ಅಫ್ಘಾನಿಸ್ತಾನದಲ್ಲಿ ಗುಂಡಿನ ದಾಳಿ: 6 ಮಂದಿ ಸಾವು; 8 ಮಂದಿಗೆ ಗಾಯ
ಕಾಬೂಲ್: ಅಫ್ಘಾನಿಸ್ತಾನದ ಬಾರ್ಮಿಯಾನ್ ನಗರದಲ್ಲಿ ಗುರುತಿಸಲಾಗದ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಸ್ಪೇನ್ ಪ್ರವಾಸಿಗರ ಸಹಿತ 6 ಮಂದಿ ಸಾವನ್ನಪ್ಪಿದ್ದು ಇತರ 8 ಮಂದಿ ಗಾಯಗೊಂಡಿರುವುದಾಗಿ ಅಫ್ಘಾನ್ ಸರಕಾರ ಶನಿವಾರ ಮಾಹಿತಿ ನೀಡಿದೆ.
ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದ ಸ್ಪೇನ್ನ ಪ್ರವಾಸಿಗರ ತಂಡವೊಂದು ಮಾರ್ಕೆಟ್ನಲ್ಲಿ ಅಡ್ಡಾಡುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಮೂವರು ಸ್ಪೇನ್ ಪ್ರಜೆಗಳು, ಮೂವರು ಅಫ್ಘಾನ್ ಪ್ರಜೆಗಳು ಸಾವನ್ನಪ್ಪಿದ್ದು ಗಾಯಗೊಂಡ 8 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಒಬ್ಬನ ಸ್ಥಿತಿ ಗಂಭೀರವಾಗಿದೆ ಎಂದು ಆಂತರಿಕ ಸಚಿವಾಲಯದ ವಕ್ತಾರ ಅಬ್ದುಲ್ ಮತೀನ್ರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.
7 ಮಂದಿ ಶಂಕಿತರನ್ನು ಬಂಧಿಸಲಾಗಿದ್ದು ಘಟನೆಯಲ್ಲಿ ಐಸಿಸ್ ಪಾತ್ರದ ಬಗ್ಗೆ ಶಂಕೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story