183 ಮಿಲಿಯನ್ ಇಮೇಲ್ ಪಾಸ್ವರ್ಡ್ಗಳು ಸೋರಿಕೆ : ವರದಿ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಆನ್ಲೈನ್ನಲ್ಲಿ ಭಾರಿ ದತ್ತಾಂಶ ಸೋರಿಕೆ ನಡೆದಿರುವುದು ಬೆಳಕಿಗೆ ಬಂದಿದೆ. ಲಕ್ಷಾಂತರ ಇಮೇಲ್ ಖಾತೆಗಳು ಮತ್ತು ಅವುಗಳ ಪಾಸ್ವರ್ಡ್ಗಳು ಬಹಿರಂಗಗೊಂಡಿವೆ. ಸುಮಾರು 183 ಮಿಲಿಯನ್(18.3 ಕೋಟಿ) ಇಮೇಲ್ ಖಾತೆಗಳು ಮತ್ತು ಅವುಗಳ ಪಾಸ್ವರ್ಡ್ಗಳು ಆನ್ಲೈನ್ನಲ್ಲಿ ಸೋರಿಕೆಯಾಗಿವೆ ಎಂದು ವರದಿಯಾಗಿದೆ.
Have I Been Pwned (HIBP) ವೆಬ್ಸೈಟ್ ನಲ್ಲಿ ನಿಮ್ಮ ಇಮೇಲ್ ಸೋರಿಕೆಯಾಗಿದೆಯೇ ಎಂದು ನೀವು ಪರಿಶೀಲಿಸಬಹುದು. ನಿಮ್ಮ Gmail ಖಾತೆಯನ್ನು ಸುರಕ್ಷಿತವಾಗಿರಿಸಲು ಸ್ಟ್ರಾಂಗ್ ಪಾಸ್ವರ್ಡ್ಗಳನ್ನು ರಚಿಸಿ ಮತ್ತು Googleನ ಭದ್ರತಾ ಪರಿಶೀಲನೆ ಸೇವೆಯನ್ನು ಬಳಸಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ನಡೆದ ಅತಿದೊಡ್ಡ ಇಮೇಲ್ ಪಾಸ್ವರ್ಡ್ ಲೀಕ್ಗಳಲ್ಲಿ ಇದನ್ನು ಒಂದೆಂದು ಹೇಳಲಾಗಿದೆ. ಆದರೆ ಭಯಪಡುವ ಅಗತ್ಯವಿಲ್ಲ. ಗೂಗಲ್ನ ಸರ್ವರ್ಗಳು ಹ್ಯಾಕ್ ಆಗಿಲ್ಲ. ವರದಿ ಪ್ರಕಾರ, ಈ ಮಾಹಿತಿಯನ್ನು ಮಾಲ್ವೇರ್ ಮೂಲಕ ಸಂಗ್ರಹಿಸಲಾಗಿದೆ. ಅಂದರೆ, ಬಳಕೆದಾರರ ವೈಯಕ್ತಿಕ ಕಂಪ್ಯೂಟರ್ಗಳು ಮತ್ತು ಬ್ರೌಸರ್ಗಳಿಂದ ಪಾಸ್ವರ್ಡ್ಗಳನ್ನು ಕಳ್ಳತನ ಮಾಡಲಾಗಿದೆ ಎಂದು ವರದಿಯಾಗಿದೆ.
ʼಹ್ಯಾವ್ ಐ ಬೀನ್ ಪವ್ನ್ಡ್ʼ ಅನ್ನು ನಡೆಸುವ ಸೈಬರ್ ಭದ್ರತಾ ತಜ್ಞ ಟ್ರಾಯ್ ಹಂಟ್ ಪ್ರಕಾರ, "ಸಿಂಥಿಯಂಟ್ ಸ್ಟೀಲರ್ ಲಾಗ್ ಥ್ರೆಟ್ ಡೇಟಾ" ಎಂದು ಸೇರಿಸಲಾಗಿದೆ. ಮಾಹಿತಿಯನ್ನು ಒಂದೇ ಹ್ಯಾಕ್ ಮಾಡಿದ ವೆಬ್ಸೈಟ್ ಅಥವಾ ಕಂಪೆನಿಯಿಂದ ಪಡೆಯಲಾಗಿಲ್ಲ, ಜಗತ್ತಿನಾದ್ಯಂತ ಹಲವಾರು ಮಾಲ್ವೇರ್ ಸಾಧನಗಳಿಂದ ಸಂಗ್ರಹಿಸಲಾಗಿದೆ.
ನಿಮ್ಮ Gmail ಖಾತೆಯು ಹ್ಯಾಕ್ ಆಗಿದೆಯೇ ಎಂದು ಪರಿಶೀಲಿಸುವುದು ಹೇಗೆ?
https://haveibeenpwned.com/ಗೆ ಭೇಟಿ ನೀಡಿ ಮತ್ತು ನಿಮ್ಮ Gmail ID ಅನ್ನು ನಮೂದಿಸಿ. ನಿಮ್ಮ ವಿವರಗಳು ಸೋರಿಕೆಯಾಗಿದ್ದರೆ, ವೆಬ್ಸೈಟ್ ನಿಮಗೆ ತಿಳಿಸುತ್ತದೆ.
ನಿಮ್ಮ ಜಿಮೇಲ್ ಖಾತೆ ಹ್ಯಾಕ್ ಆಗಿದೆ ಎಂದು ಅನುಮಾನ ಕಂಡು ಬಂದರೆ ಮೊದಲು ಗೂಗಲ್ನ ಸೆಕ್ಯುರಿಟಿ ಚೆಕ್ಅಪ್ ವಿಧಾನವನ್ನು ಬಳಸಬೇಕು. ಇದು ಅಪರಿಚಿತ ಸಾಧನಗಳು ಅಥವಾ ಅನಾಮಧೇಯ ಆಪ್ಗಳು ನಿಮ್ಮ ಖಾತೆಗೆ ಪ್ರವೇಶ ಹೊಂದಿದ್ದರೆ ಅವನ್ನು ಪತ್ತೆಹಚ್ಚುತ್ತದೆ. ಸಂಶಯಾಸ್ಪದವಾಗಿ ಕಂಡು ಬಂದರೆ ಅದನ್ನು ತಕ್ಷಣ ತೆಗೆದುಹಾಕಬೇಕು.
ಬಳಕೆದಾರರಿಗೆ ಎಸ್ಎಂಎಸ್ ಆಧಾರಿತ ದೃಢೀಕರಣದ ಬದಲು ಹಾರ್ಡ್ವೇರ್ ಕೀ ಅಥವಾ ಪಾಸ್ಕೀ ಬಳಸಿ ಎರಡು ಹಂತದ ಭದ್ರತೆ (2-step verification) ಸಕ್ರಿಯಗೊಳಿಸಲು ಸಲಹೆ ನೀಡಲಾಗಿದೆ. Mashable ವರದಿ ಪ್ರಕಾರ, ಪಾಸ್ಕೀ ಬಳಕೆ ಹೆಚ್ಚು ಭದ್ರವಾಗಿದ್ದು, ಹ್ಯಾಕರ್ಗಳಿಗೆ ನಿಮ್ಮ ಪಾಸ್ವರ್ಡ್ ಗೊತ್ತಿದ್ದರೂ ನಿಮ್ಮ ಖಾತೆಗೆ ಪ್ರವೇಶಿಸುವುದು ಸುಲಭವಲ್ಲ.







