ಅಮೆರಿಕ, ಜಾರ್ಜಿಯಾದಲ್ಲಿ ಬಿಷ್ಣೋಯ್ ಗ್ಯಾಂಗ್ಗೆ ಸೇರಿದ ಇಬ್ಬರು ದರೋಡೆಕೋರರ ಬಂಧನ

Photo | NDTV
ಹೊಸದಿಲ್ಲಿ: ಭಾರತದ ಇಬ್ಬರು ಮೋಸ್ಟ್ ವಾಂಟೆಡ್ ದರೋಡೆಕೋರರನ್ನು ವಿದೇಶದಲ್ಲಿ ಭಾರತೀಯ ಭದ್ರತಾ ಸಂಸ್ಥೆಗಳು ಬಂಧಿಸಿವೆ. ಹರ್ಯಾಣ ಪೊಲೀಸರ ಸಹಕಾರದೊಂದಿಗೆ ನಡೆದ ಅಂತಾರಾಷ್ಟ್ರೀಯ ಕಾರ್ಯಾಚರಣೆಯಲ್ಲಿ ವೆಂಕಟೇಶ್ ಗರ್ಗ್ ನನ್ನು ಜಾರ್ಜಿಯಾದಲ್ಲಿ ಹಾಗೂ ಭಾನು ರಾಣಾ ಎಂಬಾತನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ರಾಣಾ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದಾನೆ ಎಂಬುದು ಬಹಿರಂಗವಾಗಿದೆ.
ಭಾರತೀಯ ಅಧಿಕಾರಿಗಳು ಈ ಬಂಧನವನ್ನು ಅಂತಾರಾಷ್ಟ್ರೀಯ ಅಪರಾಧ ಜಾಲದ ವಿರುದ್ಧದ ಪ್ರಮುಖ ಯಶಸ್ಸು ಎಂದು ತಿಳಿಸಿದ್ದಾರೆ. ಇಬ್ಬರನ್ನೂ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸುವ ಸಾಧ್ಯತೆ ಇದೆ. ಪ್ರಸ್ತುತ ಭಾರತ ಮೂಲದ ಸುಮಾರು ಎರಡು ಡಜನ್ ನಷ್ಟು ದರೋಡೆಕೋರರು ವಿದೇಶಗಳಲ್ಲಿ ಗೌಪ್ಯವಾಗಿ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹರ್ಯಾಣದ ನಾರಾಯಣಗಢ ಮೂಲದ ವೆಂಕಟೇಶ್ ಗರ್ಗ್ ವಿರುದ್ಧ 10ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದೆ. ಹರ್ಯಾಣ, ರಾಜಸ್ಥಾನ, ದಿಲ್ಲಿ ಸೇರಿದಂತೆ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಯುವಕರನ್ನು ನೇಮಿಸಿ ಈತ ಸುಲಿಗೆ ಜಾಲ ನಡೆಸುತ್ತಿದ್ದ ಎನ್ನಲಾಗಿದೆ.
ಗುರುಗ್ರಾಮ್ ನಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ನಾಯಕನ ಹತ್ಯೆ ಪ್ರಕರಣದ ಬಳಿಕ ಗರ್ಗ್ ಜಾರ್ಜಿಯಾಕ್ಕೆ ಪರಾರಿಯಾಗಿದ್ದ. ವಿದೇಶದಲ್ಲಿ ನೆಲೆಸಿರುವ ಕುಖ್ಯಾತ ದರೋಡೆಕೋರ ಕಪಿಲ್ ಸಾಂಗ್ವಾನ್ ಜೊತೆಗೂಡಿ ಸುಲಿಗೆ ಚಟುವಟಿಕೆ ನಡೆಸುತ್ತಿದ್ದ ಎಂದು ತನಿಖಾ ಸಂಸ್ಥೆಗಳು ಹೇಳಿವೆ. ಕಳೆದ ಅಕ್ಟೋಬರ್ನಲ್ಲಿ ಸಾಂಗ್ವಾನ್ ಗುಂಪಿನ ನಾಲ್ವರು ಶೂಟರ್ ಗಳನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು.
ಅಮೆರಿಕದಲ್ಲಿ ವಾಸಿಸುತ್ತಿದ್ದ ಭಾನು ರಾಣಾ, ಬಿಷ್ಣೋಯ್ ಗ್ಯಾಂಗ್ ನ ಆಪ್ತ ಸಹಚರನಾಗಿದ್ದು, ಪಂಜಾಬ್, ಹರ್ಯಾಣ ಮತ್ತು ದಿಲ್ಲಿಯ ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಎಂದು ತಿಳಿದು ಬಂದಿದೆ. ಮೂಲತಃ ಕರ್ನಾಲ್ ನಿವಾಸಿಯಾದ ರಾಣಾಗೆ ಪಂಜಾಬ್ನಲ್ಲಿ ನಡೆದ ಗ್ರೆನೇಡ್ ದಾಳಿಯಲ್ಲಿ ಕೈವಾಡವಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.







