ರಶ್ಯವು ನಿಷೇಧಿತ ಶಸ್ತ್ರಾಸ್ತ್ರಗಳ ಉತ್ಪಾದನೆ ಆರಂಭಿಸಬೇಕು : ಪುಟಿನ್

ವ್ಲಾದಿಮಿರ್ ಪುಟಿನ್ | PC : PTI
ಮಾಸ್ಕೋ : ಅಮೆರಿಕದೊಂದಿಗೆ (ಈಗ ನಿಷ್ಕ್ರಿಯಗೊಂಡಿರುವ) ಶಸ್ತ್ರಾಸ್ತ್ರ ಒಪ್ಪಂದದ ಅಡಿಯಲ್ಲಿ ಈ ಹಿಂದೆ ನಿಷೇಧಿಸಲಾದ ಕಿರು ಮತ್ತು ಮಧ್ಯಂತರ ಶ್ರೇಣಿಯ ಕ್ಷಿಪಣಿಗಳ ಉತ್ಪಾದನೆಯನ್ನು ರಶ್ಯ ಪ್ರಾರಂಭಿಸಬೇಕು ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿದ್ದಾರೆ.
ಶೀತಲ ಸಮರ ಯುಗದ ಮಧ್ಯಂತರ ಶ್ರೇಣಿಯ ಪರಮಾಣು ಶಸ್ತ್ರಾಸ್ತ್ರ ಒಪ್ಪಂದದಡಿ ನಿಷೇಧಿಸಲಾಗಿರುವ 500ರಿಂದ 5,500 ಕಿ.ಮೀ ವ್ಯಾಪ್ತಿಯ ಕ್ಷಿಪಣಿಗಳನ್ನು ಉಲ್ಲೇಖಿಸಿ ಪುಟಿನ್ ಈ ಹೇಳಿಕೆ ನೀಡಿದ್ದಾರೆ. ಒಪ್ಪಂದದ ನಿಯಮಗಳನ್ನು ರಶ್ಯ ಪಾಲಿಸುತ್ತಿಲ್ಲ ಎಂದು ಹೇಳಿ 2019ರಲ್ಲಿ ಅಮೆರಿಕ ಈ ಒಪ್ಪಂದದಿಂದ ಹಿಂದೆ ಸರಿದಿದೆ. ಅಮೆರಿಕವು ರಶ್ಯಕ್ಕೆ ದಾಳಿ ಮಾಡುವಷ್ಟು ದೂರದಲ್ಲಿ ಕ್ಷಿಪಣಿಗಳನ್ನು ನಿಯೋಜಿಸದಿದ್ದರೆ ಈ ಒಪ್ಪಂದಕ್ಕೆ ತಾನು ಬದ್ಧ ಎಂದು ರಶ್ಯ ಹೇಳುತ್ತಾ ಬಂದಿದೆ.
`ಈಗ ಅಮೆರಿಕವು ಡೆನ್ಮಾರ್ಕ್ನಲ್ಲಿ ತರಬೇತಿ ಸಮರಾಭ್ಯಾಸದಲ್ಲಿ ಇಂತಹ ಕ್ಷಿಪಣಿಗಳನ್ನು ಬಳಸಿದೆ. ಇದಕ್ಕೆ ನಾವು ಪ್ರತಿಕ್ರಿಯಿಸುವ ಅಗತ್ಯವಿದೆ ಮತ್ತು ಈ ನಿಟ್ಟಿನಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ. ಇಂತಹ ಕ್ಷಿಪಣಿಗಳ ಉತ್ಪಾದನೆಯನ್ನು ಆರಂಭಿಸುವ ಅಗತ್ಯ ಎದುರಾದಂತೆ ಕಾಣುತ್ತದೆ ಮತ್ತು ವಾಸ್ತವಿಕ ಪರಿಸ್ಥಿತಿಯನ್ನು ಗಮನಿಸಿ ಇವನ್ನು ಎಲ್ಲಿ ನಿಯೋಜಿಸಬೇಕೆಂದು ನಿರ್ಧರಿಸಬೇಕಿದೆ' ಎಂದು ಶುಕ್ರವಾರ ಉನ್ನತ ಭದ್ರತಾ ಅಧಿಕಾರಿಗಳ ಜತೆಗಿನ ಸಭೆಯಲ್ಲಿ ಪುಟಿನ್ ಪ್ರತಿಪಾದಿಸಿದ್ದಾರೆ.







