ಎಪ್ಸ್ಟೀನ್ ಕಡತ ಬಲವಂತದ ಬಿಡುಗಡೆಗೆ ಅಮೆರಿಕ ಸೆನೆಟ್ ಅಸ್ತು

ಜೆಫ್ರಿ ಎಪ್ಸ್ಟೀನ್ PC: x.com/PopBase
ವಾಷಿಂಗ್ಟನ್: ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಗೆ ಸಂಬಂಧಿಸಿದ ಕಡತಗಳ ಬಲವಂತದ ಬಿಡುಗಡೆಗೆ ಅನುವು ಮಾಡಿಕೊಡುವ ಎಪ್ಸ್ಟೀನ್ ಕಡತಗಳ ಪಾರದರ್ಶಕ ಕಾಯ್ದೆಗೆ ಅಮೆರಿಕದ ಸೆನೆಟ್ ಒಪ್ಪಿಗೆ ನೀಡಿದೆ. ಅಮೆರಿಕದ ಹೌಸ್ ಆಫ್ ರೆಪ್ರಸೆಂಟಿಟಿವ್ಸ್ ಈ ಮಸೂದೆಯನ್ನು ಆಂಗೀಕರಿಸಿದ ಬೆನ್ನಲ್ಲೇ ಸೆನೆಟ್ ಒಪ್ಪಿಗೆಯೂ ಸಿಕ್ಕಿದ್ದು, ಕಡತ ಬಿಡುಗಡೆಯ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಮುನ್ನಡೆದಂತಾಗಿದೆ.
ಮಸೂದೆಯನ್ನು ಇದೀಗ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಂಕಿತಕ್ಕಾಗಿ ಕಳುಹಿಸಲಾಗುತ್ತದೆ. ಅಮೆರಿಕದ ಸೆನೆಟ್ ಈ ಮಸೂದೆಯನ್ನು ಅವಿರೋಧವಾಗಿ ಆಂಗೀಕರಿಸಿದ್ದರಿಂದ ಮತಕ್ಕೆ ಹಾಕುವ ಪ್ರಮೇಯ ಉದ್ಭವಿಸಲಿಲ್ಲ. ಯಾವುದೇ ಚರ್ಚೆಯಿಲ್ಲದೇ ಈ ಕಾಯ್ದೆಯನ್ನು ಕಾನೂನಾಗಿ ಪರಿವರ್ತಿಸುವುದಾಗಿ ಟ್ರಂಪ್ ಈಗಾಗಲೇ ಭರವಸೆ ನೀಡಿದ್ದಾರೆ.
ಇದಕ್ಕೂ ಮುನ್ನ ಅಮೆರಿಕ ಕಾಂಗ್ರೆಸ್ನ ಕೆಳಮನೆಯಲ್ಲಿ ಮಸೂದೆ 247-1 ಮತಗಳ ಅಂತರದಿಂದ ಒಪ್ಪಿಗೆ ಪಡೆದಿತ್ತು. ಕ್ಲೇ ಹಿಗ್ಗಿನ್ಸ್ ಮಾತ್ರ ಕಾಯ್ದೆ ವಿರುದ್ಧ ಮತ ಚಲಾಯಿಸಿದರು. ಈ ಕಡತ ಬಹಿರಂಗಪಡಿಸುವುದರಿಂದ ಅಮಾಯಕ ಜನರಿಗೆ ತೊಂದರೆಯಾಗುತ್ತದೆ ಎಂದು ಪ್ರತಿಪಾದಿಸಿ ಅವರು ಕಾಯ್ದೆಯ ವಿರುದ್ಧ ಮತ ಹಾಕಿದರು.
ಆರಂಭದಿಂದಲೂ ತಾತ್ವಿಕವಾಗಿ ಈ ಮಸೂದೆಯನ್ನು ವಿರೋಧಿಸುತ್ತಾ ಬಂದಿದ್ದಾಗಿ ಹಿಗ್ಗಿನ್ಸ್ ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ.
ಮಸೂದೆಯನ್ನು ಅವಿರೋಧವಾಗಿ ಆಂಗೀಕರಿಸುವಂತೆ ಸೆನೆಟ್ ನಲ್ಲಿ ಮನವಿ ಮಾಡಿದ ಡೆಮಾಕ್ರಟಿಕ್ ಪಕ್ಷದ ಅಲ್ಪಸಂಖ್ಯಾತಮುಖಂಡ ಚುಕ್ ಶೂಮೆರ್, "ಈ ಕಾಯ್ದೆಯು ಅಮೆರಿಕದ ಜನ ಆಗ್ರಹಿಸುತ್ತಿರುವ ಪಾರದರ್ಶಕತೆಯನ್ನು ತಂದುಕೊಡಲಿದೆ" ಎಂದರು. "ಅಮೆರಿಕದ ಜನತೆ ಕಾಯುತ್ತಿದ್ದಾರೆ; ಜೆಫ್ರಿ ಎಪ್ಸ್ಟೀನ್ ಸಂತ್ರಸ್ತರು ಸುಧೀರ್ಘ ಕಾಲದಿಂದ ಕಾಯುತ್ತಿದ್ದಾರೆ. ಸತ್ಯ ಹೊರಬರಲಿ" ಎಂದು ಅವರ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.







