ಅಮೆರಿಕದಲ್ಲಿ ಚುನಾವಣಾ ಅಕ್ರಮ ಆರೋಪ: ಭಾರತೀಯರು ಸೇರಿದಂತೆ 28 ಗ್ರೀನ್ ಕಾರ್ಡ್ ಹೊಂದಿರುವವರ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ (AI Generated)
ವಾಷಿಂಗ್ಟನ್: ಅಮೆರಿಕದ 2024ರ ನವೆಂಬರ್ನಲ್ಲಿ ನಡೆದ ಚುನಾವಣೆಯಲ್ಲಿ ಮತದಾರರಾಗಿ ನೋಂದಾಯಿಸಿಕೊಂಡು ಮತ ಚಲಾಯಿಸಿದ ಆರೋಪದ ಮೇಲೆ ಕ್ಯಾಲಿಫೋರ್ನಿಯಾದಲ್ಲಿ 28 ಮಂದಿ ಗ್ರೀನ್ ಕಾರ್ಡ್ ಹೊಂದಿರುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಪೈಕಿ ಇಬ್ಬರು ಭಾರತೀಯರು ಸೇರಿದ್ದಾರೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆಯ ಹೇಳಿಕೆಯನ್ನು ಉಲ್ಲೇಖಿಸಿ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ವರದಿ ಮಾಡಿದೆ.
ಅಮನ್ದೀಪ್ ಕೌರ್ (30) ಮತ್ತು ಕಮಲೇಶ್ ಶಾ (67) ಆರೋಪ ಎದುರಿಸುತ್ತಿರುವ ಭಾರತೀಯರು. ಅಮೆರಿಕದ ಪ್ರಜೆಗಳಲ್ಲದಿದ್ದರೂ ಅಕ್ರಮವಾಗಿ ಮತದಾರರಾಗಿ ನೋಂದಾಯಿಸಿಕೊಂಡು ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಅವರ ವಿರುದ್ಧ ಆರೋಪಿಸಲಾಗಿದೆ.
ಚುನಾವಣಾ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ನ್ಯಾಯಾಂಗ ಇಲಾಖೆ ಆರಂಭಿಸಿರುವ ‘ಆಪರೇಷನ್ ಪ್ರೊಟೆಕ್ಟ್ ದ ವೋಟ್’ ಕಾರ್ಯಾಚರಣೆಯಡಿ ಕ್ಯಾಲಿಫೋರ್ನಿಯಾದಾದ್ಯಂತ ಮುಂಜಾನೆ ನಡೆಸಿದ ದಾಳಿಗಳಲ್ಲಿ 11 ಮಂದಿ ಬಂಧಿತರಾಗಿದ್ದು, ಬಂಧಿತರ ಪೈಕಿ ಈ ಇಬ್ಬರು ಇದ್ದಾರೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.
ನ್ಯಾಯಾಂಗ ಇಲಾಖೆಯ ಪ್ರಕಾರ, ಸ್ಯಾಕ್ರಮೆಂಟೊ ನಿವಾಸಿ ಕಮಲೇಶ್ ಶಾ ಅವರು 2024ರ ನವೆಂಬರ್ನಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯ ದಿನವೇ ಮತದಾರರಾಗಿ ನೋಂದಾಯಿಸಿಕೊಂಡು ಮತ ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ರಾಂಚೊ ಪಾಲೋಸ್ ವರ್ಡೆಸ್ನಲ್ಲಿ ವಾಸಿಸುವ ಹಾಗೂ ಅಮೆರಿಕದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿರುವ ಅಮನ್ದೀಪ್ ಕೌರ್, 2022ರ ಡಿಸೆಂಬರ್ನಲ್ಲಿ ಮತದಾರರಾಗಿ ನೋಂದಾಯಿಸಿಕೊಂಡು 2024ರ ಚುನಾವಣೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಕರಣ ಎದುರಿಸುತ್ತಿರುವ 28 ವಿದೇಶಿ ಪ್ರಜೆಗಳೂ ಕಾನೂನುಬದ್ಧ ಶಾಶ್ವತ ನಿವಾಸಿಗಳು (ಎಲ್ಪಿಆರ್) ಅಥವಾ ‘ಗ್ರೀನ್ ಕಾರ್ಡ್’ ಹೊಂದಿರುವವರು. ಅಮೆರಿಕದಲ್ಲಿ ಕಾನೂನುಬದ್ಧವಾಗಿ ವಾಸಿಸಲು ಅವರಿಗೆ ಅನುಮತಿಯಿದ್ದರೂ, ಅವರು ಅಮೆರಿಕದ ಪ್ರಜೆಗಳಲ್ಲ. ಹೀಗಾಗಿ ಅಲ್ಲಿನ ಚುನಾವಣೆಗಳಲ್ಲಿ ಮತ ಚಲಾಯಿಸಲು ಅವರಿಗೆ ಅವಕಾಶವಿಲ್ಲ ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.
