ಇಸ್ರೇಲ್ ಜತೆಗಿನ ಶೈಕ್ಷಣಿಕ ಒಪ್ಪಂದ ರದ್ದತಿಗೆ ಆಗ್ರಹ, ಕನಿಷ್ಠ 169 ವಿದ್ಯಾರ್ಥಿಗಳು ವಶಕ್ಕೆ
ಯುರೋಪ್ನಾದ್ಯಂತ ವ್ಯಾಪಿಸಿದ ವಿದ್ಯಾರ್ಥಿಗಳ ಪ್ರತಿಭಟನೆ

Photo: PTI
ಬರ್ಲಿನ್: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಯುದ್ಧವನ್ನು ವಿರೋಧಿಸಿ ಮತ್ತು ಫೆಲೆಸ್ತೀನೀಯರನ್ನು ಬೆಂಬಲಿಸಿ ಅಮೆರಿಕದ ವಿವಿಗಳಲ್ಲಿ ಆರಂಭಗೊಂಡಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಈಗ ಯುರೋಪ್ನಾದ್ಯಂತ ವಿವಿಗಳಿಗೆ ವ್ಯಾಪಿಸಿದ್ದು ಇಸ್ರೇಲ್ ಜತೆಗಿನ ಶೈಕ್ಷಣಿಕ ಸಂಬಂಧ ರದ್ದುಗೊಳಿಸಬೇಕೆಂಬ ಆಗ್ರಹಕ್ಕೆ ಹಲವರು ಧ್ವನಿಗೂಡಿಸಿದ್ದಾರೆ.
ಯುರೋಪ್ನ ಕನಿಷ್ಠ 6 ದೇಶಗಳ ವಿವಿಗಳ ಕ್ಯಾಂಪಸ್ನಲ್ಲಿ ತಾತ್ಕಾಲಿಕ ಟೆಂಟ್ಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಪೈನ್, ಬ್ರಿಟನ್, ಜರ್ಮನಿ, ನೆದರ್ಯ್ಲಾಂಡ್, ಆಸ್ಟ್ರಿಯಾ, ಫಿನ್ಲ್ಯಾಂಡ್, ಇಟಲಿ, ಡೆನ್ಮಾರ್ಕ್, ಫ್ರಾನ್ಸ್ ದೇಶಗಳ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿದೆ.
ಜರ್ಮನಿಯ ಬರ್ಲಿನ್ ನಗರದ ಫ್ರೀ ಯುನಿವರ್ಸಿಟಿಯ ಕ್ಯಾಂಪಸ್ನ ಒಂದು ಭಾಗದಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಸ್ಥಾಪಿಸಿದ್ದ ಟೆಂಟ್ಗಳನ್ನು ಪೊಲೀಸರು ತೆರವುಗೊಳಿಸಿ ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ. ನೆದರ್ ಲ್ಯಾಂಡ್ ರಾಜಧಾನಿ ಆಮ್ ಸ್ಟರ್ ಡ್ಯಾಂ ನಲ್ಲಿ ವಿವಿಧ ವಿವಿಗಳ ಕ್ಯಾಂಪಸ್ಗಳಿಂದ 169 ಜನರನ್ನು ವಶಕ್ಕೆ ಪಡೆಯಲಾಗಿದ್ದು ಸಾರ್ವಜನಿಕ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ ಇಬ್ಬರನ್ನು ಕಸ್ಟಡಿಗೆ ಪಡೆಯಲಾಗಿದೆ. ಬರ್ಲಿನ್ನಲ್ಲಿ ಸುಮಾರು 20 ಶಿಬಿರಗಳನ್ನು ಸ್ಥಾಪಿಸಿರುವ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿಕೊಂಡು ಫೆಲೆಸ್ತೀನ್ ಪರ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿದ್ದಾರೆ. ರ್ಯಾಲಿ ನಡೆಸುತ್ತಿದ್ದ ಪ್ರತಿಭಟನಾನಿರತರನ್ನು ಚದುರಿಸಲು ಪೊಲೀಸರು ಖಾರದ ಪುಡಿ(ಪೆಪ್ಪರ್ ಸ್ಪ್ರೇ) ಬಳಸಿದಾಗ ಪೊಲೀಸರೊಂದಿಗೆ ಘರ್ಷಣೆಗೆ ಮುಂದಾದರು. ಪ್ರತಿಭಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಜತೆ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಬರ್ಲಿನ್ ವಿವಿ ಅಧ್ಯಕ್ಷ ಗ್ವೆಂಟರ್ ಝಿಯೆಗ್ಲರ್ ಹೇಳಿದ್ದಾರೆ.
