ಅಮೆರಿಕ |1921ರ ಟುಲ್ಸಾ ಜನಾಂಗೀಯ ಹತ್ಯಾಕಾಂಡದಲ್ಲಿ ಬದುಕುಳಿದ 111ರ ವೃದ್ಧೆ ವಿಧಿವಶ

ವಿಯೊಲಾ ಫ್ಲೆಚರ್ | Photo Credit : AP
ವಾಶಿಂಗ್ಟನ್,ನ.25: ಟುಲ್ಸಾ ಜನಾಂಗೀಯ ಹತ್ಯಾಕಾಂಡದಲ್ಲಿ ಬದುಕುಳಿದಿರುವ ಅತ್ಯಂತ ಹಿರಿಯ ವಯಸ್ಸಿನ ಮಹಿಳೆ ವಿಯೊಲಾ ಫ್ಲೆಚರ್ ಅವರು ಸೋಮವಾರ ನಿಧನರಾದರು. ಅವರಿಗೆ 111 ವರ್ಷ ವಯಸ್ಸಾಗಿತ್ತು. 1921ರ ಮೇ 31ರಂದು ಅಮೆರಿಕದಲ್ಲಿ ಕರಿಯಜನಾಂಗೀಯರ ಬಾಹುಳ್ಯದ ಪ್ರದೇಶವಾದ ಗ್ರೀನ್ವುಡ್ನ ಟುಲ್ಸಾ ಎಂಬಲ್ಲಿ ಬಿಳಿಜನಾಂಗೀಯರ ಗುಂಪೊಂದು 300ಕ್ಕೂ ಅಧಿಕ ಅಫ್ರಿಕನ್ ಮೂಲದ ಕರಿಯಜನಾಂಗೀಯರನ್ನು ಹತ್ಯೆಗೈದಿತ್ತು.
ಅಮೆರಿಕ ಇತಿಹಾಸದ ಕರಾಳ ಅಧ್ಯಾಯಗಳಲ್ಲೊಂದೆನಿಸಿರುವ ಟುಲ್ಸಾ ಹತ್ಯಾಕಾಂಡ ನಡೆದ ಫ್ಲೆಚರ್ ಪುಟ್ಟ ಬಾಲಕಿಯಾಗಿದ್ದಳು.
ಬಿಳಿಜನಾಂಗೀಯ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಕರಿಯಜನಾಂಗದ ಯುವಕನೊಬ್ಬನನ್ನು ಸಮರ್ಥಿಸಲು ಆಫ್ರಿಕನ್ ಅಮೆರಿಕನ್ನರ ಗುಂಪೊಂದು ನ್ಯಾಯಾಲಯಕ್ಕೆ ತೆರಳುತ್ತಿದ್ದಾಗ ಬಿಳಿಯ ಜನಾಂಗೀಯರ ಗುಂಪೊಂದು ಗುಂಡಿನ ದಾಳಿ ನಡೆಸಿತ್ತು
ಬಿಳಿಯ ಜನಾಂಗೀಯ ಗುಂಪುಗಳು ಗ್ರೀನ್ವುಡ್ನಲ್ಲಿರುವ ಕರಿಯಜನಾಂಗೀಯರ ಮನೆಗಳಿಗೆ ಬೆಂಕಿ ಹಚ್ಚಿದ್ದರಿಂದ ಸಾವಿರಾರು ಜನರು ನಿರಾಶ್ರಿತರಾಗಿದ್ದರು. ಈ ಹತ್ಯಾಕಾಂಡ ನಡೆದ ಬಳಿಕ ಫ್ಲೆಟರ್ ಪ್ರಾಥಮಿಕ ಶಾಲಾ ಶಿಕ್ಷಣವನ್ನು ತೊರೆದಿದ್ದಳು. ತರುವಾಯ ಆಕೆ ಬಿಳಿಯ ಜನಾಂಗೀಯ ಕುಟುಂಬಗಳಲ್ಲಿ ಮನೆಗೆಲಸ ಮಾಡಿಕೊಂಡಿದ್ದಳು.
ಎಎಫ್ಪಿ ಸುದ್ದಿಸಂಸ್ಥೆಗೆ ಕೆಲವು ವರ್ಷಗಳ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಆಕೆ ಟುಲ್ಸಾ ಜನಾಂಗೀಯ ಹತ್ಯಾಕಾಂಡದ ಭೀಕರತೆಯನ್ನು ವಿವರಿಸಿದ್ದಳು. ‘‘ ಕರಿಯ ಜನಾಂಗೀಯರ ಮೇಲೆ ಗುಂಡಿನ ದಾಳಿ ನಡೆದುದನ್ನು, ಅವರ ದೇಹಗಳು ರಸ್ತೆಗಳಲ್ಲಿ ಚದುರಿಬಿದ್ದಿರುವುದನ್ನು, ಅವರ ಅಂಗಡಿಮುಂಗಟ್ಟೆಗಳನ್ನು ಸುಟ್ಟುಹಾಕಿರುವ ದೃಶ್ಯಗಳು ಈಗಲೂ ನನಗೆ ಕಾಣುತ್ತಿದೆ’’ ಎಂದು ಮಾರ್ಮಿಕವಾಗಿ ಹೇಳಿದ್ದರು.







