ಅಮೆರಿಕ: ಮಿಚಿಗನ್ನ ವಾಲ್ಮಾರ್ಟ್ ಮಳಿಗೆಯಲ್ಲಿ 11 ಮಂದಿಗೆ ಇರಿತ; ಶಂಕಿತನ ಬಂಧನ

PC: x.com/detroitnews
ಮಿಚಿಗನ್: ಅಮೆರಿಕದ ಉತ್ತರ ಮಿಚಿಗನ್ ನ ಟ್ರಾವರ್ಸ್ ಸಿಟಿಯಲ್ಲಿ ಶನಿವಾರ ಆಗಂತುಕನೊಬ್ಬ 11 ಮಂದಿಗೆ ಇರಿದ ಪ್ರಕರಣ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ. ಆಡಳಿತ ಯಂತ್ರ ತುರ್ತಾಗಿ ಸ್ಪಂದಿಸಿದ್ದು, ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸರು ಹೇಳಿದ್ದಾರೆ.
ಮಿಚಿಗನ್ ರಾಜ್ಯ ಪೊಲೀಸರು ವಾಲ್ಮಾರ್ಟ್ ಮಳಿಗೆಯಲ್ಲಿ ಘಟನೆ ನಡೆದಿರುವುದನ್ನು ದೃಢಪಡಿಸಿದ್ದು, ವಿವರಗಳು ಲಭ್ಯವಾಗಬೇಕಿದೆ. ಶಂಕಿತನನ್ನು ವಶಕ್ಕೆ ಪಡೆಯಲಾಗಿದ್ದು, ಸದ್ಯಕ್ಕೆ ವಿವರಗಳು ಸೀಮಿತವಾಗಿವೆ ಎಂದು ಮಿಚಿಗನ್ ಪೊಲೀಸ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ತನಿಖೆ ನಡೆಯುತ್ತಿರುವುದರಿಂದ ಈ ಪ್ರದೇಶದಲ್ಲಿ ಅಡ್ಡಾಡದಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಟ್ರಾವರ್ಸ್ ಸಿಟಿಯ ಮನ್ಸನ್ ಮೆಡಿಕಲ್ ಸೆಂಟರ್ ನಲ್ಲಿ 11 ಮಂದಿ ಸಂತ್ರಸ್ತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮನ್ಸನ್ ಹೆಲ್ತ್ ಕೇರ್ನ ಮುಖ್ಯ ಸಂವಹನಾಧಿಕಾರಿ ಮೇಗನ್ ಬ್ರೌನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅವರಿಗೆ ಆದ ಗಾಯಗಳ ಗಂಭೀರತೆ ಅಂದಾಜಿಸಲಾಗುತ್ತಿದ್ದು, ನಿರ್ದಿಷ್ಟ ವಿವರಗಳನ್ನು ನೀಡುವಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆಸ್ಪತ್ರೆ ಕೂಡಾ 11 ಮಂದಿ ಘಟನೆಯಲ್ಲಿ ಗಾಯಗೊಂಡಿರುವುದನ್ನು ಸ್ಪಷ್ಟಪಡಿಸಿದ್ದು, ಸೂಕ್ತ ಸಮಯದಲ್ಲಿ ಹೆಚ್ಚಿನ ವಿವರ ನೀಡುವುದಾಗಿ ಹೇಳಿದೆ. ಕಾನೂನು ಜಾರಿ ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ವಾಲ್ಮಾರ್ಟ್ ವಕ್ತಾರ ಜೋ ಪೆನ್ನಿಂಗ್ಟನ್ ಹೇಳಿದ್ದಾರೆ.