ಪೂರ್ವ ಜರ್ಮನಿಯ ಲೀಪ್ಜಿಗ್ ವಿವಿಯಲ್ಲಿ ಸುಮಾರು 50ರಷ್ಟು ಪ್ರತಿಭಟನಾಕಾರರು ವಿವಿಯ ಸಭಾಂಗಣಕ್ಕೆ ನುಗ್ಗಿ ಘೋಷಣೆ ಕೂಗಿದರು. ನೆದರ್ಯ್ಲಾಂಡ್ನ ಆಮ್ ಸ್ಟರ್ ಡ್ಯಾಂ ವಿವಿಯಲ್ಲಿ ಫೆಲೆಸ್ತೀನ್ ಪರ ವಿದ್ಯಾರ್ಥಿಗಳು ಸ್ಥಾಪಿಸಿದ್ದ ಟೆಂಟ್ಗಳನ್ನು ತೆರವುಗೊಳಿಸಲು ಅಡ್ಡಿಪಡಿಸಿದ ವಿದ್ಯಾರ್ಥಿಗಳನ್ನು ಲಾಠಿಚಾರ್ಜ್ ನಡೆಸಿ ಪೊಲೀಸರು ಚದುರಿಸಿದ್ದಾರೆ. ವಿದ್ಯಾರ್ಥಿಗಳು ಮರದ ಹಲಗೆಗಳು, ಸೈಕಲ್ಗಳನ್ನು ಅಡ್ಡ ಇರಿಸಿ ನಿರ್ಮಿಸಿದ್ದ ಬ್ಯಾರಿಕೇಡ್ಗಳನ್ನು ಯಂತ್ರಗಳನ್ನು ಬಳಸಿ ತೆರವುಗೊಳಿಸಲಾಗಿದೆ. ಆಸ್ಟ್ರಿಯಾದಲ್ಲಿ ವಿಯೆನ್ನಾ ವಿವಿಯ ಕ್ಯಾಂಪಸ್ನಲ್ಲಿ ಪ್ರತಿಭಟನಾಕಾರರು ಸುಮಾರು 20 ಟೆಂಟ್ಗಳನ್ನು ಸ್ಥಾಪಿಸಿ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಆದರೆ ಯೆಹೂದಿ ವಿರೋಧಿ ಗುಂಪುಗಳು ಪ್ರತಿಭಟನೆಯ ಸಂಘಟಕರಲ್ಲಿ ಸೇರಿರುವುದರಿಂದ ಈ ಪ್ರತಿಭಟನೆಯನ್ನು ಬೆಂಬಲಿಸುವುದಿಲ್ಲ ಎಂದು ವಿಯೆನ್ನಾ ವಿವಿ ಆಡಳಿತ ಮಂಡಳಿ ಹಾಗೂ ಆಸ್ಟ್ರಿಯಾ ವಿದ್ಯಾರ್ಥಿಗಳ ಯೂನಿಯನ್ ಘೋಷಿಸಿದೆ.
ಬ್ರಿಟನ್ನ ಕ್ಯಾಂಬ್ರಿಡ್ಜ್ ಮತ್ತು ಆಕ್ಸ್ ಫರ್ಡ್ ಸೇರಿದಂತೆ ಪ್ರಮುಖ ವಿವಿಗಳಲ್ಲಿ ಫೆಲೆಸ್ತೀನ್ ಪರ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರಗೊಂಡಿದ್ದು ಇಸ್ರೇಲ್ ಜತೆಗಿನ ಶೈಕ್ಷಣಿಕ ಸಂಬಂಧವನ್ನು ಕಡಿದುಕೊಳ್ಳುವಂತೆ ಹಾಗೂ ಇಸ್ರೇಲ್ಗೆ ಸಂಬಂಧಿಸಿದ ಸಂಸ್ಥೆಗಳೊಂದಿಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಳ್ಳುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಫಿನ್ಲ್ಯಾಂಡ್ನ ಹೆಲ್ಸಿಂಕಿ ವಿವಿ, ಡೆನ್ಮಾರ್ಕ್ನ ಕೋಪನ್ಹೇಗನ್ ವಿವಿ, ಇಟಲಿಯ ಬೊಲೊಗ್ನಾ ವಿವಿ, ಸ್ಪೈನ್ನ ವಲೆನ್ಸಿಯಾ ವಿವಿ ಮತ್ತು ಬಾರ್ಸೆಲೋನ ವಿವಿ, ಪ್ಯಾರಿಸ್ನ `ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸ್ಟಡೀಸ್'ನಲ್ಲಿಯೂ ವಿದ್ಯಾರ್ಥಿಗಳು ಫೆಲೆಸ್ತೀನ್ ಪರ ಪ್ರತಿಭಟನೆ ನಡೆಸಿದ್ದಾರೆ.