ಫಿಲಿಪ್ಪೀನ್ಸ್ | ಜಪ್ತಿ ಮಾಡಿದ ಪಟಾಕಿ ಸಿಡಿದು 19 ಅಧಿಕಾರಿಗಳ ಸಹಿತ 27 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
ಮನಿಲಾ: ದಕ್ಷಿಣ ಫಿಲಿಪ್ಪೀನ್ಸ್ ನಲ್ಲಿ ಜಪ್ತಿ ಮಾಡಿದ್ದ ಅಕ್ರಮ ಪಟಾಕಿ ಸಿಡಿದು 19 ಪೊಲೀಸರು ಮತ್ತು ಸರಕಾರಿ ಅಧಿಕಾರಿಗಳ ಸಹಿತ ಕನಿಷ್ಠ 27 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಹಲವು ಮನೆಗಳು, ರೆಸ್ಟಾರೆಂಟ್ ಗಹಳು ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಾನಿಯಾಗಿದೆ. ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ದಕ್ಷಿಣ ಫಿಲಿಪ್ಪೀನ್ಸ್ ನ ಜಾಂಬೊಂಗಾ ಬಂದರು ನಗರದಲ್ಲಿ ಘಟನೆ ನಡೆದಿದೆ. ಅಕ್ರಮ ಪಟಾಕಿಗಳನ್ನು ಜಪ್ತಿ ಮಾಡಿ ಬಂದರಿನ ಬಳಿ ಶೇಖರಿಸಡಲಾಗಿತ್ತು. ನೌಕಾಪಡೆಯ ಸಮರಾಭ್ಯಾಸಕ್ಕಾಗಿ ಸ್ಫೋಟಕ ತಜ್ಞರು ಪಟಾಕಿಗಳ ರಾಶಿಯನ್ನು ಅಲ್ಲಿಂದ ತೆರವುಗೊಳಿಸುವ ಸಂದರ್ಭದಲ್ಲಿ ಸ್ಫೋಟ ಸಂಭವಿಸಿದೆ.
ಸ್ಫೋಟದ ತೀವ್ರತೆಗೆ ಮೂರು ಕಿ.ಮೀ ದೂರದಲ್ಲಿದ್ದ ಮನೆಯ ಕಿಟಕಿಗಳೂ ಛಿದ್ರಗೊಂಡಿದ್ದು ಸ್ಪೋಟ ನಡೆದ ಸ್ಥಳದಿಂದ ಸುಮಾರು 2 ಕಿ.ಮೀ ದೂರದಲ್ಲಿನ ಜಾಂಬೊಂಗಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಟರ್ಮಿನಲ್ನದ ಕಿಟಕಿ, ಗಾಜುಗಳೂ ಪುಡಿಯಾಗಿದೆ. ವಿಮಾನ ನಿಲ್ದಾಣದಲ್ಲಿದ್ದ ಯಾರಿಗೂ ಗಾಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಜಪ್ತಿ ಮಾಡಿದ್ದ ಪಟಾಕಿಯನ್ನು ಜಾಂಬೊಂಗಾ ನಗರದ ಉಗ್ರಾಣದಲ್ಲಿ ಸಂಗ್ರಹಿಸಿಡಲಾಗಿತ್ತು. ಆದರೆ ಅಲ್ಲಿ ಜೂನ್ 29ರಂದು ಸ್ಫೋಟ ಸಂಭವಿಸಿ 5 ಮಂದಿ ಸಾವನ್ನಪ್ಪಿದ ಬಳಿಕ ಅವನ್ನು ಸ್ಥಳಾಂತರಿಸಲಾಗಿತ್ತು ಎಂದು ವರದಿಯಾಗಿದೆ.