ಅಮೆರಿಕ-ಇರಾನ್ ಶಾಂತಿ ಒಪ್ಪಂದದ ಬಳಿಕವೂ ಲೆಬನಾನ್ ಮೇಲೆ ಮುಂದುವರಿದ ಇಸ್ರೇಲ್ ದಾಳಿ : 16 ಮಂದಿ ಮೃತ್ಯು

Photo credit: PTI
ಬೈರುತ್: ಅಮೆರಿಕ ಮತ್ತು ಇರಾನ್ ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕವೂ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಮುಂದುವರಿದಿದೆ. ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಲೆಬನಾನ್ ನಲ್ಲಿ 16 ಮಂದಿ ಮೃತಪಟ್ಟಿದ್ದಾರೆ ಎಂದು aljazeera.com ವರದಿ ಮಾಡಿದೆ.
ಶುಕ್ರವಾರ ಪ್ರಕಟಣೆ ನೀಡಿರುವ ಐಡಿಎಫ್, ಕಳೆದ ರಾತ್ರಿ ದಕ್ಷಿಣ ಲೆಬನಾನ್ನಲ್ಲಿ ವಿವಿಧ ಗುರಿಗಳ ಮೇಲೆ ದಾಳಿ ನಡೆಸಿರುವುದಾಗಿ ತಿಳಿಸಿದೆ.
ಲೆಬನಾನ್ನ National News Agency ಪ್ರಕಾರ, ಕೆಫರ್ ಟೆಬ್ನಿಟ್ ಪಟ್ಟಣದ ಬಳಿ ಇಸ್ರೇಲ್ ಡ್ರೋನ್ ದಾಳಿ ಕಾರಿಗೆ ಅಪ್ಪಳಿಸಿ ಇಬ್ಬರು ಮೃತಪಟ್ಟಿದ್ದಾರೆ. ಝಬಾದಿನ್ನಲ್ಲಿ ಇಸ್ರೇಲ್ ನಡೆಸಿದ ಪ್ರತ್ಯೇಕ ದಾಳಿಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಅಮೆರಿಕ–ಇರಾನ್ ಒಪ್ಪಂದದ ಭಾಗವಾಗಿ, ಲೆಬನಾನ್ ಮೇಲಿನ ದಾಳಿಗಳನ್ನು ನಿಲ್ಲಿಸಬೇಕು ಹಾಗೂ ಆಕ್ರಮಿತ ಪ್ರದೇಶಗಳಿಂದ ತನ್ನ ಎಲ್ಲಾ ಸೇನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಅಮೆರಿಕಾ ಸೂಚಿಸಿದರೂ ಇಸ್ರೇಲ್ ಈ ದಾಳಿಯನ್ನು ನಡೆಸಿದೆ.
ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷ ಸೇರಿದಂತೆ ಸಂಪೂರ್ಣ ಕದನ ವಿರಾಮ ಜಾರಿಯಾಗಬೇಕು ಎಂದು ಅಮೆರಿಕ ನಿರೀಕ್ಷಿಸುತ್ತದೆ ಎಂದು ಟ್ರಂಪ್ ಈ ಮೊದಲು ಹೇಳಿದ್ದರು.
ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ ಮತ್ತು ಕದನ ವಿರಾಮದ ಭವಿಷ್ಯದ ಬಗ್ಗೆ ಆತಂಕ ಮೂಡಿಸಿದೆ. ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಸಂಘರ್ಷ ಮುಂದುವರಿದರೆ, ಈ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ನಡೆಯುತ್ತಿರುವ ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ.






