ಭೀಕರ ರಸ್ತೆ ಅಪಘಾತ: 20 ಮಂದಿ ವಜ್ರದ ಗಣಿ ಕಾರ್ಮಿಕರು ಮೃತ್ಯು

Photo: twitter.com/ArezwothePS
ಜೊಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾದಲ್ಲಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತವೊಂದರಲ್ಲಿ ದೈತ್ಯ ವಜ್ರ ಗಣಿಗಾರಿಕಾ ಕಂಪನಿ ಡೆ ಬೀರ್ಸ್ನ ಕನಿಷ್ಠ 20 ಮಂದಿ ಉದ್ಯೋಗಿಗಳು ಮೃತಪಟ್ಟಿದ್ದಾರೆ.
ದೇಶದಲ್ಲೇ ಅತಿದೊಡ್ಡ ವಜ್ರದ ಗಣಿ ಎನಿಸಿದ ವೆನೇಶಿಯಾ ಗಣಿಯಿಂದ ಸಿಬ್ಬಂದಿಯನ್ನು ಕರೆ ತರುತ್ತಿದ್ದ ಬಸ್ಸು, ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ ಎಂದು ಲಿಂಪೊಪೊ ಪ್ರಾಂತ್ಯದ ಸಾರಿಗೆ ಅಧಿಕಾರಿಗಳು ಹೇಳಿದ್ದಾರೆ.
ಸಂಜೆ 4 ಗಂಟೆಯ ಸುಮಾರಿಗೆ ಗಣಿಯಿಂದ ಸುಮಾರು 25 ಕಿಲೋಮೀಟರ್ ದೂರದ, ಜಿಂಬಾಬ್ವೆ ಗಡಿಯಲ್ಲಿರುವ ಮುಸಿಯಾನ್ ಗ್ರಾಮದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಹಿರಿಯ ಅಧಿಕಾರಿ ಒಂಗನಿ ಚೌಕೆ ವಿವರಿಸಿದ್ದಾರೆ.
ಅಪಘಾತಕ್ಕೆ ಕಾರಣ ತಿಳಿದು ಬಂದಿಲ್ಲ. ಇಡೀ ಆಫ್ರಿಕಾ ಖಂಡದಲ್ಲೇ ಅತ್ಯಂತ ಅಭಿವೃದ್ಧಿ ಹೊಂದಿದ ರಸ್ತೆ ಸಂಪರ್ಕ ಜಾಲ ದಕ್ಷಿಣ ಆಫ್ರಿಕಾದಲ್ಲಿದ್ದರೂ, ರಸ್ತೆ ಸುರಕ್ಷತೆ ಈ ದೇಶದಲ್ಲಿ ಅತ್ಯಂತ ಕಳಪೆ ಮಟ್ಟದ್ದಾಗಿದೆ. ಬೋಟ್ಸುವಾನ ಮತ್ತು ಜಿಂಬಾಬ್ವೆ ಜತೆಗಿನ ಗಡಿ ಪ್ರದೇಶದಲ್ಲಿರುವ ವೆನೆಶಿಯಾ ಗಣಿಯನ್ನು ಕಳೆದ 30 ವರ್ಷಗಳಿಂದ ಡೆ ಬೀರ್ಸ್ ಉದ್ಯಮ ಸಮೂಹ ನಿರ್ವಹಿಸುತ್ತಾ ಬಂದಿದೆ.
ವಾರ್ಷಿಕವಾಗಿ ವಿಶ್ವದ ಒಟ್ಟು ವಜ್ರ ಉತ್ಪಾದನೆಯಲ್ಲಿ ಶೇಕಡ 40ರಷ್ಟು ಪಾಲು ಹೊಂದಿರುವ ಕಂಪನಿ 4300ಕ್ಕು ಹೆಚ್ಚು ಸಿಬ್ಬಂದಿಯನ್ನು ಹೊಂದಿದೆ. ಇದು ದೇಶದ ಅತಿದೊಡ್ಡ ವಜ್ರದ ಗಣಿಯಾಗಿದ್ದು, ಡೆ ಬೀರ್ಸ್ ಈ ಗಣಿಯಲ್ಲಿ 200 ಕೋಟಿ ಡಾಲರ್ ಹೂಡಿಕೆ ಮಾಡಿದೆ.