ಉಕ್ರೇನ್ ನಗರದ ಮೇಲೆ ರಶ್ಯದ ದಾಳಿ; 11 ಮಂದಿ ಸಾವು, 20 ಮಂದಿಗೆ ಗಾಯ
ಸಾಂದರ್ಭಿಕ ಚಿತ್ರ | PC : NDTV
ಕೀವ್ : ದಕ್ಷಿಣ ಉಕ್ರೇನ್ನ ಚೆರ್ನಿಗಿವ್ ನಗರದ ಮೇಲೆ ಬುಧವಾರ ರಶ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದು ಇತರ 20 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
ಅಮೆರಿಕ ಮತ್ತು ಪಾಶ್ಚಿಮಾತ್ಯರ ಶಸ್ತ್ರಾಸ್ತ್ರ ನೆರವು ಪೂರೈಕೆಯಲ್ಲಿ ವಿಳಂಬವಾಗುತ್ತಿರುವುದರಿಂದ ಉಕ್ರೇನ್ನ ವಾಯುರಕ್ಷಣಾ ವ್ಯವಸ್ಥೆಗೆ ತೀವ್ರ ಹಿನ್ನಡೆಯಾಗಿದೆ ಎಂಬ ವರದಿಗಳ ನಡುವೆಯೇ ರಶ್ಯದ ದಾಳಿ ನಡೆದಿದೆ.
ಉಕ್ರೇನ್ನಲ್ಲಿ ವಾಯುರಕ್ಷಣಾ ವ್ಯವಸ್ಥೆಯ ಕೊರತೆ ಇರುವುದರಿಂದ ರಶ್ಯದ ಮೂರು ಕ್ಷಿಪಣಿಗಳನ್ನು ತುಂಡರಿಸಲು ಸಾಧ್ಯವಾಗಲಿಲ್ಲ. ಪಾಶ್ಚಿಮಾತ್ಯರ ನೆರವು ಸಕಾಲದಲ್ಲಿ ದೊರಕಿದ್ದರೆ ಈ ದುರಂತ ಸಂಭವಿಸುತ್ತಿರಲಿಲ್ಲ. ನಾಶಗೊಂಡ ಕಟ್ಟಡಗಳ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಶಂಕೆಯಿದೆ. ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
ಬೆಲಾರಸ್ನ ಗಡಿಗೆ ಸನಿಹದಲ್ಲಿರುವ ಚೆರ್ನಿಗಿವ್ ಪ್ರಾಂತದ ಸ್ವಲ್ಪ ಭಾಗವನ್ನು ರಶ್ಯ ಈ ಹಿಂದೆ ಆಕ್ರಮಿಸಿಕೊಂಡಿತ್ತು. ಉಕ್ರೇನ್ನಿಂದ ತೀವ್ರ ಪ್ರತಿರೋಧದ ಬಳಿಕ ಅಲ್ಲಿಂದ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿದೆ. ಪ್ರಾಂತದ ಹಲವು ಬಹುಮಹಡಿ ಕಟ್ಟಡಗಳು , ನಾಗರಿಕ ಮೂಲಸೌಕರ್ಯಕ್ಕೆ ಹಾನಿಯಾಗಿದೆ. ಹಲವು ವಾಹನಗಳು ನಾಶಗೊಂಡಿವೆ ಎಂದು ಪ್ರಾಂತದ ಗವರ್ನರ್ ವ್ಯಚೆಸ್ಲಾವ್ ಚಾವುಸ್ ಹೇಳಿದ್ದಾರೆ.