ವೆನೆಝುವೆಲಾದಲ್ಲಿ ಭೀಕರ ಅವಳಿ ಭೂಕಂಪ : ಮೃತರ ಸಂಖ್ಯೆ 164ಕ್ಕೆ ಏರಿಕೆ ; 900ಕ್ಕೂ ಅಧಿಕ ಮಂದಿಗೆ ಗಾಯ

Photo Credit : PTI , AP
ಕಾರಾಕಾಸ್,ಜೂ.25: ವೆನೆಝುವೆಲಾದಲ್ಲಿ ಬುಧವಾರ ತಡರಾತ್ರಿ ಪ್ರಬಲವಾದ ಅವಳಿ ಭೂಕಂಪಗಳು ಸಂಭವಿಸಿದ್ದು, ಕನಿಷ್ಠ 164 ಮಂದಿ ಮೃತಪಟ್ಟಿದ್ದಾರೆ ಹಾಗೂ ಕನಿಷ್ಠ 971 ಮಂದಿ ಗಾಯಗೊಂಡಿದ್ದಾರೆ. ಅವಳಿ ಭೂಕಂಪಗಳ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.2 ಹಾಗೂ 7.5ರಷ್ಟಿತ್ತೆಂದು ವೆನೆಝುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಝ್ ಅವರು ತಿಳಿಸಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಏರುವ ಭೀತಿಯಿದೆಯೆಂದು ಅವರು ತಿಳಿಸಿದ್ದಾರೆ.
ಕಳೆದ ಒಂದು ಶತಮಾನಕ್ಕೂ ಅಧಿಕ ಅವಧಿಯಲ್ಲಿ ವೆನೆಝುವೆಲಾ ಕಂಡ ಅತ್ಯಂತ ಭೀಕರ ಭೂಕಂಪಗಳು ಇವಾಗಿವೆ. ರಾಜಧಾನಿ ಕಾರಾಕಾಸ್ನಿಂದ 1700 ಕಿ.ಮೀ.ದೂರದಲ್ಲಿರುವ ಪಕ್ಕದ ರಾಷ್ಟ್ರವಾದ ಬ್ರೆಝಿಲ್ನ ಅಮೆಝಾನ್ ಪ್ರದೇಶದ ವಿವಿಧೆಡೆ ಭೂಕಂಪನದ ಅನುಭವವಾಗಿದ್ದು, ಮುಂಜಾಗರೂಕತೆಯ ಕ್ರಮವಾಗಿ ಜನರನ್ನು ಕಟ್ಟಡಗಳಿಂದ ತೆರವುಗೊಳಿಸಲಾಗಿದೆ.
ಮೊದಲನೇ ಭೂಕಂಪದ ಕೇಂದ್ರಬಿಂದು 7.2 ರಿಕ್ಟರ್ ತೀವ್ರತೆಯೊಂದಿಗೆ ಕಾರಾಕಾಸ್ನಿಂದ 170 ಕಿ.ಮೀ. ದೂರದಲ್ಲಿರುವ ಕೇರಿಬಿಯನ್ಕರಾವಳಿಯ ಮೊರೊನ್ನಲ್ಲಿತ್ತು. ಎರಡನೇ ಭೂಕಂಪವು ಕೇವಲ ಒಂದು ನಿಮಿಷದ ಬಳಿಕ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ಅದರ ತೀವ್ರತೆ 7.5ರಷ್ಟಿತ್ತು . ಮೊರೊನ್ನಿಂದ ನೈಋತ್ಯದಲ್ಲಿ 10 ಕಿ.ಮೀ. ದೂರದಲ್ಲಿ ಎರಡನೇ ಭೂಕಂಪದ ಕೇಂದ್ರಬಿಂದುವಿತ್ತು. ಎಂದು ಅಮೆರಿಕದ ಭೂಸರ್ವೇಕ್ಷಣಾ ಇಲಾಖೆ ತಿಳಿಸಿದೆ.
ಅಮೆರಿಕದಿಂದ ನೆರವು ಸಾಮಾಗ್ರಿ, ರಕ್ಷಣಾ ತಂಡಗಳ ರವಾನೆ
ಅಮೆರಿಕವು ತಕ್ಷಣವೇ ವೆನೆಝುವೆಲಾದಲ್ಲಿ ಶೋಧ ಹಾಗೂ ರಕ್ಷಣಾ ತಂಡಗಳನ್ನು ನಿಯೋಜಿಸಿದ್ದು ವೈದ್ಯಕೀಯ ಸಂಪನ್ಮೂಲಗಳು ಹಾಗೂ ಮಾನವೀಯ ನೆರವನ್ನು ರವಾನಿಸಿದೆಯೆಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರುಬಿಯೊ ತಿಳಿಸಿದ್ದಾರೆ.
ಅವಳಿ ಭೂಕಂಪ ಸಂಭವಿಸಿದ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಝ್ ಅವರು ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಹಲವಾರು ರಾಜ್ಯಗಳಲ್ಲಿ ಭೂಕಂಪದಿಂದಾಗಿ ಭಾರೀ ಹಾನಿಯಾಗಿದೆಯೆಂದು ಅವರು ಹೇಳಿದ್ದಾರೆ. ಗಾಯಾಳುಗಳಿಗೆ ನೆರವಾಗಲು ಕೂಡಲೇ ಆಸ್ಪತ್ರೆಗಳಿ ಧಾವಿಸುವಂತೆ ಅವರು ಆರೋಗ್ಯಪಾಲನಾ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ.
