ಯೆಮನ್ ನಲ್ಲಿ ಎರಡು ವಾರಗಳಿಂದ ಸಿಲುಕಿದ್ದ 19 ಭಾರತೀಯ ನಾವಿಕರ ರಕ್ಷಣೆ
‘ಎಲ್ಲರೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳುತ್ತಿದ್ದಾರೆ’: ರಾಯಭಾರಿ ಕಚೇರಿ ಮಾಹಿತಿ

Photo: India Today
ದುಬೈ: ಸಂಘರ್ಷಪೀಡಿತ ಯೆಮನ್ ನಲ್ಲಿ ಕಳೆದ ಎರಡು ವಾರಗಳಿಂದ ಸಿಲುಕಿಕೊಂಡಿದ್ದ 19 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಹೋಡೆದಾ ಮತ್ತು ಸನಾ ನಗರಗಳಲ್ಲಿ ಸಿಲುಕಿದ್ದ ಎಲ್ಲ ನಾವಿಕರೂ ಆರೋಗ್ಯವಾಗಿದ್ದು, ತಾಯ್ನಾಡಿಗೆ ಮರಳುತ್ತಿದ್ದಾರೆ ಎಂದು ಯೆಮನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ರವಿವಾರ ತಿಳಿಸಿದೆ.
‘ಎಲ್ಲ ನಾವಿಕರೂ ಸುರಕ್ಷಿತವಾಗಿದ್ದಾರೆ. ಉತ್ತಮ ಆರೋಗ್ಯದಿಂದಿದ್ದು, ಭಾರತಕ್ಕೆ ಮರಳುತ್ತಿದ್ದಾರೆ. ಭಾರತೀಯ ಪ್ರಜೆಗಳ ಸುರಕ್ಷಿತ ಸ್ಥಳಾಂತರಕ್ಕೆ ಸಹಕರಿಸಿದ ಮತ್ತು ಬೆಂಬಲ ನೀಡಿದ ಎಲ್ಲರಿಗೂ ರಾಯಭಾರ ಕಚೇರಿಯು ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತದೆ’ ಎಂದು ‘ಎಕ್ಸ್’ ಜಾಲತಾಣದಲ್ಲಿ ಪ್ರಕಟಿಸಿದೆ.
ಯೆಮನ್ ಕರಾವಳಿಯ ಸಮೀಪ ಯಾನವೊಂದರಲ್ಲಿ ಪ್ರಯಾಣಿಸುತ್ತಿದ್ದ 14 ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಭಾರತ ತಿಳಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.
ಅಕ್ಟೋಬರ್ 23ರಂದು ಹೋಡೆಡಾ ಸಮೀಪ ಯಾನವೊಂದರಲ್ಲಿ 14 ಭಾರತೀಯರು ಇದ್ದಾರೆ ಮತ್ತು ಅವರೆಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ರಾಯಭಾರಿ ಕಚೇರಿ ತಿಳಿಸಿತ್ತು.
ಆದರೆ, ಈಗ ಸ್ಥಳಾಂತರಿಸಲಾದ 19 ನಾವಿಕರಲ್ಲಿ ಈ ಹಿಂದೆ ಯಾನದಲ್ಲಿದ್ದ 14 ಭಾರತೀಯರೂ ಸೇರಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಕೆಲವು ಅರಬ್ ಮಾಧ್ಯಮಗಳ ವರದಿಗಳ ಪ್ರಕಾರ, ಯೆಮನ್ ನ ಹೂತಿ ಗುಂಪಿನ ವಕ್ತಾರ ಯಾಹ್ಯಾ ಸರೀ, ಕೆಂಪು ಸಮುದ್ರದಲ್ಲಿ ಯೆಮನ್ ಕರಾವಳಿಯ ಸಮೀಪವಿರುವ ಯುಖಾರ್ ದ್ವೀಪದ ಬಳಿ ಸೌದಿ ಪಡೆಗಳು ಭಾರತೀಯ ಯಾನದ ಮೇಲೆ ದಾಳಿ ನಡೆಸಿದ್ದವು ಎಂದು ಹೇಳಿದ್ದರು. ಆ ಯಾನದಲ್ಲಿದ್ದ 14 ಭಾರತೀಯರನ್ನು ಹೂತಿ ಪಡೆಗಳು ರಕ್ಷಿಸಿವೆ ಎಂದೂ ಅವರು ತಿಳಿಸಿದ್ದರು.
ಸೌದಿ–ಹೂತಿ ಸಂಘರ್ಷ ಮತ್ತೆ ತೀವ್ರ
ಸೌದಿ ಅರೇಬಿಯ ಮತ್ತು ಯೆಮನ್ನ ಹೂತಿಗಳ ನಡುವಿನ ಸಂಘರ್ಷ ಇತ್ತೀಚಿನ ದಿನಗಳಲ್ಲಿ ಮತ್ತೆ ಉಲ್ಬಣಗೊಂಡಿದೆ. ಎರಡೂ ಕಡೆಯಿಂದ ದಾಳಿ ಮತ್ತು ಪ್ರತಿದಾಳಿಗಳು ವರದಿಯಾಗಿವೆ.
ಹೂತಿಗಳು ಉಡಾಯಿಸಿದ ಕ್ಷಿಪಣಿಗಳು ಮತ್ತು ಡ್ರೋನ್ ಗಳನ್ನು ಸೌದಿ ಅರೇಬಿಯ ತಡೆದಿದೆ. ಮತ್ತೊಂದೆಡೆ, ಸೌದಿ ನೇತೃತ್ವದ ಮೈತ್ರಿ ಪಡೆಗಳು ಯೆಮನ್ನಲ್ಲಿ ವೈಮಾನಿಕ ದಾಳಿಗಳನ್ನು ನಡೆಸಿವೆ.
2022ರ ಕದನ ವಿರಾಮ ಒಪ್ಪಂದದ ಬಳಿಕ ಈ ಪ್ರದೇಶದಲ್ಲಿ ತುಲನಾತ್ಮಕ ಶಾಂತಿ ನೆಲೆಸಿತ್ತು. ಆದರೆ, ಈಗ ಮತ್ತೆ ಸಂಘರ್ಷ ತೀವ್ರಗೊಂಡಿರುವುದು ದೊಡ್ಡ ಮಟ್ಟದ ಯುದ್ಧದ ಭೀತಿಯನ್ನು ಹುಟ್ಟುಹಾಕಿದೆ.






