Australia | ಯಹೂದಿ ಹಬ್ಬ ಹನುಕ್ಕಾ ಆಚರಣೆ ವೇಳೆ ಸಿಡ್ನಿಯ ಬೋಂಡಿ ಬೀಚ್ ನಲ್ಲಿ ಭೀಕರ ಗುಂಡಿನ ದಾಳಿ; ಕನಿಷ್ಠ 10 ಮಂದಿ ಮೃತ್ಯು, ಇಬ್ಬರು ಶೂಟರ್ ಗಳು ವಶಕ್ಕೆ

Photo: NDTV
ಸಿಡ್ನಿ, ಡಿ. 14: ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್ ನಲ್ಲಿ ಯಹೂದಿ ಸಮುದಾಯದ ಎಂಟು ದಿನಗಳ ಹಬ್ಬವಾದ ಹನುಕ್ಕಾ ಆಚರಣೆ ಆರಂಭವಾಗುತ್ತಿದ್ದ ವೇಳೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಕನಿಷ್ಠ 10 ಮಂದಿ ಮೃತಪಟ್ಟಿದ್ದಾರೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.
ಸ್ಥಳೀಯ ಕಾಲಮಾನ ಸಂಜೆ 6.30ರ ನಂತರ ಬೀಚ್ ಪ್ರದೇಶದಲ್ಲಿ ಇಬ್ಬರು ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಹನುಕ್ಕಾ ಹಬ್ಬದ ಮೊದಲ ರಾತ್ರಿ ಆಚರಣೆಗೆ ಸಂಬಂಧಿಸಿದ ‘ಚಾನುಕಾ ಬೈ ದಿ ಸೀ’ ಕಾರ್ಯಕ್ರಮಕ್ಕಾಗಿ ನೂರಾರು ಜನರು ಬೀಚ್ ನಲ್ಲಿ ಸೇರಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ದಾಳಿಯ ವೇಳೆ ಮಕ್ಕಳು ಮತ್ತು ವೃದ್ಧರನ್ನು ಗುರಿಯಾಗಿಸಿ ಸುಮಾರು 50 ಗುಂಡುಗಳು ಹಾರಿಸಲಾಗಿತ್ತು ಎನ್ನಲಾಗಿದೆ. ಗಾಯಾಳುಗಳಿಗೆ ಸಾರ್ವಜನಿಕರು ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ಹಾಗೂ ಸಿಪಿಆರ್ ನೀಡುತ್ತಿರುವ ದೃಶ್ಯಗಳು ಕಂಡುಬಂದಿವೆ.
ಭಾರತೀಯ ಕಾಲಮಾನ ಮಧ್ಯಾಹ್ನ 2.17ರ ಸುಮಾರಿಗೆ ನ್ಯೂ ಸೌತ್ ವೇಲ್ಸ್ ಪೊಲೀಸರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬೋಂಡಿ ಬೀಚ್ ನಲ್ಲಿ ಗುಂಡಿನ ದಾಳಿಯ ಬಗ್ಗೆ ತಿಳಿಸಿ, ಸ್ಥಳದಲ್ಲಿರುವವರು ಸುರಕ್ಷಿತ ಆಶ್ರಯ ಪಡೆಯುವಂತೆ ಎಚ್ಚರಿಕೆ ನೀಡಿದ್ದರು. ಬಳಿಕ ಪೊಲೀಸರು ಇಬ್ಬರು ಶೂಟರ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಆ ಪ್ರದೇಶದಲ್ಲಿ ಪೊಲೀಸ್ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿದ ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್, “ಬೋಂಡಿಯಲ್ಲಿನ ದೃಶ್ಯಗಳು ಅತ್ಯಂತ ಆಘಾತಕಾರಿಯಾಗಿದೆ. ಪೊಲೀಸರು ಮತ್ತು ತುರ್ತು ಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ,” ಎಂದು ಹೇಳಿದ್ದಾರೆ. NSW ಸರ್ಕಾರ ಮತ್ತು ಫೆಡರಲ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಅವರು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕಿ ಸುಸಾನ್ ಲೇ ಕೂಡ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. “ನಾವೆಲ್ಲರೂ ಪ್ರೀತಿಸುವ ಬೋಂಡಿಯಂತಹ ಸ್ಥಳದಲ್ಲಿ ದ್ವೇಷಪೂರಿತ ಹಿಂಸಾಚಾರ ನಡೆದಿದೆ. ಶಾಂತಿ ಮತ್ತು ಭರವಸೆಯ ಸಂಕೇತವಾಗಿದ್ದ ಹನುಕ್ಕಾ ಆಚರಣೆಯ ವೇಳೆ ಈ ದಾಳಿ ಸಂಭವಿಸಿರುವುದು ಆತಂತಕಾರಿಯಾಗಿದೆ,” ಎಂದು ಹೇಳಿದ್ದಾರೆ.







