ಆಸ್ಟ್ರಿಯಾದ ಶಾಲೆಯಲ್ಲಿ ಗುಂಡಿನ ದಾಳಿ: ವಿದ್ಯಾರ್ಥಿಗಳು ಸೇರಿದಂತೆ 10 ಮಂದಿ ಮೃತ್ಯು
ಕೃತ್ಯದ ಬಳಿಕ ಆತ್ಮಹತ್ಯೆ ಮಾಡಿಕೊಂಡ ಶೂಟರ್

Photo | Kleine Zeitung (AP)
ವಿಯೆನ್ನಾ: ಆಸ್ಟ್ರಿಯಾದ ಗ್ರಾಝ್ನ ಶಾಲೆಯೊಂದರಲ್ಲಿ ಜನರ ಮೇಲೆ ಗುಂಡಿನ ದಾಳಿ ನಡೆಸಿ 10 ಮಂದಿಯನ್ನು ಹತ್ಯೆಗೈದಿರುವ ಬಂದೂಕುಧಾರಿ ಕೊನೆಗೆ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಬ್ರಾಝ್ ಮೇಯರ್ ಎಲ್ಕೆ ಕಾಹ್ರ್ ತಿಳಿಸಿದ್ದಾರೆ. ಈ ಘಟನೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಾಲಾ ಸಿಬ್ಬಂದಿಗಳು ಮೃತಪಟ್ಟಿದ್ದಾರೆ. ಈ ಘಟನೆ ಭೀಕರ ದುರಂತವಾಗಿದೆ ಎಂದು ಅವರು ಆಘಾತ ವ್ಯಕ್ತಪಡಿಸಿದ್ದಾರೆ.
ಈ ಗುಂಡಿನ ದಾಳಿಯು ಬ್ರಾಝ್ನ ಬೋರ್ಗ್ ಡ್ರೈಯೆರ್ಸ್ ಶೂಟ್ಝೆಂಗಾಸ್ಸೆ ಪ್ರೌಢ ಶಾಲೆಯಲ್ಲಿ ನಡೆದಿದೆ. ದಾಳಿಕೋರ ವಿದ್ಯಾರ್ಥಿಯಾಗಿದ್ದು, ಕೃತ್ಯದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾಳಿಕೋರನ ಮೃತದೇಹ ಶಾಲೆಯ ಶೌಚಾಲಯದಲ್ಲಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ಆದರೆ, ಈವರೆಗೆ ದಾಳಿಕೋರನ ಹೆಸರು ಹಾಗೂ ಇನ್ನಿತರ ವಿವರಗಳು ಬಹಿರಂಗವಾಗಿಲ್ಲ. ಆತ ಏಕಾಂಗಿಯಾಗಿ ಕೃತ್ಯವನ್ನು ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದು ತಾನು ಗ್ರಾಝ್ ಗೆ ತೆರಳುತ್ತಿದ್ದೇನೆ ಎಂದು ಆಸ್ಟ್ರಿಯಾ ಆಂತರಿಕ ಭದ್ರತಾ ಸಚಿವ ಗೆರ್ಹಾರ್ಡ್ ಕಾರ್ನೆರ್ ಹೇಳಿದ್ದಾರೆ.
“ಶಾಲೆಯಲ್ಲಿ ಬಾರಿ ಗುಂಡಿನ ಸದ್ದು ಕೇಳಿಸುತ್ತಿದೆ ಎಂದು ನಾವು ದೂರವಾಣಿ ಕರೆ ಬಂದ ಬೆನ್ನಲ್ಲೇ ನಾವು ಘಟನಾ ಸ್ಥಳಕ್ಕೆ ಧಾವಿಸಿದೆವು. ಬೆಳಗ್ಗೆ 10 ಗಂಟೆಗೆ (ಸ್ಥಳೀಯ ಕಾಲಮಾನ) ಘಟನಾ ಸ್ಥಳಕ್ಕೆ ಪೊಲೀಸ್ ಪಡೆಗಳನ್ನು ನಾವು ರವಾನಿಸಿದೆವು. ಸ್ಥಳದಲ್ಲಿ ಏನು ನಡೆಯಿತು ಎಂಬುದನ್ನು ಅವಲೋಕಿಸುವ ಕೆಲಸವನ್ನು ಪೊಲೀಸರು ಮಾಡುತ್ತಿದ್ದಾರೆ. ಈ ಸಂಬಂಧ ತನಿಖೆ ಪ್ರಾರಂಭವಾಗಿದೆ” ಎಂದು ಪೊಲೀಸ್ ವಕ್ತಾರ ಸಬ್ರಿ ಯೋರ್ಗುನ್ ತಿಳಿಸಿದ್ದಾರೆ.
ಗ್ರಾಝ್ ನಗರವು ಆಸ್ಟ್ರಿಯಾದ ರಾಜಧಾನಿಯಾದ ವಿಯೆನ್ನಾದ ನೈರುತ್ಯ ದಿಕ್ಕಿನಿಂದ ಅಂದಾಜು 200 ಕಿಮೀ ದೂರವಿದೆ. ಈ ನಗರವು ಆಸ್ಟ್ರಿಯಾದ ಎರಡನೆ ಅತಿ ದೊಡ್ಡ ನಗರವಾಗಿದೆ. ಆಸ್ಟ್ರಿಯಾದಲ್ಲಿ ಕಟ್ಟುನಿಟ್ಟಿನ ಬಂದೂಕು ನಿಯಂತ್ರಣ ಕಾಯ್ದೆ ಜಾರಿಯಲ್ಲಿದೆ. ಇಲ್ಲಿ ಬಂದೂಕು ಪರವಾನಗಿ ಪಡೆಯಬೇಕಿದ್ದರೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಯೂರೋಪ್ ಖಂಡದಲ್ಲೇ ಆಸ್ಟ್ರಿಯಾದಲ್ಲಿ ಅತಿ ಹೆಚ್ಚು ಮಂದಿ ಬಂದೂಕು ಮಾಲಕತ್ವ ಹೊಂದಿದ್ದಾರೆ. ಪ್ರತಿ 100 ಜನರ ಪೈಕಿ ಅಂದಾಜು 30 ಮಂದಿ ಬಂದೂಕು ಪರವಾನಗಿ ಹೊಂದಿದ್ದಾರೆ ಎಂದು Small Arms Survey ತಿಳಿಸಿದೆ.