯಕ್ಷೆಯಾಗಿ ಉರ್ಸುಲಾ ವೊನ್ ಡೆರ್ ಲೆಯೆನ್ ಅವರು ಮತ್ತೆ ಐದು ವರ್ಷಗಳ ಅವಧಿಗೆ ಮರುನೇಮಕಗೊಡಿದ್ದಾರೆ. ಯುರೋಪಿಯನ್ ಮಂಡಳಿಯ ಸಭಾಧ್ಯಕ್ಷರಾಗಿ ಪೋರ್ಚುಗಲ್ನ ಆ್ಯಂಟೊನಿಯೊ ಕೊಸ್ಟಾ ಹಾಗೂ ಯುರೋಪ್ ವಿದೇಶಾಂಗ ನೀತಿಯ ಮುಖ್ಯಸ್ಥರಾಗಿ ಎಸ್ತೊನಿಯಾದ ಕಜಾ ಕಲ್ಲಾಸ್ ಅವರು ಆಯ್ಕೆಯಾಗಿದ್ದಾರೆ.
ಬ್ರುಸೆಲ್ಸ್ನಲ್ಲಿ ಶುಕ್ರವಾರ ನಡೆದ ಯುರೋಪ್ ಒಕ್ಕೂಟದ ಶೃಂಗಸಭೆಯಲ್ಲಿ ನಡೆದ ಈ ನೇಮಕಾತಿಗಳಿಗೆ 27 ರಾಷ್ಟ್ರಗಳ ಯುರೋಪ್ ನಾಯಕರು ತಮ್ಮ ಅಂಕಿತ ಹಾಕಿದ್ದಾರೆ.
ಯುರೋಪ್ ಒಕ್ಕೂಟದ ಅಧ್ಯಕ್ಷೆಯಾಗಿ ಪುನಾರಾಯ್ಕೆಗೊಂಡ ವೊನ್ ಡೆರ್ ಲೆಯೆನ್ ಆನಂತರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ತನ್ನನ್ನು ಎರಡನೆ ಅವಧಿಗೆ ಒಕ್ಕೂಟದ ಅಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ‘‘ನನಗೆ ದೊರೆತ ಗೌರವಕ್ಕೆ ಅಭಾರಿಯಾಗಿದ್ದೇನೆ ಹಾಗೂ ಈ ಕ್ಷಣವನ್ನು ಹಂಚಿಕೊಳ್ಳಲು ನಾನು ಸಂತಸಪಡುತ್ತೇನೆ’’ ಎಂದವರು ಹೇಳಿದರು.
ಯುರೋಪ್ ಒಕ್ಕೂಟದ ಭದ್ರತೆ ಹಾಗೂ ವಿದೇಶಾಂಗ ನೀತಿಯ ಮುಖ್ಯಸ್ಥರಾಗಿ ನೇಮಕಗೊಂಡ ಕಾಜಾ ಕಲ್ಲಾಸ್ ಅವರು ಮಾತನಾಡಿ ಯುರೋಪ್ನಲ್ಲಿ ಯುದ್ಧ ನಡೆಯುತ್ತಿದೆ. ಜಾಗತಿಕವಾಗಿ ಅಸ್ಥಿರತೆ ಬೆಳೆಯುತ್ತಿದೆ. ಯುರೋಪಿನ ಏಕತೆಗಾಗಿ ಶ್ರಮಿಸುವುದು ಖಂಡಿತವಾಗಿಯೂ ನನ್ನ ಧ್ಯೇಯವಾಗಿದೆ ಎಂದರು.
ಉಕ್ರೇನ್ ಜೊತೆ ರಶ್ಯದ ಯುದ್ಧದ ಮೂರನೇ ವರ್ಷಕ್ಕೆ ಕಾಲಿರಿಸಿರುವಂತೆಯೇ ಯುರೋಪ್ ಒಕ್ಕೂಟದ ಅಧ್ಯಕ್ಷೆಯಾಗಿ ಉರ್ಸುಲಾ ವೊನ್ ಡೆರ್ ಲಿಯೆನ್ ಆಯ್ಕೆಯಾಗಿರುವುದು ಗಮನಾರ್ಹವಾಗಿದೆ.
ಯುರೋಪ್ ಒಕ್ಕೂಟದ ನಾಯಕರ ಆಯ್ಕೆಯಲ್ಲಿ ಮಧ್ಯಮವಾದಿ ಬಣಗಳು ಉನ್ನತ ಸ್ಥಾನಗಳಲ್ಲಿ ತಮ್ಮ ಹಿಡಿತವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿವೆ. ಈ ತಿಂಗಳ ಆರಂಭದಲ್ಲಿ ಯುರೋಪ್ ಸಂಸತ್ಗೆ ನಡೆದ ಚುನಾವಣೆಯಲ್ಲಿ ಕಟ್ಟಾ ಬಲಪಂಥೀಯರು ತಮ್ಮ ಹಿಡಿತವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ
ಆದರೆ ಬಲಪಂಥೀಯವಾದಿ ಇಟಲಿ ಪ್ರಧಾನಿ ಜೊರ್ಜಿಯಾ ಮೆಲೊನಿ ಅವರು ವೊನ್ಡೆರ್ ಅವರ ಪುನಾರಾಯ್ಕೆಗಾಗಿ ನಡೆದ ಮತದಾನದಿಂದ ದೂರವುಳಿದಿದ್ದರು. ಅಲ್ಲದೆ ಕೋಸ್ಟಾ ಹಾಗೂ ಕಲ್ಲಾಸ್ ವಿರುದ್ಧ ಅವರು ಮತ ಚಲಾಯಿಸಿದ್ದರು.
