Pakistan| ಇಸ್ಲಾಮಾಬಾದ್ನಲ್ಲಿ ಆತ್ಮಾಹುತಿ ಬಾಂಬ್ ದಾಳಿ: ಕನಿಷ್ಠ 15 ಮಂದಿ ಮೃತ್ಯು , 80 ಜನರಿಗೆ ಗಾಯ

Photo| indiatoday
ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ಶೆಹಝಾದ್ ಟೌನ್ ಪ್ರದೇಶದ ತರ್ಲೈ ಇಮಾಮ್ ಬರ್ಗಾದಲ್ಲಿ ಶುಕ್ರವಾರದ ಪ್ರಾರ್ಥನೆ ವೇಳೆ ಸಂಭವಿಸಿದ ಭೀಕರ ಸ್ಫೋಟದಲ್ಲಿ ಕನಿಷ್ಠ 15 ಜನರು ಮೃತಪಟ್ಟು, ಸುಮಾರು 80 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಾರ್ಥನೆಗಾಗಿ ಜನರು ಸೇರಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದ್ದು, ಪ್ರಾಥಮಿಕ ತನಿಖೆಯ ನಂತರ ಅಧಿಕಾರಿಗಳು ಇದನ್ನು ಆತ್ಮಹತ್ಯಾ ಬಾಂಬ್ ದಾಳಿ ಎಂದು ದೃಢಪಡಿಸಿದ್ದಾರೆ.
ಸ್ಫೋಟದ ತಕ್ಷಣ ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆ ಆರಂಭಿಸಿದವು. ಗಾಯಗೊಂಡವರನ್ನು ತುರ್ತು ಚಿಕಿತ್ಸೆಗೆ ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಘಟನೆಯ ಬಳಿಕ ಪ್ರದೇಶದಲ್ಲಿ ಗೊಂದಲ ಮತ್ತು ಆತಂಕದ ವಾತಾವರಣ ಕಂಡುಬಂದಿತು.
“ನಾವು ಹಲವಾರು ಜನರನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಿದ್ದೇವೆ. ಈ ಹೊತ್ತಿಗೆ ಎಷ್ಟು ಮಂದಿ ಮೃತಪಟ್ಟಿದ್ದಾರೆಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ, ಆದರೆ ಜನರು ಮೃತಪಟ್ಟಿದ್ದಾರೆ ಎಂಬುದು ಸತ್ಯ,” ಎಂದು ಪೊಲೀಸ್ ಅಧಿಕಾರಿಯೊಬ್ಬರು ರಾಯಿಟರ್ಸ್ಗೆ ತಿಳಿಸಿದ್ದಾರೆ.
ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್ ವರದಿಯ ಪ್ರಕಾರ, ಪಾಕಿಸ್ತಾನ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (PIMS) ವಕ್ತಾರರು ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿರುವುದನ್ನು ದೃಢಪಡಿಸಿದ್ದಾರೆ.
ಈ ಸ್ಫೋಟವು ರಾಜಧಾನಿಯಲ್ಲಿ ಆರು ತಿಂಗಳೊಳಗೆ ಸಂಭವಿಸಿದ ಎರಡನೇ ಪ್ರಮುಖ ಸ್ಫೋಟವಾಗಿದೆ. ಕಳೆದ ನವೆಂಬರ್ನಲ್ಲಿ ಇಸ್ಲಾಮಾಬಾದ್ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಕಾರು ಸ್ಫೋಟದಲ್ಲಿ ಕನಿಷ್ಠ 12 ಜನರು ಮೃತಪಟ್ಟು, 25ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆ ಘಟನೆಯನ್ನೂ ಅಧಿಕಾರಿಗಳು ಆತ್ಮಾಹುತಿ ದಾಳಿ ಎಂದು ಗುರುತಿಸಿದ್ದರು.