ಪೌರತ್ವ ಪಡೆಯುವ ಅರ್ಜಿಗಳಲ್ಲಿ ಸುಳ್ಳು ಮಾಹಿತಿ ನೀಡಿರುವುದು ಹಾಗೂ ಕೆಲವು ಪ್ರಕರಣಗಳಲ್ಲಿ ನಕಲಿ ಮತದಾರರ ನೋಂದಣಿ ಮಾಡಿಸಿರುವುದು ಆರೋಪಗಳಲ್ಲಿ ಸೇರಿವೆ. ಇವು ಗಂಭೀರ ಅಪರಾಧಗಳಾಗಿದ್ದು, ಸಾಬೀತಾದರೆ ಗರಿಷ್ಠ ಐದು ವರ್ಷಗಳವರೆಗೆ ಫೆಡರಲ್ ಜೈಲು ಶಿಕ್ಷೆ ವಿಧಿಸಬಹುದು.
ಕ್ಯಾಲಿಫೋರ್ನಿಯಾದ ಚುನಾವಣಾ ಅಧಿಕಾರಿಗಳಿಗೆ ಕಳೆದ ವಾರ ಒದಗಿಸಿದ್ದ, ಅಮೆರಿಕದ ಪ್ರಜೆಗಳಲ್ಲದಿದ್ದರೂ ಮತದಾರರಾಗಿ ನೋಂದಾಯಿಸಿಕೊಂಡಿರುವ ಸಾಧ್ಯತೆಯಿರುವ 20,000ಕ್ಕೂ ಹೆಚ್ಚು ಮಂದಿಯ ಪಟ್ಟಿಯಲ್ಲಿ ಈ 28 ಆರೋಪಿಗಳ ಹೆಸರೂ ಇದೆ ಎಂದು ಹಂಗಾಮಿ ಉಪ ಅಟಾರ್ನಿ ಜನರಲ್ ಟ್ರೆಂಟ್ ಮೆಕ್ಕಾಟರ್ ಲಾಸ್ ಏಂಜಲೀಸ್ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಸೋಮವಾರದ ಪ್ರಕಟಣೆಗೆ ಮುನ್ನ, ಈ ವರ್ಷ ಅಮೆರಿಕದ ನ್ಯಾಯಾಂಗ ಇಲಾಖೆಯು ವಿವಿಧ ರೀತಿಯ ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸುಮಾರು 90 ಮಂದಿಯ ವಿರುದ್ಧ ಆರೋಪಗಳನ್ನು ದಾಖಲಿಸಿತ್ತು. ಇವರಲ್ಲಿ ಅಮೆರಿಕದ ಪ್ರಜೆಗಳಲ್ಲದಿದ್ದರೂ ಮತ ಚಲಾಯಿಸಿದ ಆರೋಪ ಎದುರಿಸುತ್ತಿರುವ 50 ಮಂದಿಯೂ ಸೇರಿದ್ದಾರೆ.