ಆದಾಗ್ಯೂ ವೊನ್ ಡೆರ್ ಲೆಯೆನ್ ಅವರ ಪುನಾರಾಯ್ಕೆಗೆ ಯುರೋಪ್ ಸಂಸತ್ನಲ್ಲಿ ರಹಸ್ಯ ಮತದಾನದ ಮೂಲಕ ಅನುಮೋದನೆ ದೊರೆಯಬೇಕಿದೆ.
ಬ್ರುಸೆಲ್ಸ್ ಶೃಂಗಸಭೆಯಲ್ಲಿ ಯುರೋಪ್ ಒಕ್ಕೂಟದ ರಾಷ್ಟ್ರಗಳು ಉಕ್ರೇನ್ ಜೊತೆ ಭದ್ರತಾ ಒಪ್ಪಂದಕ್ಕೂ ಸಹಿಹಾಕಿವೆ. ರಶ್ಯದ ವಿರುದ್ಧ ಯುರೋಪ್ ರಾಷ್ಟ್ರಗಳ ಭದ್ರತೆಯನ್ನು ಬಲಪಡಿಸುವ ಬಗ್ಗೆಯೂ ಅವು ಚರ್ಚಿಸಿವೆ. ಮುಂದಿನ ಐದು ವರ್ಷಗಳ ಅವಧಿಗೆ ಯುರೋಪ್ ಒಕ್ಕೂಟದ ಆಯಕಟ್ಟಿನ ಆದ್ಯತೆಯ ಕಾರ್ಯಕ್ರಮಗಳಿಗೆ ಅವು ಸಮ್ಮತಿಯನ್ನು ವ್ಯಕ್ತಪಡಿಸಿದವು.
ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝ ಅವರ ಮೇಲೆ ವಾಮಾಚಾರ ಆರೋಪ ; ಇಬ್ಬರು ಸಚಿವರ ಬಂಧನ
ಮಾಲೆ : ಮಾಲ್ದೀವ್ಸ್ ಅಧ್ಯಕ್ಷ ಮುಹಮ್ಮದ್ ಮುಯಿಝ್ಝ ಅವರ ಮೇಲೆ ವಾಮಾಚಾರವನ್ನು ನಡೆಸಿದ್ದಾರೆಂಬ ಆರೋಪದಲ್ಲಿ ಅವರ ಸಂಪುಟದ ಇಬ್ಬರು ಸಚಿವರನ್ನು ಮಾಲ್ದೀವ್ಸ್ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಮಾಲ್ದೀನ್ಸ್ ಪರಿಸರ ಸಚಿವಾಲಯದ ಸಹಾಯಕ ಸಚಿವರಾದ ಶಂನಾಝ್ ಸಲೀಂ, ಅಧ್ಯಕ್ಷರ ಕಾರ್ಯಾಲಯದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರು ಅವರ ಪತಿ ಆದಂ ರಮೀಝ್ ಆದಂ ರಮೀಝ್ ಹಾಗೂ ಇನ್ನಿಬ್ಬರನ್ನು ಬಂಧಿಸಲಾಗಿದೆಯೆಂದು ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಮಾಲ್ದೀವ್ಸ್ ಅಧ್ಯಕ್ಷರ ವಿರುದ್ಧ ಯಾವ ಕಾರಣಕ್ಕಾಗಿ ಆರೋಪಿಗಳು ವಾಮಾಚಾರ ಪ್ರಯೋಗಿಸಿದ್ದಾರೆಂಬ ಬಗ್ಗೆ ಅದು ವಿವರಣೆಯನ್ನು ನೀಡಿಲ್ಲ.
ಶಂನಾಝ್ ಹಾಗೂ ಇತರ ಮೂವರನ್ನು ಕಳೆದ ರವಿವಾರ ಬಂಧಿಸಲಾಗಿದೆ. ಅವರೆಲ್ಲರಿಗೂ ಏಳು ದಿನ ರಿಮಾಂಡ್ ಕಸ್ಟಡಿ ವಿಧಿಸಲಾಗಿದೆ. ಸಚಿವ ಸ್ಥಾನದಿಂದ ಆಕೆಯನ್ನು ಅಮಾನತುಗೊಳಿಸಲಾಗಿದೆಯೆಂದು ಪರಿಸರ ಸಚಿವಾಲಯದ ಹೇಳಿಕೆ ತಿಳಿಸಿದೆ.
ಮುಯಿಝ್ಝ ಅವರು ಮಾಲೆ ಮೇಯರ್ ಆಗಿದ್ದಾಗಲೂ , ಶಂನಾಝ್ ಹಾಗೂ ರಮೀಝ್ ಅವರು ನಗರ ಮಂಡಳಿಯ ಸದಸ್ಯರಾಗಿ ಅವರ ಜೊತೆ ಕಾರ್ಯನಿರ್ವಹಿಸಿದ್ದರು. ರಮೀಝ್ ಅವರು ಕಳೆದ ಐದು ತಿಂಗಳುಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲವೆಂದು ವರದಿಗಳು ತಿಳಿಸಿವೆ. ಆದರೆ ಸಚಿವರ ಬಂಧನದ ಬಗ್ಗೆ ಮಾಲ್ದೀವ್ಸ್ ಸರಕಾರವಾಗಲಿ ಅಥವಾ ಅಧ್ಯಕ್ಷ ಕಾರ್ಯಾಲಯವಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆಯನ್ನು ನೀಡಿಲ್ಲ.