ಸ್ಪೇನ್ ನಲ್ಲಿ ಎರಡು ಹೈಸ್ಪೀಡ್ ರೈಲುಗಳು ಢಿಕ್ಕಿ: ಕನಿಷ್ಠ 10 ಮಂದಿ ಮೃತ್ಯು, ಹಲವರಿಗೆ ಗಾಯ
ಹಳಿ ತಪ್ಪಿದ ಎರಡು ಬೋಗಿಗಳು

Photo: AP
ಟೊಲೆಡೊ: ಸ್ಪೇನ್ ನ ಮಧ್ಯ ಪ್ರಾಂತ್ಯದ ಟೊಲೆಡೊದಲ್ಲಿ ಬುಧವಾರ ಬೆಳಿಗ್ಗೆ ಎರಡು ಹೈಸ್ಪೀಡ್ ರೈಲುಗಳು ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಿಂದ ಮ್ಯಾಡ್ರಿಡ್ ನಿಂದ ಸಿಯುಡಾಡ್ ರಿಯಲ್ ಮತ್ತು ಆಂಡಲೂಸಿಯಾ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರೈಲು ಸೇವೆಗಳು ಸ್ಥಗಿತಗೊಂಡಿವೆ.
ಸ್ಪೇನ್ ನ ರೈಲು ಮೂಲಸೌಕರ್ಯ ನಿರ್ವಾಹಕ ADIF ಅಪಘಾತವನ್ನು ದೃಢಪಡಿಸಿದ್ದು, ಅಪಘಾತಕ್ಕೀಡಾದ ಮಾರ್ಗಗಳಲ್ಲಿ ರೈಲು ಸಂಚಾರವನ್ನು ಸ್ಥಗಿತಗೊಳಿಸಿರುವುದಾಗಿ ತಿಳಿಸಿದೆ.
ಸ್ಪೇನ್ ನ ಸಾರ್ವಜನಿಕ ಪ್ರಸಾರ ಸಂಸ್ಥೆ TVE ವರದಿ ಪ್ರಕಾರ, ಒಂದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಎರಡು ಹೈಸ್ಪೀಡ್ ರೈಲುಗಳು ಢಿಕ್ಕಿಯಾಗಿವೆ. ಒಂದು ರೈಲು ಮತ್ತೊಂದು ರೈಲಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದಿದ್ದು, ಎರಡು ಬೋಗಿಗಳು ಹಳಿ ತಪ್ಪಿವೆ ಎಂದು ವರದಿಯಾಗಿದೆ.
ಅಪಘಾತದ ಬಳಿಕ ಸುಟ್ಟುಹೋದ ಬೋಗಿಗಳ ದೃಶ್ಯಗಳು ವೀಡಿಯೊಗಳಲ್ಲಿ ಕಾಣಿಸಿಕೊಂಡಿವೆ.




