ಇರಾನ್ ವಶಪಡಿಸಿಕೊಂಡಿದ್ದ ತೈಲ ಟ್ಯಾಂಕರ್ನಲ್ಲಿದ್ದ 10 ಭಾರತೀಯ ನಾವಿಕರ ಬಿಡುಗಡೆ

Photo Credit : X
ಹೊಸದಿಲ್ಲಿ: ಇರಾನ್ 2025ರ ಜುಲೈನಲ್ಲಿ ವಶಪಡಿಸಿಕೊಂಡಿದ್ದ ತೈಲ ಟ್ಯಾಂಕರ್ನಲ್ಲಿದ್ದ 10 ಭಾರತೀಯ ನಾವಿಕರನ್ನು ನಿರಂತರ ರಾಜತಾಂತ್ರಿಕ ಪ್ರಯತ್ನಗಳ ಬಳಿಕ ಬಿಡುಗಡೆ ಮಾಡಲಾಗಿದೆ ಎಂದು ಶಿಪ್ಪಿಂಗ್ ಮಹಾನಿರ್ದೇಶನಾಲಯ ತಿಳಿಸಿದೆ.
ಎಂವಿ ಹಾರ್ಬರ್ ಫಿನಿಕ್ಸ್ ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ನಾವಿಕರನ್ನು 2025ರ ಜುಲೈನಲ್ಲಿ ಜಾಸ್ಕ್ ಬಂದರಿನ ಸಮೀಪ ಇರಾನ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
“ಶಿಪ್ಪಿಂಗ್ ಮಹಾನಿರ್ದೇಶನಾಲಯ, ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಸಚಿವಾಲಯ, ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಟೆಹರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ, ಆರ್ಪಿಎಸ್ಎಲ್ ಕಂಪನಿ, ಹಡಗು ನಿರ್ವಹಣಾ ಸಂಸ್ಥೆ ಹಾಗೂ ಇತರ ಸಂಬಂಧಿತ ಸಂಸ್ಥೆಗಳ ನಿರಂತರ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ನಾವಿಕರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಲಾಗಿದೆ” ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ನಾವಿಕರನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಹೇಳಿದೆ.
ನಾವಿಕರ ಬಂಧನಕ್ಕೆ ಅಥವಾ ತೈಲ ಉತ್ಪನ್ನ ಸಾಗಣೆ ಹಡಗನ್ನು ವಶಪಡಿಸಿಕೊಳ್ಳಲು ಕಾರಣವೇನು ಎಂಬುದನ್ನು ಶಿಪ್ಪಿಂಗ್ ಮಹಾನಿರ್ದೇಶನಾಲಯ ಬಹಿರಂಗಪಡಿಸಿಲ್ಲ.
ಯುಎಇ ಮೂಲದ ಹಾರ್ಬರ್ ಫಿನಿಕ್ಸ್ ಶಿಪ್ಪಿಂಗ್ ಕಂಪನಿಗೆ ಸೇರಿದ 32 ವರ್ಷ ಹಳೆಯ ಈ ತೈಲ ಟ್ಯಾಂಕರ್, ಪಲಾ ದೇಶಕ್ಕಾಗಿ ಕಾರ್ಯನಿರ್ವಹಿಸುತ್ತಿತ್ತು. ಪರ್ಶಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯ ನಡುವಿನ ಮಾರ್ಗದಲ್ಲಿ ಸಂಚರಿಸುತ್ತಿದ್ದ ಈ ಹಡಗನ್ನು ಡೀಸೆಲ್ ಕಳ್ಳಸಾಗಣೆ ಆರೋಪದ ಮೇರೆಗೆ ಜಾಸ್ಕ್ ಬಂದರು ಸಮೀಪ ಇರಾನ್ ಪಡೆಗಳು ವಶಕ್ಕೆ ಪಡೆದಿದ್ದವು.