ಭೂಕಂಪಗಳ ಬಳಿಕ ಪಶ್ಚಾತ್ ಕಂಪನಗಳು ಸಂಭವಿಸುವ ಸಾಧ್ಯತೆಯಿರುವುದರಿಂದ ಹೊರಗೆಯೇ ಉಳಿದುಕೊಳ್ಳುವಂತೆ ಜನರಿಗೆ ಗೃಹಸಚಿವ ಡಿಯೊಸ್ಡಾಡೊ ಕ್ಯಾಬೆಲ್ಲೊ ಮನವಿ ಮಾಡಿದ್ದಾರೆ. ಹಲವಾರು ಜನರು ತಾಸುಗಟ್ಟಲೆ ರಸ್ತೆಗಳಲ್ಲಿ ದಿನಗಳೆದರು. ಇನ್ನು ಕೆಲವರು ಪಾಕ್ ಮಾಡಿದ ಕಾರುಗಳಲ್ಲಿ, ಸಬ್ವೇ ನಿಲ್ದಾಣಗಳು ಮತ್ತಿತರ ಸಾರ್ವಜನಿಕ ಸ್ಥಳಗಳಲ್ಲಿ ಉಳಿದುಕೊಂಡರು.
ರಾಜಧಾನಿ ಕಾರಾಕಾಸ್ನ ಹಲವೆಡೆ ವಿದ್ಯುತ್ ಸಂಪರ್ಕ ಕಡಿದುಹೋಗಿವೆ. ದೇಶದ ಪ್ರಮುಖ ವಿಮಾನನಿಲ್ದಾಣ ಸೈಮನ್ ಬೊಲಿವರ್ಗೆ ಅಪಾರ ಹಾನಿಯಾಗಿರುವ ಕಾರಣ ಅದನ್ನು ಮುಚ್ಚುಗಡೆಗೊಳಿಸಲಾಗಿದೆ.
ರಕ್ಷಣಾ ಕಾರ್ಯಕರ್ತರು ವಿದ್ಯುತ್ಚಾಲಿತ ಉಪಕರಣಗಳನ್ನು ಬಳಸಿ, ಅವಶೇಷಗಳ ರಾಶಿಯ ನಡುವೆ ದಾರಿ ಮಾಡಿಕೊಂಡು, ಸಿಲುಕಿಕೊಂಡವರನ್ನು ರಕ್ಷಿಸುತ್ತಿರುವ ದೃಶ್ಯಗಳ ವೀಡಿಯೋವನ್ನು ಟಿವಿವಾಹಿನಿಗಳು ಗುರುವಾರ ಪ್ರಸಾರ ಮಾಡಿವೆ.
ರಾಜಧಾನಿ ಕಾರಾಕಾಸ್ನಲ್ಲಿ ಜನರು ಕಂಪಿಸುತ್ತಿದ್ದ ಕಟ್ಟಡಗಳಿಂದ ಓಡಿಹೋಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ರಾಜಧಾನಿಯ ವಸತಿ ಪ್ರದೇಶಗಳಲ್ಲಿ ನೆಲಸಮವಾದ ಕಟ್ಟಡಗಳಿಂದ ದಟ್ಟವಾದ ಧೂಳು ಹೊರಗೇಳುತ್ತಿರುವ ದೃಶ್ಯಗಳು ಕಂಡುಬಂದಿವೆ.
ಜಪಾನ್ನಲ್ಲೂ ನಡುಗಿದ ಭೂಮಿ
ಜಪಾನ್ನ ಹೊನ್ಶು ಮುಖ್ಯದ್ವೀಪದ ಪೂರ್ವ ಕರಾವಳಿಯ ಸಮೀಪ ಗುರುವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ಬೆಳಗ್ಗೆ 7:30ರ ವೇಳೆಗೆ ಸಂಭವಿಸಿದ ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.2ರಷ್ಟಿತ್ತು. ಉತ್ತರ ಜಪಾನ್ನ ಲ್ವಾಟೆ ಕರಾವಳಿ ಸಮೀಪದ ಸಮುದ್ರಪ್ರದೇಶದಲ್ಲಿ ಭೂಕಂಪದ ಕೇಂದ್ರಬಿಂದುವಿತ್ತು.
ರಾಜಧಾನಿ ಟೋಕಿಯೊ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ. ಆದಾಗ್ಯೂ ಭೂಕಂಪನದ ಬಳಿಕ ಸುನಾಮಿಯ ಅಪಾಯವುಂಟಾಗಿಲ್ಲ. ಈವರೆಗೆ ಯಾವುದೇ ಸಾವುನೋವು ಅಥವಾ ಪ್ರಮುಖ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲವೆಂದು ಮೂಲಗಳು ತಿಳಿಸಿವೆ. ಸುರಕ್ಷತಾ ತಪಾಸಣೆಗಾಗಿ ರೈಲು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ವೆನೆಝುವೆಲಾದಲ್ಲಿ 140ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡ ಭೀಕರ ಅವಳಿ ಭೂಕಂಪಗಳು ಸಂಭವಿಸಿದ ಕೆಲವೇ ತಾಸುಗಳ ಬಳಿಕ ಜಪಾನ್ನ ಪ್ರಬಲ ಭೂಕಂಪನವಾಗಿದೆ.






