‘ಅಮೆರಿಕನ್ನರಿಗೆ ಬೇಸರವಾದರೆ ಇಸ್ರೇಲ್ ಗೆ ಹೋಗಿ ಪ್ರಧಾನಿಯಾಗುತ್ತೇನೆ’: ಟ್ರಂಪ್
ಇಸ್ರೇಲ್ ನಲ್ಲಿ ಶೇ. 99ರಷ್ಟು ಜನಪ್ರಿಯತೆ ಇದೆ ಎಂದ ಅಮೆರಿಕ ಅಧ್ಯಕ್ಷ

ಡೊನಾಲ್ಡ್ ಟ್ರಂಪ್ | Photo : PTI
ವಾಷಿಂಗ್ಟನ್: ಅಮೆರಿಕದ ಜನರಿಗೆ ತಮ್ಮ ಬಗ್ಗೆ ಬೇಸರ ಬಂದರೆ ಇಸ್ರೇಲ್ ಗೆ ತೆರಳಿ ಅಲ್ಲಿನ ಪ್ರಧಾನಿಯಾಗುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮಾಷೆಯಾಗಿ ಹೇಳಿದ್ದಾರೆ. ಇಸ್ರೇಲ್ ನಲ್ಲಿ ತಮ್ಮ ಜನಪ್ರಿಯತೆಯ ರೇಟಿಂಗ್ ಶೇ. 99ರಷ್ಟಿದೆ ಎಂದೂ ಅವರು ಹೇಳಿಕೊಂಡಿದ್ದಾರೆ.
ಅಮೆರಿಕದ ಮಧ್ಯಂತರ ಚುನಾವಣೆಗಳ ಮತದಾನದ ದಿನವಾದ ಮಂಗಳವಾರ 'ಫಾಕ್ಸ್ ನ್ಯೂಸ್'ನ 'ಫಾಕ್ಸ್ ಅಂಡ್ ಫ್ರೆಂಡ್ಸ್' ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್, ಈ ಹೇಳಿಕೆ ನೀಡಿದ್ದಾರೆ.
"ಇಸ್ರೇಲ್ ನಲ್ಲಿ ನನ್ನ ಜನಪ್ರಿಯತೆಯ ರೇಟಿಂಗ್ ಶೇ. 99ರಷ್ಟಿದೆ. ಅಮೆರಿಕದ ಜನರಿಗೆ ನನ್ನ ಬಗ್ಗೆ ಬೇಸರ ಬಂದರೆ, ನಾನು ಇಸ್ರೇಲ್ ಗೆ ಹೋಗಿ ಪ್ರಧಾನಿಯಾಗುತ್ತೇನೆ" ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಶನದಲ್ಲಿ, ಇಸ್ರೇಲ್ ಗೆ ಅಮೆರಿಕ ನೀಡುತ್ತಿರುವ ವಾರ್ಷಿಕ 4 ಬಿಲಿಯನ್ ಡಾಲರ್ ಹಣಕಾಸಿನ ನೆರವನ್ನು ಈ ವರ್ಷದ ಅಂತ್ಯದ ಬಳಿಕ ಸ್ಥಗಿತಗೊಳಿಸುವ ಕುರಿತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಒಪ್ಪಂದ ಮಾಡಿಕೊಂಡಿರುವುದಾಗಿ ಟ್ರಂಪ್ ಬಹಿರಂಗಪಡಿಸಿದ್ದಾರೆ.
ಇಸ್ರೇಲ್ ಗೆ ಇನ್ನು ಮುಂದೆ ಈ ನೆರವಿನ ಅಗತ್ಯವಿಲ್ಲ ಎಂಬುದು ತಮ್ಮ ಅಭಿಪ್ರಾಯ ಎಂದು ಅವರು ಹೇಳಿದ್ದಾರೆ. ಇಸ್ರೇಲ್ ಗೆ ನೀಡುವ ಹಣಕಾಸಿನ ನೆರವನ್ನು ಕೆಲವು ಡೆಮಾಕ್ರಟ್ ಗಳು ಮತ್ತು ಎಡಪಂಥೀಯ ರಾಜಕಾರಣಿಗಳು ರಿಪಬ್ಲಿಕನ್ನರನ್ನು ಟೀಕಿಸಲು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದೂ ತಿಳಿಸಿದ್ದಾರೆ.
"ಇಸ್ರೇಲ್ಗೆ ಹಣ ನೀಡುವ ವಿಚಾರದಲ್ಲಿ ಬಿಬಿ (ಬೆಂಜಮಿನ್ ನೆತನ್ಯಾಹು) ಮತ್ತು ನಾನು ಒಪ್ಪಂದ ಮಾಡಿಕೊಂಡಿದ್ದೇವೆ. ನಾವು ಇಸ್ರೇಲ್ ಗೆ ವರ್ಷಕ್ಕೆ 4 ಬಿಲಿಯನ್ ಡಾಲರ್ ನೀಡುತ್ತಿದ್ದೆವು. ಆದರೆ, ಈ ನೆರವನ್ನು ಸ್ಥಗಿತಗೊಳಿಸಲು ಹಲವು ತಿಂಗಳುಗಳ ಹಿಂದೆಯೇ ಒಪ್ಪಂದ ಮಾಡಿಕೊಂಡಿದ್ದೇವೆ" ಎಂದು ಟ್ರಂಪ್ ಹೇಳಿದ್ದಾರೆ.
"ಈ ವರ್ಷದ ಅಂತ್ಯದ ವೇಳೆಗೆ ಇಸ್ರೇಲ್ ಗೆ ಹಣ ನೀಡುವುದನ್ನು ನಿಲ್ಲಿಸಲು ನಾವು ಈಗಾಗಲೇ ಒಪ್ಪಿಕೊಂಡಿದ್ದೇವೆ. ಇಸ್ರೇಲ್ ಗೆ ಅಗತ್ಯವಿದ್ದರೆ ನಾವು ಸಹಾಯ ಮಾಡುತ್ತೇವೆ" ಎಂದೂ ಅವರು ಹೇಳಿದ್ದಾರೆ.






