ಭಾರತ ಜಾಗತಿಕ ಅಭಿವೃದ್ಧಿಯ ಹೊಸ ಅಧ್ಯಾಯ ಬರೆಯಲಿದೆ : ಮೋದಿ
ನರೇಂದ್ರ ಮೋದಿ | PC : PTI
ಮಾಸ್ಕೋ: ಕಳೆದ 10 ವರ್ಷದಲ್ಲಿ ಭಾರತ ಸಾಧಿಸಿದ ಅಭಿವೃದ್ಧಿಯ ವೇಗಕ್ಕೆ ಇಡೀ ವಿಶ್ವವೇ ಬೆರಗಾಗಿದೆ. ಜಾಗತಿಕ ಅಭಿವೃದ್ಧಿಯ ಹೊಸ ಅಧ್ಯಾಯವನ್ನು ನಾವು ಬರೆಯಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಂಗಳವಾರ ಮಾಸ್ಕೋದಲ್ಲಿ ಭಾರತೀಯ ಸಮುದಾಯದವರ ಜತೆ ಸಂವಹನ ನಡೆಸಿದ ಮೋದಿ `ತಾನು ಮೂರನೇ ಅವಧಿಯಲ್ಲಿ ಮೂರು ಪಟ್ಟು ವೇಗವಾಗಿ ಮತ್ತು ಮೂರು ಪಟ್ಟು ಬಲಿಷ್ಟವಾಗಿ ಕೆಲಸ ಮಾಡುವ ಪ್ರತಿಜ್ಞೆ ಸ್ವೀಕರಿಸಿದ್ದೇನೆ' ಎಂದರು. ಭಾರತವು ತನ್ನ 140 ಕೋಟಿ ಪ್ರಜೆಗಳ ಶಕ್ತಿಯನ್ನು ನಂಬಿಕೊಂಡು ಪರಿವರ್ತನೆಯ ದಾರಿಯಲ್ಲಿ ಮುನ್ನಡೆದಿದೆ. ಅವರು ಈಗ ತಮ್ಮ ಸಂಕಲ್ಪ `ವಿಕಸಿತ ಭಾರತ'ವನ್ನು ವಾಸ್ತವಕ್ಕೆ ತಿರುಗಿಸುವ ಕನಸು ಕಾಣುತ್ತಿದ್ದಾರೆ. ಇಂದಿನ ಭಾರತವು 2014ರ ಹಿಂದಿನ ಪರಿಸ್ಥಿತಿಗಳಿಗಿಂತ ಭಿನ್ನವಾಗಿ ಆತ್ಮವಿಶ್ವಾಸದಿಂದ ತುಂಬಿದೆ ಮತ್ತು ಇದು ನಮ್ಮ ದೊಡ್ಡ ಬಂಡವಾಳವಾಗಿದೆ. ನಿಮ್ಮಂತಹ ಜನರ ಆಶೀರ್ವಾದವಿದ್ದರೆ ಇನ್ನಷ್ಟು ದೊಡ್ಡ ಗುರಿಗಳನ್ನು ಸಾಧಿಸಬಹುದು. ಇಂದಿನ ಭಾರತವು ತಾನು ಹಾಕಿಕೊಂಡ ಯಾವುದೇ ಗುರಿಯನ್ನು ಸಾಧಿಸಬಲ್ಲದು' ಎಂದು ಮೋದಿ ಹೇಳಿದ್ದಾರೆ.