ಟೆಕ್ಸಾಸ್ನಲ್ಲಿ ಶೂಟೌಟ್ | ಇಬ್ಬರ ಸಾವು; 6 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ
ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ನಲ್ಲಿ ಶನಿವಾರ ನಡೆದ ಸಂಗೀತ ಕಾರ್ಯಕ್ರಮವೊಂದರ ಸಂದರ್ಭ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಇಬ್ಬರು ಮಕ್ಕಳ ಸಹಿತ ಕನಿಷ್ಠ 6 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ರೌಂಡ್ರಾಕ್ ನಗರದ ಓಲ್ಡ್ ಸೆಟ್ಲರ್ಸ್ ಪಾರ್ಕ್ನಲ್ಲಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ, ಹೊಡೆದಾಟ ನಡೆದಿದೆ. ಆಗ ಓರ್ವ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳ ಸಹಿತ 6 ಮಂದಿ ಗಂಭೀರ ಗಾಯಗೊಂಡಿದ್ದಾರೆ . ಪರಾರಿಯಾಗಿರುವ ಶಂಕಿತ ಆರೋಪಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಮುಖ್ಯಸ್ಥ ಅಲೆನ್ ಬ್ಯಾಂಕ್ಸ್ ಹೇಳಿದ್ದಾರೆ.
ಮಿಚಿಗನ್ನಲ್ಲಿ ಗುಂಡಿನ ದಾಳಿ: ಶನಿವಾರ ಮಿಚಿಗನ್ನ ಡೆಟ್ರಾಯಿಟ್ ನಗರದಲ್ಲಿ ನಡೆದ ಮತ್ತೊಂದು ಗುಂಡಿನ ದಾಳಿ ಪ್ರಕರಣದಲ್ಲಿ ಇಬ್ಬರು ಮಕ್ಕಳ ಸಹಿತ 9 ಮಂದಿ ಗಾಯಗೊಂಡಿದ್ದಾರೆ.
ರೋಚೆಸ್ಟರ್ ಹಿಲ್ಸ್ನಲ್ಲಿ ಕುಟುಂಬವೊಂದರ ಸದಸ್ಯರು ವಾರಾಂತ್ಯದ ಪ್ರವಾಸದಲ್ಲಿದ್ದಾಗ ಅಲ್ಲಿಗೆ ಬಂದ ಓರ್ವ ವ್ಯಕ್ತಿ ಮನಬಂದಂತೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ. ಗಾಯಗೊಂಡ 9 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಓರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ. ಬಳಿಕ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಓಕ್ಲಾಂಡ್ ನಗರಾಡಳಿತದ ಹೇಳಿಕೆ ತಿಳಿಸಿದೆ.